ಹರಿಹರ:
ತ್ರೇತಾಯುಗದಿಂದ ಹಿಡಿದು ಇಂದಿನ ಕಲಿಯುಗದ ವರೆಗೂ ಮಹಿಳೆಯರು ನಿರಂತರ ಶೋಷಣೆ, ದಬ್ಬಾಳಿಕೆ ಹಾಗೂ ದೌರ್ಜನ್ಯಕ್ಕೆ ಒಳಗಾಗುತ್ತಲೇ ಬರುತ್ತಿದ್ದಾರೆಂದು ಖ್ಯಾತ ಲೇಖಕಿ ನಾಡೋಜ ಪ್ರೊ.ಕಮಲಾ ಹಂಪನಾ ವಿಷಾಧ ವ್ಯಕ್ತಪಡಿಸಿದರು.
ತಾಲ್ಲೂಕಿನ ರಾಜನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ನಡೆಯುತ್ತಿರುವ ಮಹರ್ಷಿ ವಾಲ್ಮೀಕಿ ಜಾತ್ರೆ, ಶ್ರೀಮಠದ 21ನೇ ವಾರ್ಷಿಕೋತ್ಸವ ಹಾಗೂ ಶ್ರೀಪ್ರಸನ್ನಾನಂದಪುರಿ ಮಹಾಸ್ವಾಮಿಗಳವರ 11ನೇ ಪಟ್ಟಾಧಿಕಾರ ಮಹೋತ್ಸವದಲ್ಲಿ ಶುಕ್ರವಾರ ನಡೆದ ರಾಜ್ಯ ಮಟ್ಟದ ವಾಲ್ಮೀಕಿ ಮಹಿಳಾ ಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತ್ರೇತಾಯುಗದಲ್ಲಿ ಸೀತೆಯಾಗಲಿ, ದ್ವಾಪರ ಯುಗದಲ್ಲಿ ದ್ರೌಪದಿ ಆಗಲಿ ಸುಖಕರವಾಗಿರಲಿಲ್ಲ. ಸೀತೆ ಹದಿನಾಲ್ಕು ವರ್ಷ ವನವಾಸದಲ್ಲಿದ್ದರೆ, ದ್ರೌಪದಿಗೆ ಐದು ಜನ ಗಂಡಂದಿರಿದ್ದರೂ ಸಹ ಸುಖವಾಗಿರಲಿಲ್ಲ. ಅವಳೂ ಸಹ ಅಜ್ಞಾತವಾಸದಲ್ಲಿ ಇರಬೇಕಾಯಿತು. ಅದರಂತೆ ಕಲಿಯುಗದಲ್ಲಿಯೂ ಸಹ ಮಹಿಳೆಯರು ಸುಖಕರವಾಗಿಲ್ಲ. ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಲೇ ಇವೆ ಎಂದು ಹೇಳಿದರು.
ವೇದಗಳ ಕಾಲದಿಂದಲೂ ಮಹಿಳೆ ಪ್ರಭಾವಶಾಲಿಯಾಗಿದ್ದಳೆಂಬ ಬಗ್ಗೆ ವೇದಗಳಲ್ಲಿ ಉಲ್ಲೇಖಗಳಿವೆ. ಎಲ್ಲಿ ಮಹಿಳೆ ಪೂಜಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ನೆಲೆಸುತ್ತವೆಂಬ ನಂಬಿಕೆ ಇದೆ. ಇಲ್ಲಿ ನೆರೆದಿರುವ ಮಹಿಳೆಯರನ್ನು ನೋಡಿದರೆ ನೀವೆಲ್ಲಾ ಶಕ್ತಿ ಸ್ವರೂಪಿಣಿಯರಾಗಿರುವಂತೆ ನನಗೆ ಭಾಸವಾಗುತ್ತಿದೆ ಎಂದರು.
ನಮ್ಮ ಕಷ್ಟ ಅನಾನುಕೂಲದ ಮಧ್ಯದಲ್ಲಿಯೇ ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ವಿದ್ಯೆ ಎನ್ನುವ ಜ್ಞಾನ ದೊರೆತರೆ, ಮಕ್ಕಳು ತಾವೂ ಬೆಳೆಯುವುದರ ಜೊತೆಗೆ ಸಮಾಜವನ್ನು ಬೆಳೆಸುತ್ತಾರೆ. ಹೆಣ್ಣು ಮಕ್ಕಳನ್ನು ಮನೆಯಲ್ಲಿಯೇ ಕೂರಿಸದೆ ಒಳ್ಳೆಯ ಕೆಲಸಕ್ಕೆ ಹೊರಗಡೆ ಕಳುಹಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ, ನಾನು ಸಾವಿರಾರು ಪ್ರಶಸ್ತಿಗಳನ್ನು ಗಳಿಸಿದ್ದರೂ ಸಹ ಇಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಅನೇಕ ಸರ್ಕಾರಗಳು ಬಂದರೂ ನನ್ನ ಜೀವನಕ್ಕೆ ಯಾವುದೇ ಅನುಕೂಲತೆಗಳನ್ನು ಭದ್ರತೆಯನ್ನು ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದೆ. ಒಮ್ಮೆ ಹುಲಿ ಕಲ್ಲಿಗೆ ಹೋಗಿದ್ದಾಗ ಗಿಡಗಳನ್ನು ಬೆಳೆಸುವ ಸಂಕಲ್ಪ ಮಾಡಿಕೊಂಡು ಕೇವಲ ಹತ್ತು ಸಸಿಗಳಿಂದ ಪ್ರಾರಂಭಿಸಿ, ಈಗ ದೊಡ್ಡ ವನವಾಗಿ ಬೆಳೆಸುತ್ತಿದ್ದೇನೆ. ಆ ದೇವರು ಸಮೃದ್ಧ ಮಳೆ-ಬೆಳೆ ನೀಡಿ, ಕೆರೆ ಬಾವಿಗಳು ತುಂಬಿಕೊಳ್ಳಲಿ. ಆ ಗಂಗಮ್ಮ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.
ನನಗೆ ಮಕ್ಕಳಿಲ್ಲ, ಗಿಡಗಳೇ ನನ್ನ ಮಕ್ಕಳೆಂದು ನಾನು ಜೋಪಾನ ಮಾಡುತ್ತಿದ್ದೇನೆ. ಈಗ ಇತ್ತೀಚಿನ ದಿನಗಳಲ್ಲಿ ಒಬ್ಬನನ್ನು ದತ್ತು ಮಗನನ್ನಾಗಿ ಸ್ವೀಕಾರ ಮಾಡಿದ್ದು, ಆತ ನನ್ನನ್ನು ಚೆನ್ನಾಗಿ ಸಲಹಿಕೊಂಡು ಹೋಗುತ್ತಿದ್ದಾನೆ ಎಂದರು.ಶ್ರೀಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಪುಷ್ಪಾ ಲಕ್ಷ್ಮಣಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಶಾಂತಲಾ ರಾಜಣ್ಣ, ಡಾ.ಕೊತ್ಲಮ್ಮ, ಮಂಜುಳಾ ಕರಿಬಸಪ್ಪ ಮತ್ತಿತರರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ಅನುಸೂಯಾ ಕೆಂಚನಹಳ್ಳಿ, ಡಾ.ನಾಗರತ್ನಮ್ಮ, ಜಯಶ್ರೀ ಗುಡ್ಡೆಕಾಯ, ಕಮಲಾ ಮರಿಸ್ವಾಮಿ, ಶ್ರೀಮತಿ ರತ್ನಾ ರಂಗಯ್ಯ, ಟಿವಿ ತಾರಾ, ನಾಗರತ್ನಮ್ಮ, ಜಿಪಂ ಸದಸ್ಯೆ ಅರ್ಚನಾ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ