ಬೆಳಗಾವಿ:
ಲೋಕೋಪಯೋಗಿ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ರಸ್ತೆಗಳ ಪುನರಾಭಿವೃದ್ಧಿಗೆ 6 ಸಾವಿರ ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಘೋಷಿಸಿದರು.
ಗಮನ ಸೆಳೆಯುವ ಸೂಚನೆಯಡಿ ಬಿಜೆಪಿಯ ವಿ.ಸುನಿಲ್ ಕುಮಾರ್ ಮತ್ತು ಇತರ ಶಾಸಕರ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿಗಳು, ಲೋಕೋಪಯೋಗಿ ಇಲಾಖೆಯ ಅಪೆಂಡಿಕ್ಸ್(ಇ) ಅಡಿ 4,000 ಕೋಟಿ ರೂ.ಮತ್ತು ಗ್ರಾಮಾಂತರ ರಸ್ತೆಗಳ ಅಭಿವೃದ್ಧಿಗೆ 2,000 ಕೋಟಿ ರೂ.ಅನುದಾನ ನೀಡುವುದಾಗಿ ಘೋಷಣೆ ಮಾಡಿದರು. ಈ ಹಣವನ್ನು ಮುಂದಿನ ವರ್ಷ ಮಾರ್ಚ್ ಮೊದಲು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಬೆಂಗಳೂರು ನಗರಕ್ಕೂ ವಿಶೇಷ ಅನುದಾನ ನೀಡುತ್ತೇವೆ ಎಂದು ಹೇಳಿದ ಅವರು, ಎಷ್ಟು ಮೊತ್ತ ನೀಡಲಾಗುತ್ತದೆ ಎಂಬುದನ್ನು ತಿಳಿಸಲಿಲ್ಲ,
ಬೆಂಗಳೂರಿನ ರಸ್ತೆಗಳಿಗೆ ಅನುದಾನದ ಬಗ್ಗೆ ಪ್ರತಿಪಕ್ಷಗಳು ಸ್ಪಷ್ಟನೆ ಕೇಳಿದಾಗ, ಈ ಬಗ್ಗೆ ಈಗಾಗಲೇ ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರೊಂದಿಗೆ ಚರ್ಚಿಸಿದ್ದೇನೆ ಎಂದು ವಿವರಿಸಿದರು. ಅನುದಾನದ ವಿವರವನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.
ಬಳಿಕ ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕದಲ್ಲಿ ಆರ್ಥಿಕ ದುರುಪಯೋಗ ಮತ್ತು ಅಭಿವೃದ್ಧಿ ಕುಂಠಿತವಾಗಿದೆ ಎಂಬ ಪ್ರತಿಪಕ್ಷಗಳ ಹೇಳಿಕೆಗಳನ್ನು ತಿರಸ್ಕರಿಸಿದ ಸಿದ್ದರಾಮಯ್ಯ, ಅನುದಾನ ನೀಡದೇ ಅಭಿವೃದ್ಧಿ ಕುಂಠಿತವಾಗಿದೆ ಎಂಬುದು ಸತ್ಯಕ್ಕೆ ದೂರವಾಗಿದೆ. ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ರಾಜ್ಯದ ಆರ್ಥಿಕತೆಯನ್ನು ಸಂಪೂರ್ಣ ಹಾಳುಗೆಡವಿದರು. ಅರಾಜಕತೆ ಸೃಷ್ಟಿ ಮಾಡಿದರು. ಅದನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡುತ್ತಿದ್ದೇವೆಂದು ತಿಳಿಸಿದರು.
ಬೊಮ್ಮಾಯಿಯವರಿಗೆ ಸ್ವಲ್ಪ ಆರ್ಥಿಕತೆ ಅರ್ಥವಾಗುತ್ತದೆ ಎಂದುಕೊಂಡಿದ್ದೆ. ಆದರೆ, ಅವರ ಅವಧಯಲ್ಲಿ ಬಜೆಟ್ ನಲ್ಲಿ ಯಾವುದೇ ಅನುದಾನ ಮೀಸಲಿಡದೆಯೇ ರೂ.2.9 ಲಕ್ಷ ಕೋಟಿ ಮೊತ್ತದ ಕಾಮಗಾರಿಗಳನ್ನು ಹೆಚ್ಚುವರಿಯಾಗಿ ತೆಗೆದುಕೊಂಡು ಕಾರ್ಯಾದೇಶ ನೀಡಿದ್ದರು. ಶೇ.40 ಕಮಿಷನ್ ಭ್ರಷ್ಟಾಚಾರ ಅರಂಭವಾಗಿದ್ದೇ ಇಲ್ಲಿ. ಪರಿಣಾಮ ಅವರ ಅವಧಿಯಲ್ಲಿ ರೂ.29,600 ಕೋಟಿ ಕಾಮಗಾರಿಗಳ ಬಿಲ್ ಬಾಕಿ ಉಳಿಸಿ ಹೋಗಿದ್ದರು. ನಮ್ಮ ಸರ್ಕಾರ ಬಂದ ಮೇಲೆ ರೂ.18,150 ಕೋಟಿ ತೀರಿಸಿದ್ದೇವೆ. ಉಳಿದದ್ದು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದರು.
ಹಿಂದಿನ ಬಿಜೆಪಿ ಮತ್ತು ಕೇಂದ್ರ ಸರ್ಕಾರ ಆರ್ಥಿಕ ಅನ್ಯಾಯದ ಪರಿಣಾಮ ಯೋಜನೆಳಿಗೆ ಹಣಕಾಸಿನ ಕೊರತೆಯಾಗಿದೆ. ಇಂತಹ ಸಂದರ್ಭದಲ್ಲಿಯೂ ನಾವು ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿ ಯೋಜನೆಗಳಿಗಾಗಿ ಇದೂವರೆಗೆ 64,000 ಕೋಟಿ ವಿನಿಯೋಗಿಸಿದ್ದೇವೆ. ಈ ಗ್ಯಾರಂಟಿ ಯೋಜನೆಗಳಿಗಾಗಿ ನಮ್ಮ ಸರ್ಕಾರ ಬಜೆಟ್ ನಲ್ಲಿ 2023-24ರಲ್ಲಿ ರೂ.36,858 ಕೋಟಿ ಮತ್ತು 2024-25ರಲ್ಲಿ 52,009 ಕೋಟಿ ಸೇರಿ ಒಟ್ಟು 88867 ಕೋಟಿ ರೂಗಳನ್ನು ಬಜೆಟ್ ನಲ್ಲಿ ಒದಗಿಸಿದ್ದೇವೆಂದು ಮಾಹಿತಿ ನೀಡಿದರು.
