ದಾವಣಗೆರೆ: ವಿನಾಯಕ ಪೂಜಾರ್.
ಸಂಚಾರಕ್ಕೆ ಯೋಗ್ಯವಿಲ್ಲದ ಹದಗೆಟ್ಟ ರಸ್ತೆ, ಬಿಡಾಡಿ ಹಂದಿ-ನಾಯಿಗಳ ಹಾವಳಿ, ರಸ್ತೆ ಬದಿ ಕಸದ ರಾಶಿ… ಇವು ಡೂಡಾ 2ನೇ ಬಡಾವಣೆಯಾಗಿ ಅಭಿವೃದ್ಧಿ ಪಡಿಸಿದ ದಾವಣಗೆರೆಯ ದೇವರಾಜ ಅರಸು ಬಡಾವಣೆಯ ಎ ಬ್ಲಾಕ್ನ ದುಸ್ಥಿತಿ.
ಹೌದು… ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನ ರಹಿತರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಈ ಬಡಾವಣೆಯನ್ನು ಅಭಿವೃದ್ಧಿ ಪಡಿಸಿ, ಹಿಂದಿನ ನಗರಸಭೆ (ಈಗಿನ ಮಹಾನಗರ ಪಾಲಿಕೆಗೆ)ಗೆ ಹಸ್ತಾಂತರಿಸಿ ಸುಮಾರು ಮೂರು ದಶಕಗಳೇ ಕಳೆದಿವೆ. ಆದರೆ, ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಈ ಬಡಾವಣೆಯ ಎ ಬ್ಲಾಕ್ ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ.
ಹದಗೆಟ್ಟ ರಸ್ತೆಗಳು:
ಮಹಾನಗರ ಪಾಲಿಕೆ ವ್ಯಾಪ್ತಿಯ 18ನೇ ವಾರ್ಡ್ನ ದೇವರಾಜ ಅರಸು ಬಡಾವಣೆಯ ಎ ಬ್ಲಾಕ್ನ ಎರಡು ಮುಖ್ಯ ರಸ್ತೆಗಳು ಸಿಸಿ ರಸ್ತೆಯಾಗಿ ಅಭಿವೃದ್ಧಿ ಹೊಂದಿರುವುದು ಬಿಟ್ಟರೆ, ಈ ಮುಖ್ಯ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆಗಳಾದ 1, 2, 3ನೇ ಕ್ರಾಸ್ ರಸ್ತೆಗಳು ಸೇರಿದಂತೆ ಇಲ್ಲಿನ ವಿವಿಧ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರಕ್ಕೂ ಸಹ ಅವು ಯೋಗ್ಯವಿಲ್ಲ. ಅದರಲ್ಲೂ 3ನೇ ಕ್ರಾಸ್ನ ಮಣ್ಣಿನ ರಸ್ತೆಯಲ್ಲಂತೂ (ಆಯುರ್ವೇದಿಕ್ ಆಸ್ಪತ್ರೆ ಎದುರಿನ ರಸ್ತೆ) ರಸ್ತೆ ಉದ್ದಕ್ಕೂ ಗುಂಡಿ ಬಿದ್ದಿದ್ದು, ಈ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು, ಆಟೋ ಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡು ವಾಹನಗಳನ್ನು ಓಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಬೈಕ್ ಸವಾರರು ಬಿದ್ದು ಕೈಕಾಲು ಮುರಿದುಕೊಂಡಿರುವ ಉದಾಹರಣೆ ಸಹ ಇವೆ. ಆದರೆ, ನಮ್ಮಿಂದ ಕಂದಾಯ ಕಟ್ಟಿಸಿಕೊಳ್ಳುವ ಮಹಾನಗರ ಪಾಲಿಕೆ ರಸ್ತೆ ಅಭಿವೃದ್ಧಿಗೆ ಒತ್ತು ನೀಡದೇ, ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸುತ್ತಾರೆ ಇಲ್ಲಿನ ನಿವಾಸಿಗಳು.
ಕಸದ ರಾಶಿ:
ಮೊದಲು ಮನೆ, ಮನೆ ಕಸ ಸಂಗ್ರಹಕ್ಕೆ ಬರುತ್ತಿದ್ದ ತಳ್ಳು ಗಾಡಿಯವರು ಈಗ ಕಸ ಸಂಗ್ರಹಕ್ಕೆ ಬರುತ್ತಿಲ್ಲ. ಆದರೆ, ಇದೆ ಬಡಾವಣೆಯ ಕೆಲ ಭಾಗಗಳಿಗೆ ಮನೆ ಬಾಗಿಲಿಗೆ ಕಸ ಸಂಗ್ರಹಕ್ಕೆ ಹೋಗುತ್ತಿರುವ ಆಪೆ ಆಟೋ ಇಲ್ಲಿಯ ಮೂರ್ನಾಲ್ಕು ಬೀದಿಗಳಿಗೆ ಕಸ ಸಂಗ್ರಹಕ್ಕೆ ಹೋಗುತ್ತಿಲ್ಲ. ಪಾಲಿಕೆಯ ಇಲ್ಲಿಯ 3ನೇ ಕ್ರಾಸ್ನ ಹಳೇ ಆರ್ಟಿಓ ಕಚೇರಿಗೆ ಹೋಗುವ ರಸ್ತೆಯಲ್ಲಿ ಕಂಟೇನರ್ ಒಂದನ್ನು ಇಟ್ಟಿದ್ದು, ಇಲ್ಲಿಯ ನಿವಾಸಿಗಳು ಆ ಕಂಟೇನರ್ ಬಳಿ ಹೋಗಿ ಕಸ ಸುರುವುತ್ತಿದ್ದಾರೆ. ಹೀಗಾಗಿ ಇಲ್ಲಿ ಕಸದ ರಾಶಿ ಬಿದ್ದಿದ್ದು, ಈ ಕಸದ ರಾಶಿಯಿಂದ ದುರ್ನಾಥ ಬರುವ ಕಾರಣ ಈ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಮೂಗು ಮುಚ್ಚುಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಂದಿ-ನಾಯಿ ಹಾವಳಿ:
ಅಲ್ಲದೆ, ಈ ಭಾಗದಲ್ಲಿ ಬಿಡಾಡಿ ಹಂದಿಗಳು ಹಾಗೂ ನಾಯಿಗಳ ಕಾಟ ಹೆಚ್ಚಾಗಿದೆ. ಹೀಗಾಗಿ ಮಕ್ಕಳು ಹೊರಗಡೆ ಬಂದು ಸವಚ್ಛಂದವಾಗಿ ಆಡುವುದು ದುಸ್ತರವಾಗಿದೆ. ಅಕಸ್ಮಾತ್ ಮಕ್ಕಳು ಹೊರಗಡೆ ಹೋದರೆ, ಹಂದಿ-ನಾಯಿಗಳು ಮಕ್ಕಳನ್ನು ಕಚ್ಚಿ ಗಾಯಗೊಳಿಸಬಹುದೆಂಬ ಕಾರಣಕ್ಕೆ ಮಕ್ಕಳ ಪೋಷಕರು ಮಕ್ಕಳನ್ನು ಕಾಯುತ್ತಾ ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ನ್ಯಾಯಾಲಯದ ಹಿಂಭಾಗದಲ್ಲಿರುವ ಈ ಬಡಾವಣೆಯ ಎ ಬ್ಲಾಕ್ ಒಂದರಲ್ಲೇ ಸುಮಾರು 150ಕ್ಕೂ ಹೆಚ್ಚು ನಾಯಿಗಳಿವೆ ಹಾಗೂ ಅಸಂಖ್ಯಾತ ಹಂದಿಗಳಿವೆ ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ನಿವಾಸಿಯೊಬ್ಬರು.
ಹತ್ತದ ಬೀದಿ ದೀಪ:
ಕೋರ್ಟ್ನಿಂದ ಶಿವಾಲಿ ರಸ್ತೆಯ ರೈಲ್ವೆ ಟ್ರ್ಯಾಕ್ ವರೆಗೂ ಬೀದಿ ದೀಪಗಳು ಹತ್ತುತ್ತಿಲ್ಲ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ಮಹಿಳೆಯರು, ವೃದ್ಧರು, ಮಕ್ಕಳು ಕತ್ತಲಿನಲ್ಲಿ ಭಯದಲ್ಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಷ್ಟೆಯಲ್ಲದೇ, ಮಹಾನಗರ ಪಾಲಿಕೆಯು ಸಮರ್ಪಕವಾಗಿ ನೀರು ಪೂರೈಸದೇ, ಸುಮಾರು 10 ದಿನಗಳಿಗೊಮ್ಮೆ ನೀರು ರಬರಾಜು ಮಾಡುತ್ತಿದೆ. ಆದ್ದರಿಂದ ಇಲ್ಲಿಯ ನಾಗರೀಕರು ನೀರಿಗಾಗಿ ಪರದಾಡುವ ಪರಿಸ್ಥಿತಿಯೂ ನಿರ್ಮಾಣವಾಗಿದೆ.
ಒಟ್ಟಿನಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ ಅರಸು ಅವರ ಹೆಸರು ಹೊಂದಿರುವ ಈ ಬಡಾವಣೆಯ ಎ ಬ್ಲಾಕ್ ಮೂಲಭೂತ ಸೌಕರ್ಯಗಳ ಸಮಸ್ಯೆಯಿಂದ ಬಳಲುತ್ತಿದೆ. ಆದ್ದರಿಂದ ತಕ್ಷಣವೇ ಮಹಾನಗರ ಪಾಲಿಕೆ ಎಚ್ಚೆತ್ತು ರಸ್ತೆ ಅಭಿವೃದ್ಧಿ, ಸಮರ್ಪಕ ನೀರು ಪೂರೈಕೆ, ಸ್ವಚ್ಛತೆ, ಹಂದಿ-ನಾಯಿಗಳ ನಿರ್ಮೂಲನೆ ಮಾಡುವ ಮೂಲಕ ಬಡಾವಣೆಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಇಲ್ಲಿಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ