ಬಳ್ಳಾರಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತಿಸೂಕ್ಷ್ಮ ಸಮುದಾಯಗಳಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಒದಗಿಸದೇ ಹೋದರೆ ಉಗ್ರವಾದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಅಲೆಮಾರಿ ಗುಡಾರ-ಗುಡಿಸಲು ನಿವಾಸಿಗಳ ಕಲ್ಯಾಣ ಸಂಘದ ಜಿಲ್ಲಾಧ್ಯಕ್ಷ ಸಣ್ಣ ಮಾರೆಪ್ಪ ಎಚ್ಚರಿಕೆ ನೀಡಿದ್ದಾರೆ.
ಇಂದು ಸಂಘದ ಸದಸ್ಯರು ಮತ್ತು ಸಮುದಾಯಗಳ ಮುಖಂಡರೊಂದಿಗೆ ಆಗಮಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಮನವಿ ನೀಡಿದ ಅವರು, ಪರಿಶಿಷ್ಟ ಜಾತಿ, ಅಲೆಮಾರಿ, ಅರೆ ಅಲೆಮಾರಿ, ಸೂಕ್ಷ್ಮ, ಅತಿ ಸೂಕ್ಷ್ಮ ಸಮುದಾಯಗಳ ಬಳ್ಳಾರಿ ಜಿಲ್ಲಾ ಅನುಷ್ಠಾನ ಸಮಿತಿಗೆ ಅಲೆಮಾರಿ ಸಮುದಾಯಗಳ ಅನುಮತಿ ಇಲ್ಲದೇ ಕೆಲ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಇದರಿಂದ ನಿಜವಾದ ಮೂಲ ಅಲೆಮಾರಿಗಳಿಗೆ ಸೌಕರ್ಯಗಳು ಸಿಗದೇ ಅನ್ಯಾಯವಾಗಿದೆ. ಈ ಕುರಿತು ಅನೇಕ ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 2015-16ನೇ ಸಾಲಿನಿಂದ ಅನುಷ್ಠಾನ ಸಮಿತಿಯಲ್ಲಿರುವ ಸದಸ್ಯರು ಹಿಂದುಳಿದ ಅಲೆಮಾರಿಗಳ ಸಮುದಾಯಗಳ ಕುಂದುಕೊರತೆಗಳನ್ನು ಪರಿಶೀಲಿಸಿಲ್ಲ. ಯಾವುದೇ ಸಮಸ್ಯೆಗಳಿಗೂ ಸ್ಪಂದಿಸಿಲ್ಲ. ಪ್ರತಿಯೊಂದು ತಾಲೂಕಿನಲ್ಲೂ ಅಲೆಮಾರಿಗಳ ಪರಿಸ್ಥಿತಿ ಹೀನಾಯವಾಗಿದೆ. ಜಿಲ್ಲಾಧಿಕಾರಿಗಳು ಇನ್ನಾದರೂ ಮೂಲ ಅಲೆಮಾರಿಗಳನ್ನು ಗುರುತಿಸಿ ಜಿಲ್ಲಾ ಅನುಷ್ಠಾನ ಸಮಿತಿಗೆ ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಶಿಫಾರಸು ಮಾಡಲು ಡಿಸಿ ಗೆ ಮನವಿ:
ಜಿಲ್ಲಾಧಿಕಾರಿಗಳು ಕಳೆದ ವರ್ಷ ಡಿಸೆಂಬರ್ 20ರಂದು ಹಿಂದುಳಿದ ಎಲ್ಲ ಅಲೆಮಾರಿ ಸಮುದಾಯಗಳ ಸಭೆ ಕರೆದು ಚರ್ಚಿಸಿದ್ದರು. ಮತ್ತೆ ಸಭೆ ನಡೆಯಲೇ ಇಲ್ಲ. ಸುಮಾರು 3 ಸಾವಿರ ಅರ್ಜಿಗಳು ಸರ್ಕಾರದ ಯೋಜನೆಯಡಿ ಸವಲತ್ತು ಪಡೆಯಲು ನಿರೀಕ್ಷಿಸುತ್ತಿವೆ. ನೇರ ಸಾಲ, ವಸತಿ ಸೌಕರ್ಯ, ಜಮೀನು, ವಿವಿಧ ಉದ್ಯೋಗ, ಕೌಶಲ್ಯ, ಕರಕುಶಲ ತರಬೇತಿ ಸೇರಿದಂತೆ ವಿವಿಧ ಸೌಕರ್ಯಗಳಿಗೆ ಸಂಬಂಧಿಸಿದ ಅರ್ಜಿಗಳು ಧೂಳು ಹಿಡಿದಿವೆ. ಅಂಬೇಡ್ಕರ್ ನಿಗಮ, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ಪಂಗಡ ಹಾಗೂ ದೇವರಾಜ್ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳಿಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಈ ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಸರ್ಕಾರದ ಯೋಜನೆಯ ಪಡೆಯಲು ಅಲೆಮಾರಿಗಳಿಗೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿದರು.
ಕೂಡಲೇ ಸಭೆ ನಡೆಯಲಿ:
ಈ ಕುರಿತಂತೆ ಜಿಲ್ಲಾಧಿಕಾರಿಗಳು ಹಿಂದುಳಿದ ಸಮುದಾಯಗಳ ಎಲ್ಲ ಅಲೆಮಾರಿ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯನ್ನು ಶೀಘ್ರವೇ ಕರೆಯಬೇಕೆಂದು ಒತ್ತಾಯಿಸಿರುವ ಅವರು, ತಾಂತ್ರಿಕ ಜಗತ್ತಿನಲ್ಲಿ ಅಲೆಮಾರಿಗಳು ಇಂದಿಗೂ ಅತಾಂತ್ರಿಕ, ಅಭದ್ರತೆ ಬದುಕು ಸಾಗಿಸುತ್ತಿದ್ದಾರೆ. ಕೆಳಮಟ್ಟದ ಸಮುದಾಯಗಳು ಅನಾಥ ಪ್ರಜ್ಞೆಯಿಂದ ನರಳುತ್ತಿವೆ. ಸಂವಿಧಾನಬದ್ಧ ಹಕ್ಕುಗಳಿಂದ ವಂಚಿತವಾಗಿವೆ. ಬಹುಸಂಸ್ಕøತಿಗಳ ಸ್ಮøತಿಯೊಂದಿಗೆ ಇತರೆ ಸಮುದಾಯಗಳಿಗೆ ಪ್ರೇರಣೆಯಾಗಿರುವ ಈ ಅಲೆಮಾರಿ ಸಮುದಾಯಗಳ ಜನರು ನಾಡಿನ ಸಂಸ್ಕøತಿಗೆ ಬಹು ದೊಡ್ಡ ಕೊಡುಗೆ ನೀಡುತ್ತಿದ್ದಾರೆ. ಸುಡುಗಾಡು ಸಿದ್ಧ, ಬಡ್ಗ ಜಂಗಮ, ಹಂಡಿ ಜೋಗಿ, ಚೆನ್ನದಾಸರು, ಶಿಂದೊಳ್ಳು, ಡೊಂಗ್ರಿಗ್ರಾಸಿ, ಹಕ್ಕಿಪಿಕ್ಕಿ, ಗೋಸಂಗಿ, ಶಿಳ್ಳೆಕ್ಯಾತ ಇತರೆ ಸಮುದಾಯಗಳು ಎಲ್ಲ ಕ್ಷೇತ್ರಗಳಲ್ಲೂ ತೀರಾ ಹಿಂದುಳಿದಿವೆ. ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸಲು ಈ ಸಮುದಾಯಗಳಿಗೆ ಸರ್ಕಾರದ ಎಲ್ಲ ಸವಲತ್ತುಗಳನ್ನು ನೀಡಬೇಕಿದೆ ಎಂದು ತಿಳಿಸಿದರು.
ಅನುದಾನ ಸದ್ಬಳಕೆ ಮಾಡಲಿ:
2015-16ನೇ ಸಾಲಿನ ಆಯವ್ಯಯ ಘೋಷಣೆಯಾಗಿರುವಂತೆ ಇದುವರೆಗೂ ಸರ್ಕಾರ ಸಮುದಾಯಗಳ ಅಭಿವೃದ್ದಿಗೆ 200 ಕೋಟಿ ರೂ.ಅನುದಾನ ಮೀಸಲಿಟ್ಟಿದೆ. ಅಧಿಕಾರಿಗಳು ಮೂಲ ಅಲೆಮಾರಿಗಳಿಗೆ ಅನುದಾನ ಒದಗಿಸದೇ ಇರುವುದರಿಂದ ಹಾಗೆಯೇ ಉಳಿದಿದೆ. ಇಂದಿಗೂ ಗುಡಿಸಲು, ಟೆಂಟುಗಳಲ್ಲಿ ಅನಕ್ಷರತೆಯಿಂದ ನರಳುತ್ತಿರುವ ಸಮುದಾಯಗಳಿಗೆ ಅನುದಾನ ನೀಡಬೇಕು. ಪುನರ್ ವಸತಿ, ಅಲೆಮಾರಿಗಳ ಆಶ್ರಯ ಕಾಲೋನಿಗಳ ಅಭಿವೃದ್ಧಿ, ಬೀದಿ ದೀಪ ಅಳವಡಿಕೆ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯ ಒದಗಿಸಬೇಕು. ಇಲ್ಲದೇ ಹೋದರೆ ಎಲ್ಲ ಸಮುದಾಯಗಳು ಒಗ್ಗೂಡಿ ಅನಿವಾರ್ಯವಾಗಿ ಉಗ್ರವಾದ ಹೋರಾಟಕ್ಕೆ ಅಣಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಹೆಚ್.ಪಿ. ಶಿಕಾರಿರಾಮು, ಶೈಲಾ ಸೀತಾರಾಮ ಪಾಚಂಗೆ, ಸುಬ್ಬು ಸಿಳ್ಳೆಕ್ಯಾತ, ಕಿನ್ನರಿ ಶೇಖಪ್ಪ, ಡೊಂಗ್ರಿಗ್ರಾಸಿ ಮಾಧವರಾವ್, ಚೆನ್ನದಾಸರ ಗಿರೀಶ, ಹಂಡಿಜೋಗಿ ಹನುಮಂತಪ್ಪ, ಸಿಂದೋಳ್ ರಾಹುಲ್ ನಾಗಪ್ಪ, ಹಕ್ಕಿಪಿಕ್ಕಿ ಹೆಚ್ ಪಿ ಶ್ರೀಕಾಂತ, ಬುಡ್ಗಜಂಗಮ ಜಂಬಣ್ಣ, ಸಿಳ್ಳೆಕ್ಯಾತ ಅಗ್ನಿ, ವೈ ಚಿನ್ನಪ್ಪ, ಜಿ.ಬಾಬು, ಮಾಂತೇಶ್, ಹನುಮಂತಪ್ಪ, ಎಬಿ ಜಂಬಣ್ಣ ಇನ್ನಿತರರು ಇದ್ದರು.