ಜೆಜೆಹಟ್ಟಿ ತಿಪ್ಪೇಸ್ವಾಮಿ ಅಖಾಡಕ್ಕೆ ವೇದಿಕೆ ಸಜ್ಜು

ಚಿತ್ರದುರ್ಗ;
               ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಮೆಲ್ಲಗೆ ಆರಂಭವಾಗತೊಡಗಿವೆ. ಪ್ರಮುಖ ಮೂರು ರಾಜಕೀಯ ಪಕ್ಷಗಳಲ್ಲೂ ಆಕಾಂಕ್ಷಿಗಳು ಈಗಿನಿಂದಲೇ ಟಿಕೆಟ್‍ಗಾಗಿ ಕಸರತ್ತು ನಡೆಸಲು ಮುಂದಾಗಿದ್ದಾರೆ.
                ಗುರುವಾರ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರು, ಗೌರಿ ಗಣೇಶ ಹಬ್ಬದ ನೆಪವಿಟ್ಟುಕೊಂಡು ನಗರದ ಮುಸ್ಲಿಂ ಮುಖಂಡರಿಗೆ ಇಲ್ಲಿನ ಅಮೋಘ ಹೋಟೆಲ್‍ನಲ್ಲಿ ಔತಣ ಕೂಟ ಏರ್ಪಡಿಸಿದ್ದು ಕಾಂಗ್ರೆಸ್ ವಲಯದಲ್ಲಿ ಬಾರೀ ಚರ್ಚೆಗೆ ಕಾರಣವಾಗುತ್ತಿದೆ.
ಈ ಔತಣ ಕೂಟದಲ್ಲಿ ಮುಸ್ಲಿಂ ಸಮುದಾಯದ ಬಹುತೇಕ ಹಿರಿಯ ನಾಯಕರು ಪಾಲ್ಗೊಂಡಿದ್ದಾರೆ. ವಿವಿಧ ಮಸೀದಿಗಳ ಪ್ರಮುಖರು, ನಗರಸಭೆ ಮಾಜಿ ಅಧ್ಯಕ್ಷರು, ಮಾಜಿ ಸದಸ್ಯರುಗಳು ಸೇರಿದಂತೆ ಸುಮಾರು ಐದು ನೂರಕ್ಕೂ ಹೆಚ್ಚು ಮುಸ್ಲಿಂ ಮುಖಂಡರು ಪಾಲ್ಗೊಂಡಿದ್ದಾರೆ.ಈ ಮೂಲಕ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಿದ್ದಾರೆ.
                  2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರು, ಕೆಲವು ಹಿರಿಯ ನಾಯಕರ ವಿರೋಧದ ನಡುವೆಯೂ 2.50 ಲಕ್ಷದಷ್ಟು ಮತಗಳನ್ನು ಪಡೆದು ಗಮನ ಸೆಳೆದಿದ್ದರು. ಸ್ವತಃ ರಾಹುಲ್‍ಗಾಂಧಿ ಅವರೇ ದುರ್ಗಕ್ಕೆ ಆಗಮಿಸಿ ತಿಪ್ಪೇಸ್ವಾಮಿ ಅವರ ಪರ ಪ್ರಚಾರ ಭಾಷಣವನ್ನೂ ಮಾಡಿದ್ದರು. ಕಾಂಗ್ರೆಸ್ ಮುಖಂಡರ ಅಸಹಕಾರದಿಂದಾಗಿ ಅವರು ಜನಾರ್ಧನಾಸ್ವಾಮಿ ಅವರ ವಿರುದ್ದ ಸೋತರು.
                   ಮತ್ತೆ 2013ರ ಚುನಾವಣೆಯಲ್ಲಿ ಕೊನೆ ಕ್ಷಣದಲ್ಲಿ ಟಿಕೆಟ್ ತಪ್ಪಿತು. ಹೈಕಮಾಂಡ್ ಹಾಲಿ ಸದಸ್ಯ ಬಿ.ಎನ್..ಚಂದ್ರಪ್ಪ ಅವರಿಗೆ ಟಿಕೆಟ್ ನೀಡಿತು. ಅಂದಿನಿಂದ ಮೂಲೆಗುಂಪಾಗಿದ್ದ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರೀಗ ಮತ್ತೆ ಸಕ್ರೀಯ ರಾಜಕಾರಣದತ್ತ ಮುಖಮಾಡಿದ್ದಾರೆ.
                   ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ಹೀನಾಯ ಸ್ಥಿತಿಗೆ ತಲುಪಿದೆ. ಗುಂಪುಗಾರಿಕೆ, ಹೊಂದಾಣಿಕೆ ಮತ್ತು ಜಾತಿ ರಾಜಕಾರಣ ಮುಂತಾದ ಕಾರಣಗಳಿಂದಾಗಿ ಕಾಂಗ್ರೆಸ್‍ನ ಭದ್ರಕೋಟೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಛಿದ್ರವಾಗಿದೆ. ಮೊನ್ನೆ ನಡೆದ ನಗರಸಭೆ ಚುನಾವಣೆಯಲ್ಲಿಯೂ ಬಾರೀ ಮುಖಭಂಗ ಅನುಭವಿಸುವಂತಾಗಿದೆ.
                   ಪಕ್ಷದ ಈ ಹೀನಾಯ ಸ್ಥಿತಿಗೆ ಹೆಚ್.ಆಂಜನೇಯ ಹಾಗೂ ಲೋಕಸಭಾ ಸದಸ್ಯರ ನಡವಳಿಕೆಗಳೇ ಮುಖ್ಯಕಾರಣವೆಂದು ಹೈಕಮಾಂಡ್ ಮಟ್ಟದಲ್ಲಿ ಬಿಂಬಿಸಲು ಜಿಲ್ಲೆಯ ಹಿರಿಯ ನಾಯಕರು ಒಳಗೊಳಗೆ ಪ್ರಯತ್ನ ಮಾಡುತ್ತಿದ್ದಾರೆ. ಈ ಮದ್ಯೆ ಜೆ.ಜೆ.ಹಟ್ಟಿ ತಿಪ್ಪೇಸ್ವಾಮಿ ಅವರು ಜಾತಿ, ಸಮುದಾಯಗಳ ಸಂಘಟನೆಯತ್ತ ಹೊರಟಿರುವುದು ಆ ಪಕ್ಷದ ನಾಯಕರಿಗೆ ಚಿಂತೆಗೀಡು ಮಾಡಿದೆ.
                   ಜಿಲ್ಲೆಯ ಪಕ್ಷದ ಸ್ಥಿತಿಗತಿಗಳ ಕುರಿತು ದೆಹಲಿ ಮತ್ತು ರಾಜ್ಯ ನಾಯಕರಿಗೆ ಸ್ಪಷ್ಟ ಮಾಹಿತಿ ಇದೆ. ಹಾಲಿ ಸಂಸದ ಬಿ.ಎನ್.ಚಂದ್ರಪ್ಪ ಅವರಿಗೆ ಟಿಕೆಟ್ ಕೈ ತಪ್ಪುವ ಲಕ್ಷಣಗಳು ಕಾಣುತ್ತಿಲ್ಲವಾದರೂ, ಸಂಸದರು ಮತ್ತು ಹೆಚ್.ಆಂಜನೇಯ ಇಬ್ಬರೂ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ವಿಚಾರದಲ್ಲಿ ಒತ್ತು ಕೊಟ್ಟು ಕೆಲಸ ಮಾಡಿಲ್ಲ. ಕಾರ್ಯಕರ್ತರ ಸಮಸ್ಯೆಗಳಿಗೂ ಸ್ಪಂದಿಸಿಲ್ಲ. ಮೇಲಾಗಿ ಪಕ್ಷದ ಅನೇಕ ಹಿರಿಯ ನಾಯಕರನ್ನು, ನಿಷ್ಟಾವಂತರನ್ನು ಈ ಐದು ವರ್ಷಗಳ ಅವಧಿಯಲ್ಲಿ ಕಡೆಗಣಿಸಲಾಗಿದೆ ಎನ್ನುವ ಆರೋಪಗಳಿವೆ.
                    ಕಳೆದ ಮೂರು ವರ್ಷಗಳ ಕಾಲ ತೆರೆಮರೆಯಲ್ಲಿಯೇ ಇದ್ದು, ತಮ್ಮ ಜಾತಿಯ ಸಂಘಟನೆಯನ್ನು ಬಲಪಡಿಸುತ್ತಲೇ ಬಂದಿರುವ ತಿಪ್ಪೇಸ್ವಾಮಿ ಅವರೀಗ ಮುಸ್ಲಿಂ ಸಮುದಾಯದ ಮುಖಂಡರನ್ನು ಒಟ್ಟುಗೂಡಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಆ ಮೂಲಕ ನಾನೂ ಒಬ್ಬ ಪ್ರಭಾವಿ ಆಕಾಂಕ್ಷಿ ಎನ್ನುವ ಸಂದೇಶ ರವಾನಿಸಲು ಪ್ರಯತ್ನಿಸಿದ್ದಾರೆ.

Recent Articles

spot_img

Related Stories

Share via
Copy link