ದಾವಣಗೆರೆ:
ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅಯೋಗ್ಯ ಸಿನಿಮಾಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ನಾಯಕ ನಟ ನೀನಾಸಂ ಸತೀಶ್ ತಿಳಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 280 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ‘ಅಯೋಗ್ಯ’ ಸಿನಿಮಾಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದು, ಗಲ್ಲಾಪೆಟ್ಟಿಗೆ ಕಲೆಕ್ಷನ್ ಉತ್ತಮವಾಗಿದ್ದು, ‘ಲವ್ ಯೂ ಮಂಡ್ಯಾ’ ಸಿನಿಮಾಕ್ಕೆ 50 ದಿನದಲ್ಲಿ ಆಗಿದ್ದ ಕಲೆಕ್ಷನ್ ಅಯೋಗ್ಯ ಚಿತ್ರಕ್ಕೆ ಕೇವಲ 25 ದಿನಗಳಲ್ಲಾಗಿದೆ ಎಂದು ಹೇಳಿದರು.
ಸ್ಯಾಂಡಲ್ವುಡ್ ಕಥೆಗಳು ದಕ್ಷಿಣ ಭಾರತದಲ್ಲಿ ನಂ.1 ಸ್ಥಾನಕ್ಕೇರಿವೆ. ಬ್ಲಾಕ್ ಬಾಸ್ಟರ್ ಸಿನಿಮಾಗಳು ಕನ್ನಡದಲ್ಲಿ ಬರುತ್ತಿವೆ. ಆದರೆ, ಅನ್ಯ ಭಾಷಿಗರಿಗೆ ಪ್ರೇಕ್ಷಕ ಮಣೆ ಹಾಕುತ್ತಿರುವುದು ಮತ್ತು ಇತರೆ ಭಾಷೆಯ ನಾಯಕ ನಟರ ಕಟೌಟ್ಗೆ ಇಲ್ಲಿನವರು ಲಕ್ಷಾಂತರ ರೂ. ಮೌಲ್ಯದ ಹಾರಹಾಕಿ ಸಂಭ್ರಮಿಸುತ್ತಿರುವುದು ಅತ್ಯಂತ ದುರಂತವಾಗಿದೆ. ಕನ್ನಡ ಪ್ರೇಕ್ಷಕರು ಮೊದಲು ಪ್ರೇಕ್ಷಕರು ಕನ್ನಡ ಸಿನಿಮಾಗಳನ್ನು ಪ್ರೀತಿಸಬೇಕೆಂದು ಮನವಿ ಮಾಡಿದರು.
ಕನ್ನಡ ಸಿನಿಮಾಗಳು ಬೆಳೆಯಲು ಕೇವಲ ವಾಣಿಜ್ಯ ಮಂಡಳಿ ಮತ್ತು ನಟರು ಒಂದಾದರೇ ಸಾಲದು. ಪ್ರೇಕ್ಷಕರ ಸಹಕಾರವೂ ಅತ್ಯವಶ್ಯವಾಗಿದೆ. ಆದ್ದರಿಂದ ಪ್ರೇಕ್ಷಕರೂ ಕನ್ನಡ ಚಿತ್ರಗಳನ್ನು ವೀಕ್ಷಿಸಿ ಬೆಂಬಲಿಸಬೇಕೆಂದು ಕೋರಿದರು.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಮಹೇಶ್ ಇದ್ದರು.
