ಹಾನಗಲ್ಲ :
ಜಾಗತೀಕರಣದ ಭರಾಟೆಯ ನಡುವೆ ವೈಜ್ಞಾನಿಕ ವೇಗದ ದಿನಮಾನಗಳಲ್ಲಿ ನಾವಿರುವಾಗ ಪ್ರತಿಭೆಯಿಂದ ಮಾತ್ರ ಜೀವನ ಕಟ್ಟಿಕೊಳ್ಳಲು ಸಾಧ್ಯ, ಸಾಧಕರನ್ನು ಗೌರವಿಸುವ ಮೂಲಕ ನಮ್ಮ ಗೌರವ ಹೆಚ್ಚುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಶ್ರೀನಿವಾಸ ನುಡಿದರು.
ಶುಕ್ರವಾರ ಹಾನಗಲ್ಲಿನ ಸರಕಾರಿ ನೌಕರರ ಭವನದಲ್ಲಿ ಸರಕಾರಿ ನೌಕರರ ಸಂಘ ಆಯೋಜಿಸಿದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘಟನೆಗಳು ಕೇವಲ ನೌಕರರ ಸಮಸ್ಯೆಗಳಿಗೆ ಮಾತ್ರ ಸ್ಪಂಧಿಸದೇ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸೇವೆ ಸಲ್ಲಿಸುವಂತಹ ಕಾರ್ಯ ಕೈಗೊಳ್ಳುತ್ತಿರುವುದು ಅಭಿನಂದನೀಯವಾದುದು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದು ಹಾಗೂ ನಿವೃತ್ತರು ಸಾಧಕರನ್ನು ಗೌರವಿಸುವುದರಿಂದ ಸಂಘದ ಗೌರವವೂ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಸಂಘಟನೆಗಳ ಜವಾಬ್ದಾರಿ ವಹಿಸುವುದು ಖುರ್ಚಿಯ ಸುಖಕ್ಕಲ್ಲ. ಸೇವೆಯ ಮೂಲಕ ನ್ಯಾಯ ಒದಗಿಸಿ ಕೊಡುವುದು ಮೊದಲ ಆದ್ಯತೆಯಾಗಬೇಕು. ಚುನಾವಣೆಯಾಗಿರಲಿ ಅಥವಾ ಸರ್ವಾನುಮತದಿಂದಾಗಲಿ ಸಂಘಟನೆಗಳ ಪದಾಧಿಕಾರಿಗಳಾದ ಬಳಿಕ ಪ್ರಾಮಾಣಿಕ ಹಾಗೂ ಪ್ರಾಂಜಲ ಮನಸ್ಸಿನಿಂದ ಕಾರ್ಯ ಕೈಗೊಳ್ಳಬೇಕು. ಈ ಸಂದರ್ಭದಲ್ಲಿ ಬರುವ ಸಮಸ್ಯೆಗಳಿಗೆ ಎದೆಗೊಟ್ಟು ನಿಲ್ಲಬೇಕಾಗುತ್ತದೆ. ಪಲಾಯನವಾದಕ್ಕೆ ಒಳಗಾಗುವವರು ಸಂಘಟನಾ ಕಾರ್ಯದಿಂದ ದೂರವಿರಬೇಕು ಎಂದ ಅವರು, ಖುರ್ಚಿಗಾಗಿ ಬಂದು ಸಂಘಟನೆಗಳನ್ನು ಒಡೆಯುವ ದುಸ್ಸಾಹಸ ಸಲ್ಲದು. ಸರಕಾರಿ ನೌಕರರ ಸಂಘಟನೆ ಬಲಗೊಂಡರೆ ಮಾತ್ರ ನೌಕರರ ಸಮಸ್ಯೆಗಳಿಗೆ ಪರಿಹಾರ ಸಿಗಬಲ್ಲದು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಸಂಘದ ಉಪಾಧ್ಯಕ್ಷ ಸಿ.ಜಿ.ಪಾಟೀಲ, ಹಾನಗಲ್ಲಿನ ಸರಕಾರಿ ನೌಕರರ ಭವನವನ್ನು ಪುನರ್ ನಿರ್ಮಾಣ ಮಾಡುವ ಕಾರ್ಯ ಆಗಬೇಕಾಗಿದೆ. ನೌಕರರ ಸಂಘದ ಹಣವನ್ನು ದುರುಪಯೋಗ ಮಾಡಿದರೆ ಅದು ಇಡೀ ನೌಕರ ಸಮುದಾಯಕ್ಕೆ ಮಾಡಿದ ಅನ್ಯಾಯವೇ ಸರಿ. ಸಂಘಟನೆಗಳು ಆಭಿವೃದ್ಧಿಯ ಮಂತ್ರ ಪಠಿಸಿದರೆ ಸಾಲದು, ಕಾರ್ಯೋನ್ಮುಖವಾಗಿ ಯಶಸ್ಸು ಸಾಧಿಬೇಕು ಎಂದರು.
ಪ್ರಾಥಮಿಕ ಶಾಲಾ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ವಿಜಯೇಂದ್ರ ಯತ್ನಳ್ಳಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಕ್ಷರ ದಾಸೋಹ ಅಧಿಕಾರಿ ಶೇಖರ ಹಂಚಿನಮನಿ, ಸಮನ್ವಯಾಧಿಕಾರಿ ಬಿ.ಎಂ.ಬೇವಿನಮರದ, ಅನಿಲಕುಮಾರ ಗೋಣೆಣ್ಣನವರ, ಡಿ.ಮೋಹನಕುಮಾರ, ಕೆ.ಮಹಾಬಳೇಶ್ವರಪ್ಪ, ಸಂಘದ ಖಜಾಂಚಿ ಎನ್.ವಿ.ಅಗಸನಹಳ್ಳಿ, ಕಾರ್ಯದರ್ಶಿ ಉಮೇಶ ಸವಣೂರ, ಡಿ.ಕೆ.ಶ್ರೀನಿವಾಸ, ಆರ್.ಕೆ.ಕರಗುದರಿ, ಎಸ್.ವಿ.ಮಠದ, ಜೆ.ಆರ್.ಗೂಳಿಯವರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.