ಬೆಂಗಳೂರು:
ಮೈತ್ರಿ ಸರ್ಕಾರ ಪತನಕ್ಕೆ ಕೈ ಹಾಕಿರುವ ಬಿಜೆಪಿಗೆ ಇದೀಗ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೆಡ್ಡು ಹೊಡೆದಿದ್ದಾರೆ. ನಮ್ಮ ಶಾಸಕರನ್ನು ಮುಟ್ಟಿದರೆ ನಿಮ್ಮ ವಿಕೆಟ್ಗಳೇ ಪತನವಾಗುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವ ಜಾರಕಿಹೊಳಿ ಸಹೋದರರನ್ನು ಸಮಾಧಾನಪಡಿಸಲು ಖರ್ಗೆ ಮತ್ತು ದಿನೇಶ್ ಗುಂಡೂರಾವ್ ಪ್ರಯತ್ನ ನಡೆಸಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸಚಿವ ರಮೇಶ್ ಜಾರಕಿಹೊಳಿ ಅವರ ಜತೆ ಚರ್ಚೆ ನಡೆಸಿದ ಖರ್ಗೆ, ಸರ್ಕಾರದ ಪತನಕ್ಕೆ ಕೈ ಹಾಕದಂತೆ ಸಲಹೆ ಮಾಡಿದ್ದಾರೆ. ಪಕ್ಷದ ವರಿಷ್ಠರ ಜತೆ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿ ಸಮಸ್ಯೆಗಳಿದ್ದರೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ಯಾವುದೇ ಕಾರಣಕ್ಕೂ ಪಕ್ಷ ತೊರೆಯುವ, ಇಲ್ಲವೆ ಮೈತ್ರಿ ಸರ್ಕಾರಕ್ಕೆ ಸಮಸ್ಯೆ ತಂದೊಡ್ಡುವ ಪ್ರಯತ್ನ ಮಾಡಬಾರದು ಎಂದು ಕಿವಿ ಮಾತು ಹೇಳಿದ್ದಾರೆ. ಇದಕ್ಕೆ ರಮೇಶ್ ಜಾರಕಿಹೊಳಿ ಅವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಅಲ್ಲದೇ ನಮ್ಮ ಜಿಲ್ಲಾ ರಾಜಕಾರಣಕ್ಕೆ ಸಚಿವ ಡಿ.ಕೆ. ಶಿವಕುಮಾರ್ ಕೈ ಹಾಕುವುದು ಸರಿಯಲ್ಲ. ಶಿವಕುಮಾರ್ ಅವರನ್ನು ಹದ್ದುಬಸ್ತಿಲ್ಲಿಡಿ. ಅದೊಂದು ಸಮಸ್ಯೆ ಬಗೆಹರಿದರೆ ನಾವು ಸುಮ್ಮನಾಗುತ್ತೇವೆ ಎಂದು ಖರ್ಗೆ ಅವರಿಗೆ ರಮೇಶ್ ಜಾರಕಿಹೊಳಿ ದೂರು ಹೇಳಿದ್ದಾರೆ.
ಖರ್ಗೆ ಮಾತನಾಡಿ, ಸಮ್ಮಿಶ್ರ ಸರ್ಕಾರದ ಪತನದ ಬಗ್ಗೆ ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. ಸರ್ಕಾರ ಪತನವಾಗುತ್ತದೆ. ನಾವು ಅಧಿಕಾರಕ್ಕೆ ಬರಬಹುದು ಎಂಬುದು ಬಿಜೆಪಿ
ನಾಯಕರ ಹಗಲುಗನಸು ಎಂದು ವ್ಯಂಗ್ಯವಾಡಿದರು. ಪಕ್ಷದಲ್ಲಿ ಏನೇ ಸಮಸ್ಯೆಗಳಿದ್ದರೂ ಅವುಗಳನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ರಮೇಶ್ ಜಾರಕಿಹೊಳಿ ಮಲ್ಲಿಕಾರ್ಜುನ ಖರ್ಗೆ ಅವರು ನಮ್ಮ ತಂದೆ ಸಮಾನರು, ನಮ್ಮ ರಾಜಕೀಯ ಗುರುಗಳು, ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.
ವಾಲ್ಮೀಕಿ ಸಮುದಾಯದ ಯಾವುದೇ ಸಮಸ್ಯೆಗಳನ್ನು ಬಗೆಹರಿಸಲು ನಾವೆಲ್ಲಾ ಒಟ್ಟಾಗಿ ನಿಲ್ಲುತ್ತೇವೆ. ಆದ್ದರಿಂದ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕು ಎಂದು ಹಿರಿಯ ನಾಯಕರಲ್ಲಿ ಮನವಿ ಮಾಡಿದ್ದೇವೆ. ಯಾರು ಸಚಿವರಾಗಬೇಕು ಎಂದು ದಿನೇಶ್ ಗುಂಡೂರಾವ್ ಹಾಗೂ ಪರಮೇಶ್ವರ್ ಅವರಿಗೆ ತಿಳಿಸಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಇನ್ನು ಮಂಗಳವಾರ ತಡರಾತ್ರಿ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ರಮೇಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ್ದರು. ನಿನ್ನೆ ಒಂದೇ ದಿನ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ 3 ಬಾರಿ ರಮೇಶ್ ಅವರನ್ನು ಭೇಟಿ ಮಾಡಿ ಪಕ್ಷ ತ್ಯಜಿಸುವ ಯಾವುದೇ ನಿರ್ಧಾರ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ದಿನೇಶ್ ಗುಂಡೂರಾವ್, ಆಪರೇಷನ್ ಕಮಲದಂತಹ ಅತ್ಯಂತ ಕೆಟ್ಟ ಮತ್ತು ಪ್ರಜಾಸತ್ತಾತ್ಮಕ ವಿರೋಧಿ ಕಾರ್ಯಕ್ಕೆ ಕೈಹಾಕಿದರೆ, ನಿಮ್ಮ ವಿಕೆಟ್ಗಳು ಪತನವಾಗುತ್ತದೆ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.
ರಾಜ್ಯ ರಾಜಕಾರಣದಲ್ಲಿ ಬೆಂಕಿಯಿಲ್ಲದೆಯೂ ಹೊಗೆ ಆಡುತ್ತಿದೆ ಪಕ್ಷ ಬಿಡುವುದಾಗಿ ಯಾವೊಬ್ಬ ಕಾಂಗ್ರೆಸ್ ಶಾಸಕನೂ ಹೇಳಿಲ್ಲ. ಆದರೂ ಕೆಲವು ಮಾಧ್ಯಮಗಳು ಕೆಲವು ಶಾಸಕರು ಪಕ್ಷ ಬಿಡುತ್ತಿದ್ದಾರೆ, ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರ ಹಿಂದೆ ಬಿಜೆಪಿಯ ಕುತಂತ್ರವಿದೆ ಎಂದರು.
ಶಾಸಕರಾದ ಆನಂದ್ ಸಿಂಗ್, ಅಮರೇಗೌಡ ಬಯ್ಯಾಪುರ, ಸಿ.ಎಸ್?.ಶಿವಳ್ಳಿ, ಎಂಟಿಬಿ ನಾಗರಾಜ್, ಬಸವನಗೌಡ, ಪ್ರತಾಪ್ ಗೌಡ, ಬಿಸಿ ಪಾಟೀಲ್ ಸೇರಿದಂತೆ ಹಲವು ಶಾಸಕರೂ ನಮ್ಮೊಂದಿಗಿದ್ದಾರೆ. ಯಾರೂ ಪಕ್ಷ ಬಿಡುವ ಬಗ್ಗೆ ಅಪಸ್ವರ ತೆಗೆದಿಲ್ಲ. ಪಕ್ಷವನ್ನೂ ಬಿಡುತ್ತಿಲ್ಲ ಎಂದರು.
ನಮ್ಮ ಜತೆ ಬಿಜೆಪಿ 5 ಶಾಸಕರು ಬರಲು ಉತ್ಸುಕತೆ ತೋರಿದ್ದಾರೆ. ನಾವು ಬಿಜೆಪಿ ಮಾಡಿದ ಹಾಗೆ ಮಾಡಲು ಇಷ್ಟವಿಲ್ಲ. ಬಿಜೆಪಿಯವರು ಅಧಿಕಾರ ದಾಹದಿಂದ ಈ ರೀತಿ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಬರ, ಕೆಲವೆಡೆ ಮಳೆಯಿಂದಾದ ಅನಾಹುತ ಹಾಗೂ ಪೆಟ್ರೋಲ್ ಬೆಲೆ ಏರಿಕೆ ಸೇರಿದಂತೆ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಅನಗತ್ಯ ರಾಜಕೀಯ ಮಾಡುವುದು ಸರಿಯಲ್ಲ ಎಂದರು.