ವಿಶೇಷ ರೋಜಗಾರ್ ದಿವಸ್ ಸದುಪಯೋಗಕ್ಕೆ ಜಿಪಂ ಸಿಇಒ ರಾಜೇಂದ್ರ ಕರೆ

ಬಳ್ಳಾರಿ:

  ಕೂಲಿಕಾರರು ಗುಳೆಹೋಗದಂತೆ ಅವರವರ ಗ್ರಾಮಗಳಲ್ಲಿ ಕೂಲಿಕೆಲಸ ನೀಡುವ ಸದುದ್ದೇಶದಿಂದ ಜಿಲ್ಲೆಯಾದ್ಯಂತ ವಿಶೇಷ ಗ್ರಾಮಸಭೆಗಳನ್ನು ಆಯೋಜಿಸಿ ವಿಶೇಷ ರೋಜಗಾರ್ ದಿವಸ್ ಆಚರಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ಕೂಲಿಕಾರ್ಮಿಕರು ಪಡೆದುಕೊಳ್ಳಬೇಕು ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.
ಬಳ್ಳಾರಿ ಸಮೀಪದ ಕಪ್ಪಗಲ್ಲು ಗ್ರಾಪಂ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಆಧಾರ್ ತಿದ್ದುಪಡಿ ಕೇಂದ್ರ ಉದ್ಘಾಟಿಸಿ ನರೇಗಾ ಯೋಜನೆ ಅಡಿ ಕೂಲಿಕಾರ್ಮಿಕರಿಗೆ ಜಾಗೃತಿ ಮೂಡಿಸುವ ಉದ್ದೇಶದ ವಿಶೇಷ ರೋಜಗಾರ್ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

 

  ಕಪಗಲ್ ಗ್ರಾಮ ಸೇರಿದಂತೆ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಕೂಲಿಕಾರರು ಮನರೇಗಾ ಯೋಜನೆ ಅಡಿ ಕೆಲಸ ಮಾಡಬಹುದು.ಕೂಲಿ ಕೇಳಿದವರಿಗೆ ಜಾಬ್ ಕಾರ್ಡ್ ಇರದಿದ್ದರೇ ಹೊಸದಾಗಿ ಉದ್ಯೋಗ ಚೀಟಿಗಳನ್ನು ನೀಡಲಾಗುತ್ತದೆ. ನಿಗದಿತ ಅವಧಿಯಲ್ಲಿ ದಿನವೊಂದಕ್ಕೆ 249ರೂ. ಕೂಲಿ ಪಾವತಿಸಲಾಗುತ್ತಿದ್ದು, ಇದರ ಪ್ರಯೋಜನವನ್ನು ಕೂಲಿಕಾರರು ಪಡೆದುಕೊಳ್ಳಬೇಕು ಎಂದರು.
ಬಡರೈತರುಗಳು ತಮ್ಮ ಕೃಷಿ ಜಮೀನಿನಲ್ಲಿ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಬಹುದು. ದನದದೊಡ್ಡಿ, ಕುರಿದೊಡ್ಡಿಗಳ ನಿರ್ಮಣ ಮಾಡಿಕೊಳ್ಳಬಹುದು. ಸಮುದಾಯ ಆಧಾರಿತ ಕಾಮಗಾರಿಗಳಾದ ಚೆಕ್‍ಡ್ಯಾಂಗಳ ನಿರ್ಮಾಣ, ಶಾಲಾ ಕಂಪೌಂಡ್, ಆಟದ ಮೈದಾನ, ಶಾಲಾಕೈತೋಟಗಳಂತ ಕಾಮಗಾರಿಗಳನ್ನು ಸಹ ಅನುಮೋದಿಸಲಾಗಿದ್ದು, ಕೆರೆ-ಕಾಲುವೆಗಳ ಹೂಳೆತ್ತುವ ಕಾಮಗಾರಿಗಳು ಇಲ್ಲದ ಕಡೆ ಇಂತಹ ಕಾಮಗಾರಿಗಳಲ್ಲಿ ಕೂಲಿಕಾರರು ಕೆಲಸ ಮಾಡಬಹುದು ಎಂದು ಅವರು ವಿವರಿಸಿದರು.

  ಮನರೇಗಾ ಅಡಿ ಒಂದು ಕುಟುಂಬಕ್ಕೆ ನೂರು ದಿನಗಳ ಕಾಲ ಉದ್ಯೋಗ ನೀಡಲಾಗುತ್ತಿದ್ದು, ಬೆಂಗಳೂರು-ಗೋವಾ ಸೇರಿದಂತೆ ಮಹಾನಗರಗಳಿಗೆ ಗುಳೆಹೋಗದೇ ತಮ್ಮ ಗ್ರಾಮದಲ್ಲಿಯೇ ಉಳಿದು ಬಡವರು, ಕೂಲಿಕಾರರು ಜೀವನಾಧಾರ ಕಂಡುಕೊಳ್ಳಬಹುದು ಎಂದು ಸಮಾರಂಭದಲ್ಲಿ ನೆರೆದಿದ್ದ ಕೂಲಿಕಾರರಿಗೆ ವಿವರಿಸಿದರು.
ತಮ್ಮ ಗ್ರಾಪಂ ಆವರಣದಲ್ಲಿ ಸ್ಥಾಪಿಸಲಾಗಿರುವ ಆಧಾರ್ ತಿದ್ದುಪಡಿ ಕೇಂದ್ರದ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಕಪಗಲ್ ಗ್ರಾಪಂ ಅಧ್ಯಕ್ಷ ರಾಮಣ್ಣ, ಉಪಾಧ್ಯಕ್ಷೆ ಕೋಟೆ ಈರಮ್ಮ, ಬಳ್ಳಾರಿ ತಾಪಂ ಇಒ ಜಾನಕಿರಾಮ್, ಆರ್‍ಎಫ್‍ಒ ಶಶಿಕಾಂತ್, ಸಿಡಿಪಿಒ ಕೃಷ್ಣಮ್ಮ, ಗ್ರಾಪಂ ಪಿಡಿಒ ಟಿ.ಎಂ.ಗೋವಿಂದಪ್ಪ ಹಾಗೂ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು, ಗ್ರಾಪಂ ಪಿಡಿಒ, ಸಿಬ್ಬಂದಿ, ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

Recent Articles

spot_img

Related Stories

Share via
Copy link