ಜಗದ ಜನರೆಲ್ಲರಿಗೂ ಸಮಾನತೆ ಕಲಿಸಿಕೊಟ್ಟದ್ದು ಬಸವಣ್ಣ :

 ಕಂಪ್ಲಿ:

      ವಚನ ಸಂಪತ್ತನ್ನು ಉಳಿಸಲು ಶರಣೆ ಅಕ್ಕನಾಗಮ್ಮ, ಮಡಿವಾಳ ಮಾಚಿದೇವರಂತಹ ವಚನಕಾರರ ಜೊತೆಗೆ ವಿಜಯನಗರ ಸಾಮ್ರಾಜ್ಯದ ಪ್ರೌಢದೇವರಾಯನ ಕಾಲದ 101ವಿರಕ್ತರಲ್ಲಿನ ಎಡೆಯೂರ ಸಿದ್ದಲಿಂಗೇಶ್ವರರು, ನಂತರದ ಫ.ಗು.ಹಳಕಟ್ಟಿ, ಉತ್ತಂಗಿ ಚನ್ನಪ್ಪ, ಈಚೀನ ಡಾ.ಎಂ.ಎಂ.ಕಲಬುರ್ಗಿ, ಡಾ.ಆರ್.ಸಿ.ಹಿರೇಮಠ, ಬಸವನಾಳ ಸೇರಿದಂತೆ ಅನೇಕರು ವಚನ ಸಾಹಿತ್ಯ ಉಳಿಸುವಲ್ಲಿ ಸಾಕಷ್ಟು ಶ್ರಮವಹಿಸಿದ್ದಾರೆ ಎಂದು ಗಂಗಾವತಿಯ ಸಾಹಿತಿ ಶರಣಪ್ಪ ಮೆಟ್ರಿ ಅವರು ಹೇಳಿದರು.

      ಅವರು ಇಲ್ಲಿನ ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆಯಲ್ಲಿ, ಸುತ್ತೂರಿನ ಜಗದ್ಗುರು ಲಿಂ.ಡಾ.ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜನ್ಮದಿನ ನಿಮಿತ್ತ ಕಂಪ್ಲಿ ಶರಣ ಸಾಹಿತ್ಯ ಪರಿಷತ್ತು ಕಂಪ್ಲಿ ತಾಲೂಕು ಘಟಕ ಆಯೋಜಿಸಿದ್ದ ವಚನ ದಿನದ ವಿಚಾರ ಸಂಕೀರ್ಣ ಹಾಗೂ ಬಿ.ಎಂ.ಬಸವರಾಜ ದತ್ತಿ ಕಾರ್ಯಕ್ರಮದಲ್ಲಿ ‘ವಚನ ಸಂಪತ್ತನ್ನು ಉಳಿಸಿಕೊಟ್ಟವರು’ ವಿಷಯ ಕುರಿತು ಮಾತನಾಡುತ್ತಿದ್ದರು. ವಚನ ಕ್ರಾಂತಿಯಲ್ಲಿ ವಚನಕಾರರ ಫಲವಾಗಿ ಇಂದು 26470ವಚನಗಳು ಲಭ್ಯವಿವೆ ಎಂದು ವಚನ ಪೋಷಣೆಯ ಹೆಜ್ಜೆಗಳ ಕುರಿತು ಸವಿಸ್ತಾರವಾಗಿ ವಿವರಿಸಿದರು.

      ರಾಮಸಾಗರ ಶಿಕ್ಷಕ ಸುಗ್ಗೇನಹಳ್ಳಿ ರಮೇಶ್ ‘ವಚನ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ವಿಶ್ವ ಮೌಲ್ಯಗಳು’ ಕುರಿತು ಮಾತನಾಡುತ್ತಾ ಇಂದು ಮುಂದುವರೆದ ರಾಷ್ಟ್ರಗಳಲ್ಲಿ ಆವತ್ತಿಗೆ ವೈಚಾರಿಕೆ ಪ್ರಜ್ಞೆ ಕೊರತೆಯಿತ್ತು. 12ನೇ ಶತಮಾನದಲ್ಲಿ ವಚನ ಕ್ರಾಂತಿ ಜರುಗಿದ ಪರಿಣಾಮ ಜಗದ ಜನರೆಲ್ಲರಿಗೂ ಸಮಾನತೆ, ಸ್ವಾತಂತ್ರ್ಯತೆ, ಜಾತ್ಯಾತೀತತೆ, ಸಹೋದರತೆ, ಲಿಂಗ ಸಮಾನತೆ, ಸ್ತ್ರೀ ಸ್ವಾತಂತ್ರ್ಯ, ವೃತ್ತಿ ಸಮಾನತೆ ಮತ್ತು ಕಾಯಕ, ದಾಸೋಹ ಮೊದಲಾದ ಜಾಗತಿಕ ಮಾನವೀಯ ಸಂಬಂಧಗಳನ್ನು, ವೈಚಾರಿಕ ಪ್ರಜ್ಞೆಯನ್ನು ಶರಣರು ತಮ್ಮ ವಚನ ಸಾಹಿತ್ಯ ಮೂಲಕ ಪ್ರತಿಪಾದಿಸಿದ್ದರು ಎಂದು ಹೇಳಿದರು.

      ವಚನಗಳು ಜೀವನದಲ್ಲಿ ಬರುವ ಎಂತಹದೇ ಸಂಕಷ್ಟಗಳನ್ನು ಎದುರಿಸುವ ಮನೋಭಾವನೆಗಳನ್ನು ಪ್ರೇರೇಪಿಸುತ್ತವೆ. ಕೇವಲ ಸಂಕಷ್ಟ ಸಮಯದಲ್ಲಿ ವಚನಗಳ ಸಾರ ಅರಿವಿಗೆ ಬಂದರೆ ಸಾಲದು, ಬದಲಿಗೆ ವಚನಗಳ ಅಂತರಾರ್ಥವನ್ನು ಅರಿತು ನಿತ್ಯ ಜೀವನದಲ್ಲೇ ಅನುಷ್ಟಾನಗೊಳಿಸಿಕೊಳ್ಳಬೇಕು. ಪಂಚೇಂದ್ರಿಯಗಳು ಆರೋಗ್ಯದಿಂದ ಇರುವಾಗಲೇ ಅಂತರಾತ್ಮವನ್ನು ಅರಿತುಕೊಳ್ಳಬೇಕು. ಜಗತ್ತು ಮಿಥ್ಯವಾದರೂ ಭಕ್ತಿ ಸತ್ಯ. ಜಗ ಮಾಯೆಯಾದರೂ ತಾನು ನಂಬಿದ ದೈವದ ಮೇಲೆ ಪ್ರಬಲ ನಂಬಿಕೆ ಹೊಂದಿರಬೇಕು ಎಂದು ಹೊಸಮಠದ ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ‘ವಚನ ವಾಚನ ವಿಶ್ಲೇಷಣೆ’ ಮಾಡುತ್ತಾ ವಿವರಿಸಿದರು.

      ಶರಣರ ವಚನಗಳ ಮೌಲ್ಯಗಳನ್ನು ವಿಚಾರಧಾರೆ, ವೈಚಾರಿಕ ಪ್ರಜ್ಞೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ವಚನ ಸಾಹಿತ್ಯ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸಬಲ್ಲದು. ಈ ಹಿನ್ನಲೆಯಲ್ಲಿ ಶಿಕ್ಷಣದ ಎಲ್ಲ ಹಂತಗಳಲ್ಲೂ ವಿದ್ಯಾರ್ಥಿಗಳಿಗೆ ವಚನ ಸಾಹಿತ್ಯವನ್ನು ಪರಿಚಯಿಸುವಲ್ಲಿ ಶಿಕ್ಷಣ ಇಲಾಖೆ ಜಾಗೃತಿ ತೋರಬೇಕು. ವಚನ ದಿನವನ್ನು ಸರ್ಕಾರವೇ ಆಚರಿಸುವಂತಾಗಬೇಕು ಎಂದು ಸಭೆಯ ಅಧ್ಯಕ್ಷತೆವಹಿಸಿದ್ದ ವೀರಶೈವ ಸಂಘದ ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಒತ್ತಾಯಿಸಿದರು.

      ವಚನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನಗಳಿಸಿದ ಕೆ.ಎಚ್.ಚೈತ್ರಾಳಿಗೆ 500ರೂ., ದ್ವಿತಿಯ ಬಹುಮಾನವಾಗಿ ಕೆ.ಸಂಗೀತಾಳಿಗೆ 300ರೂ. ಹಾಗೂ ತೃತೀಯ ಬಹುಮಾನಗಳಿಸಿದ ಕೆ.ಮೇಘನಾಳಿಗೆ 200ರೂ.ಗಳ ನಗದು ಪುರಸ್ಕಾರ ನೀಡಲಾಯಿತು.

      ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ಅಧ್ಯಕ್ಷ ಜಿ.ಪ್ರಕಾಶ್ ಪ್ರಾಸ್ತಾವಿಕ ನುಡಿದರು. ಚೈತ್ರ ಪ್ರಾರ್ಥಿಸಿದರು, ಪರಿಷತ್ತಿನ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ ಸ್ವಾಗತಿಸಿದರು, ಮುಖ್ಯಗುರು ತಿಪ್ಪಣ್ಣ ನಿರೂಪಿಸಿದರು. ದೈಹಿಕ ಶಿಕ್ಷಕ ಶಂಭುಲಿಂಗ ಮೂರ್ತಿ ಸೇರಿ ಅನೇಕರು ಪಾಲ್ಗೊಂಡಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link