ಹಾವೇರಿ:
ಆರೋಗ್ಯಕರ ಸಮಾಜ ರಾಷ್ಟ್ರ ನಿರ್ಮಾಣದಲ್ಲಿ ಮಕ್ಕಳ ಪಾತ್ರಮುಖವಾಗಿದ್ದು, ಮಕ್ಕಳಿಗೆ ಪೌಷ್ಠಿಕ ಆಹಾರ ಸೇವೆನೆ ಹಾಗೂ ಉತ್ತಮ ಪುಸ್ತಕದ ಓದಿನ ಅಭಿರುಚಿಯನ್ನು ಬೆಳೆಸಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ವೈ.ಎಲ್. ಲಾಡಖಾನ್ ಅವರು ಕರೆ ನೀಡಿದರು.
ಶುಕ್ರವಾರ ದೇವರಾಜ ಅರಸು ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾಡಳಿತ , ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ರಾಷ್ಟ್ರೀಯ ಪೌಷ್ಟಿಕ ಸಪ್ತಾಹ ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿ ವರ್ಷ ಸೆಪ್ಟೆಂಬರ್ ಮಾಹೆಯ ಮೊದಲ ವಾರದಲ್ಲಿ ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹ ಕಾರ್ಯಕ್ರಮ ಆಯೋಜಿಸಿ ಪೌಷ್ಠಿಕಾಂಶಗಳ ಕೊರತೆಯಿಂದ ಮಕ್ಕಳ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತದೆ. ಸದೃಢವಾದ ಆರೋಗ್ಯವಂತ ಮಕ್ಕಳು ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಕಾರಣರಾಗುತ್ತಾರೆ. ಉತ್ತಮ ಆಹಾರ, ಆಯಾ ಕಾಲದಲ್ಲಿ ಸಿಗುವ ಹಣ್ಣುಗಳ ಸೇವನೆ, ಉತ್ತಮ ಪುಸ್ತಕಗಳ ಅಭಿರುಚಿಯನ್ನು ಮಕ್ಕಳಲ್ಲಿ ಬೆಳೆಸಿದರೆ ಮಕ್ಕಳ ಮಾನಸಿಕ, ದೈಹಿಕ ಆರೋಗ್ಯದ ಬೆಳವಣಿಗೆಗೆ ಸಹಕಾರಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅಪರ ಜಿಲ್ಲಾಧಿಕಾರಿ ಶ್ರೀಮತಿ ಶಾಂತಾ ಹುಲ್ಮನಿ ಅವರು ಮಾತನಾಡಿ ಆಹಾರದಲ್ಲಿ ಸೊಪ್ಪು ಇದ್ದರೆ ವೈದ್ಯರಿಗೆ ಸೊಪ್ಪು ಹಾಕುವ ಅಗತ್ಯವಿಲ್ಲ ಎಂಬ ಗಾದೆ ಮಾತಿನಂತೆ ಮಕ್ಕಳಿಗೆ ಸೊಪ್ಪು ತರಕಾರಿ, ಬೆಳೆಕಾಳುಗಳು, ಹಣ್ಣು, ಹಾಲು ಮೊದಲಾದ ಪೌಷ್ಠಿಕಾಂಶಯುಕ್ತ ಆಹಾರ ಸೇವೆನೆ ಮಾಡಿಸಬೇಕು. ಬೇಕರಿ ತಿನಿಸುಗಳು, ಬೀದಿ ಬದಿ ಮಾರಾಟಮಾಡುವ ತಿನಿಸುಗಳನ್ನು ರೂಢಿಮಾಡಬಾರದೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್ಚು ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಜಗದೀಶ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ಸಿ.ನೀರಲಗಿ, ಕಾರ್ಯದರ್ಶಿ ದೇವರಾಜ ಎನ್,ನಾಯ್ಡು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗರಾಜ ನಾಯಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಎಂ.ವಡಗೇರಿ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎನ್. ಮಾಳಗೇರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪೆನಲ್ ವಕೀಲರಾದ ಕುಮಾರಿ ರಾಜೇಶ್ವರಿ ಚೆಕ್ಕಳೇರ, ಜಿಲ್ಲಾ ಆಸ್ಪತ್ರೆ ಆಹಾರ ತಜ್ಞೆ ಕುಮಾರಿ ಶಿಲ್ಪಾ ಬಿ, ಪಿ.ಎಸ್.ಐ. ಮಾಲತೇಶ ವಿಶೇಷ ಉಪನ್ಯಾಸ ನೀಡಿದರು.