ಹಾವೇರಿ:
ರಾಷ್ಟ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಎಂಜಿನೀಯರ್‍ಗಳ ಪಾತ್ರ ಮುಖ್ಯವಾಗಿದ್ದು, ಈ ಕ್ಷೇತ್ರದಲ್ಲಿರುವವರು ಅರ್ಪಣಾ ಭಾವದ ಸೇವೆ ಸಲ್ಲಿಸುವ ಮೂಲಕ ಹೊಸ ದೇಶ ಕಟ್ಟುವುದಕ್ಕೆ ತಮ್ಮ ಕಾಣಿಕೆ ನೀಡಬೇಕೆಂದು ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ತಾಂತ್ರಿಕ ತಜ್ಞ ವಿ.ಜೆ. ರಾಯ್ಕರ್ ಹೇಳಿದರು.
ಜಿಲ್ಲಾ ಪಂಚಾಯತಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ವತಿಯಂದ ಭಾರತ್ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಎಂಜಿನಿಯರ್‍ಗಳ ದಿನಾಚರಣೆಯ ಸಮಾರಂಭದಲ್ಲಿ ಉಪನ್ಯಾಸ ನೀಡಿದರು.
ವಿಶ್ವೇಶ್ವರಯ್ಯನವರು ತತ್ವಬದ್ಧರಾಗಿ ಹಾಗೂ ನೈತಿಕ ತಳಹದಿಯ ಮೇಲೆ ಕರ್ತವ್ಯ ನಿರ್ವಹಿಸಿದರು. ಕೆ.ಆರ್. ಎಸ್ ಡ್ಯಾಮ್‍ನ ನಿರ್ಮಾತ್ರರಾಗಿ ಮೈಸೂರು ಭಾಗವನ್ನೇ ಹಸಿರು ಪ್ರದೇಶವನ್ನಾಗಿ ಪರಿವರ್ತಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿ ಮಾಡಿದರು. ತುಂಗಭದ್ರಾ ಡ್ಯಾಂ ನಿರ್ಮಿಸುವ ಮೂಲಕ ನೀರಾವರಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದರು. ರಾಜ್ಯದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಅವರ ಮೌಲ್ಯಯುತ ಸೇವೆ ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಎಂಜಿನಿಯರ್‍ಗಳು ಗ್ರಾಮೀಣ ಭಾಗದ ಸಮಸ್ಯೆಗಳತ್ತ ಗಮನಹರಿಸಬೇಕು.ಅಲ್ಲಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡಬೇಕು. ಈ ಕ್ಷೇತ್ರದಲ್ಲಿ ದುಡಿಯುವ ವ್ಯಕ್ತಿ 18 ಗಂಟೆ ಕೆಲಸ ಮಾಡುವುದು ಅನಿವಾರ್ಯವಾಗಿದೆ.ಜಲ ರಕ್ಷಣೆಯ ಬಗ್ಗೆ ಗಮನಹರಿಸದಿದ್ದರೆ, ಮುಂದಿನ ದಿನಗಳಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ. ಸರಕಾರದ ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತರುವ ಹೊಣೆ ಹೊತ್ತು ಸಮರ್ಪಕವಾಗಿ ಕೆಲಸ ಮಾಡಬೇಕೆಂದರು.
ಮುಖ್ಯ ಅತಿಥಿಯಾಗಿದ್ದ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ ಜಗದೀಶ ಜೋಶಿ ಮಾತನಾಡಿ, ಕರ್ತವ್ಯ ನಿಷ್ಠೆ ಹಾಗೂ ಆತ್ಮಗೌರವಕ್ಕೆ ಧಕ್ಕೆ ಬಂದಾಗ, ಪ್ರತಿಭಟನೆ ಮಾಡಿದ್ದು ವಿಶ್ವೇಶ್ವರಯ್ಯ ಜೀವನದ ವಿಶೇಷತೆಗಳು. ಈ ಎರಡೂ ಗುಣಗಳನ್ನು ಇಂದಿನ ಎಂಜಿನಿಯರ್‍ಗಳು ಅಳವಡಿಸಿಕೊಳ್ಳಬೇಕೆಂದರು.
ನಿವೃತ್ತ ಎಂಜಿನಿಯರ್ ಎ.ಆರ್. ಕುಲಕರ್ಣಿ ಮಾತನಾಡಿ, ಕಾನೂನು ಬದ್ಧ ಹಾಗೂ ಪಾರದರ್ಶಕವಾಗಿ ಕೆಲಸ ಮಾಡಿದರೆ ಯಾರೊಬ್ಬರಿಗೂ ಅಂಜುವ ಅಗತ್ಯವಿಲ್ಲವೆಂದರು.
ಇನ್ನೋರ್ವ ನಿವೃತ್ತ ಎಂಜಿನಿಯರ್ ವಿಶ್ವಬ್ರಾಹ್ಮಣ ಮಾತನಾಡಿ, ತಾಂತ್ರಿಕ ಕ್ಷೇತ್ರದಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಈ ಬಗ್ಗೆ ಅರಿವು ಮೂಡಿಸಿಕೊಳ್ಳಲು ಕಾರ್ಯಾಗಾರಗಳು ನಡೆಯಬೇಕೆಂದು ಆಶಿಸಿದರು.
ಸಭೆಯಲ್ಲಿ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಭಾವನ್‍ಮೂರ್ತಿ ಹಾಗೂ ಶಾಂತಣ್ಣ ಹಳ್ಳಿಕೇರಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಕೆ.ವಿ. ಹಂಚಿನಮನಿ ಮಾತನಾಡಿ, ಎಂಜಿನಿಯರ್‍ಗಳು ಕೆಲಸ ನಿರ್ವಹಣೆಯಲ್ಲಿ ತಾಳ್ಮೆ ಕಳೆದುಕೊಳ್ಳಬಾರದು. ಜನರ ಸಮಸ್ಯೆಗೆ ಸ್ಪಂದಿಸಿ ಅವರ ಜೀವನದಲ್ಲಿ ಬದಲಾವಣೆ ತರಲು ಯತ್ನಿಸಬೇಕೆಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತಿ ಹೊಂದಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎ.ಆರ್. ಮುದ್ರಿ ಹಾಗೂ ಗುತ್ತಿಗೆದಾರ ಮಾರುತಿ ಮುಂತಾದವರನ್ನು ಸನ್ಮಾನಿಸಲಾಯಿತು. ಇದೇ ಕಾಲಕ್ಕೆ ಕಾರ್ಯಾಲಯದ ಆವರಣದಲ್ಲಿ ಸರ್. ಎಂ.ವಿಶ್ವೇಶ್ವರಯ್ಯನವರ ಕಂಚಿನಮೂರ್ತಿಯನ್ನು ಅನಾವರಣಗೊಳಿಸಲಾಯಿತು.
ಎಂಜಿನಿಯರ್ ಬಾಳಪ್ಪಗೌಡ ಸ್ವಾಗತಿಸಿದರು. ಕಾರ್ಯಪಾಲಕ ಎಂಜಿನಿಯರ್ ವಿನಾಯಕ ಹುಲ್ಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ವಿ. ಮಠ ವಂದಿಸಿದರು.
