ಬೆಂಗಳೂರು:
ಮೈತ್ರಿ ಸರ್ಕಾರದಲ್ಲಿ ಇತ್ತೀಚಿನ ಕೆಲವು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳಿಂದ ಚಿಂತೆಗೀಡಾಗಿರುವ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ಅವರು ಕಾಂಗ್ರೆಸ್ ಹೈಕಮಾಂಡ್ಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ತಮ್ಮ ಬೇಸರವನ್ನು ಹೊರಹಾಕಿದ್ದಾರೆ ಎನ್ನಲಾಗಿದೆ.
ಕೆ.ಸಿ. ವೇಣುಗೋಪಾಲ್ ಅವರೊಂದಿಗೆ ಮಾತನಾಡಿದ್ದ ದೇವೇಗೌಡರು ಸರ್ಕಾರ ಸಮಸ್ಯೆ ಇಲ್ಲದೆ ನಡೆಯುವುದಾದರೆ ಮಾತ್ರ ಆಡಳಿತ ನಡೆಸೋಣ. ನಿಮಗೆ ಮೈತ್ರಿಯನ್ನು ನಿಭಾಯಿಸುವುದು ಕಷ್ಟವಾಗಿದ್ದರೆ ಸ್ಪಷ್ಟವಾಗಿ ಹೇಳಿಬಿಡಿ. ಮೈತ್ರಿ ಸಾಧ್ಯವಿಲ್ಲವಾದರೆ ಅವರವರ ದಾರಿ ಅವರವರದ್ದು. ಜತೆಗೆ ನಮ್ಮ ಸಹಕಾರಕ್ಕಾಗಿ ಬಿಜೆಪಿ ನಾಯಕರು ಕಾಯುತ್ತಿದ್ದಾರೆ ಎಂದು ಗೌಡರು ತಿಳಿಸಿದ್ದರು ಎಂದು ತಿಳಿದು ಬಂದಿದೆ.
ದೇವೇಗೌಡರು ಸ್ಪಷ್ಟ ಸಂದೇಶ ರವಾನಿಸಿದ ತಕ್ಷಣ ಎಚ್ಚೆತ್ತುಕೊಂಡ ವೇಣುಗೋಪಾಲ್ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರಿಗೆ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳಿಗೂ ತೆರೆ ಎಳೆಯಿರಿ ಎಂದು ಸೂಚನೆ ನೀಡಿದ್ದಾರೆ . ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ದೇವೇಗೌಡ ನಿವಾಸಕ್ಕೆ ತೆರಳಿ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.