ಚಿತ್ರದುರ್ಗ:
ಅಮೃತ್ಸಿಟಿ ಯೋಜನೆಯಡಿಯಲ್ಲಿ ಚಿತ್ರದುರ್ಗ ನಗರದಲ್ಲಿ ವಿವಿಧ ಪಾಕ್ಗಳ ಅಭಿವೃದ್ದಿಗಾಗಿ ಮೂರು ಕೋಟಿ ರೂ.ಗಳು ಬಿಡುಗಡೆಯಾಗಿರುವುದರಿಂದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಶನಿವಾರ ದಾವಣಗೆರೆ ರಸ್ತೆಯಲ್ಲಿರುವ ಯೂನಿಯನ್ ಪಾರ್ಕಿಗೆ ಭೇಟಿ ನೀಡಿ ಸುತ್ತಲೂ ಗೋಡೆ ನಿರ್ಮಾಣ ಕಳೆಪೆಯಾಗಿರುವುದರಿಂದ ಇಂಜಿನಿಯರ್ಗಳನ್ನು ತೀವ್ರ ತರಾಟೆ ತೆಗೆದುಕೊಂಡರು.
73 ಲಕ್ಷ ರೂ.ವೆಚ್ಚದಲ್ಲಿ ಯೂನಿಯನ್ ಪಾರ್ಕ್ನಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ದಿ ಕಾಮಗಾರಿಗಳನ್ನು ವೀಕ್ಷಿಸಿದ ಶಾಸಕರು ನಿಯಮದಂತೆ ನಿಗಧಿತ ಪ್ರಮಾಣದ ಗಾತ್ರವಿಲ್ಲದ ಸೈಜುಗಲ್ಲುಗಳನ್ನು ಬಳಸಿ ಕಾಂಪೌಂಡ್ ನಿರ್ಮಿಸುತ್ತಿರುವುದನ್ನು ವೀಕ್ಷಿಸಿ ಅಸಮಾಧಾನಗೊಂಡು ಅಲ್ಲಲ್ಲಿ ಕಾಂಪೌಂಡ್ನ ಸೈಜುಗಲ್ಲುಗಳನ್ನು ಕೀಳಿಸಿ ಕಳೆಪೆಯಾಗಿರುವುದನ್ನು ಖಾತ್ರಿಪಡಿಸಿಕೊಂಡು ಇಂತಹ ಬೇಕಾಬಿಟ್ಟಿ ಕೆಲಸ ಮಾಡಿದರೆ ನಾನು ಸಹಿಸುವುದಿಲ್ಲ. ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಕೆಳಗೋಟೆ ಸಿ.ಕೆ.ಪುರ ಪಾರ್ಕಿಗೆ 50 ಲಕ್ಷ ರೂ., ರಾಜೇಂದ್ರನಗರ ಪಾರ್ಕಿಗೆ 50 ಲಕ್ಷ., ಐ.ಯು.ಡಿ.ಪಿ.ಲೇಔಟ್ ಪಾರ್ಕಿಗೆ 77 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇನ್ನು ಹೆಚ್ಚಿನ ಹಣ ಬೇಕಾದರೆ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ನಗರಸಭೆ ಅನುದಾನವನ್ನು ಬಳಸಿಕೊಂಡು ನಗರದಲ್ಲಿನ ಪಾರ್ಕ್ಗಳನ್ನು ವಿಶಾಲವಾಗಿ ನಿರ್ಮಾಣ ಮಾಡಿ ಹಸಿರಿನಿಂದ ಕಂಗೊಳಿಸುವಂತೆ ಮಾಡಿದರೆ ಮಹಿಳೆ ಮಕ್ಕಳು ಹಾಗೂ ವಯೋವೃದ್ದರು ಸಂಜೆ ವೇಳೆ ವಿಹರಿಸಲು ಅನುಕೂಲವಾಗಲಿದೆ. ಅದಕ್ಕಾಗಿ ಯೂನಿಯನ್ ಪಾರ್ಕ್ಗೆ ಸುಂದರ ರೂಪ ಕೊಡಬೇಕಾಗಿದೆ. ಎಲ್ಲಿಯೂ ಕಳಪೆಯಾಗಬಾರದು ಎಂದು ಇಂಜಿನಿಯರ್ಗಳಿಗೆ ತಾಕೀತು ಮಾಡಿದರು.
ಶಾಂತಿಸಾಗರ ಹಾಗೂ ವಾಣಿವಿಲಾಸ ಸಾಗರದಿಂದ ಎರಡನೆ ಹಂತದ ಕುಡಿಯುವ ನೀರು ಯೋಜನೆ ಕಾಮಗಾರಿಗೆ ನಗರದಲ್ಲಿ ಪೈಪ್ಲೈನ್ ಅಳವಡಿಕೆ ಕಾರ್ಯ ಆರಂಭಗೊಂಡಿದೆ ಮೊದಲು ಒಂದು ರಸ್ತೆಯಲ್ಲಿ ಪೈಪ್ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಂಡ ಮೇಲೆ ರಸ್ತೆಯನ್ನು ಡಾಂಬರೀಕರಣಗೊಳಿಸಿ ನಂತರ ಮತ್ತೊಂದು ರಸ್ತೆಯಲ್ಲಿ ಪೈಪ್ಲೈನ್ ಅಳವಡಿಕೆಯನ್ನು ಕೈಗೆತ್ತಿಕೊಳ್ಳಿ ನಗರದಲ್ಲಿ ರಸ್ತೆಗಳು ಹದಗೆಟ್ಟರುವುದರಿಂದ ನನ್ನನ್ನು ದೂಷಿಸುತ್ತಿದ್ದಾರೆ. ಗುಣಮಟ್ಟದ ಕೆಲಸವಾಗಬೇಕು. ಯಾವ ಪೋತಪ್ಪನಾಯಕ ಬಂದರೂ ಹೆದರುವುದಿಲ್ಲ ಎಂದು ಅಧಿಕಾರಿಗಳಿಗೆ ಹಾಗೂ ಇಂಜಿನಿಯರ್ಗಳ ಮೇಲೆ ಗುಡುಗಿದರು.
ಉದ್ಯಾನವನಗಳಲ್ಲಿ ವಾಕಿಂಗ್ ಪಾಥ್, ಲಾನ್, ಹಸಿರು ಹೊದಿಕೆ, ಓಪನ್ಜಿಮ್, ಮಕ್ಕಳ ಆಟಿಕೆ ಸಾಮಾಗ್ರಿಗಳ ಅಳವಡಿಕೆ ಹಾಗೂ ಸುತ್ತಲೂ ಗಟ್ಟಿಮುಟ್ಟಾದ ಕಾಂಪೌಂಡ್ ನಿರ್ಮಾಣಕ್ಕೆ ಲ್ಯಾಂಡ್ ಸ್ಕೇಪ್ ಮಾಡುವ ಪರಿಣಿತರನ್ನು ಬೆಂಗಳೂರಿನಿಂದ ಕರೆಸಿ ಎಷ್ಟು ಹಣ ಬೇಕಾಗುತ್ತದೆ ಎಂಬುದರ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಸಿ.ಕೆ.ಪುರ ಪಾರ್ಕಿನಲ್ಲಿ ವಾಕಿಂಗ್ ಪಾಥ್ ಸಮತಟ್ಟಾಗಿಲ್ಲ. ಇದರಿಂದ ಅಲ್ಲಿ ವಾಯುವಿಹಾರಕ್ಕೆ ಬರುವವರು ನಡೆದಾಡಲು ತೊಂದರೆಯಾಗುತ್ತದೆ.ಎಲ್ಲಾ ಅನುದಾನಗಳನ್ನು ಬಳಸಿಕೊಂಡು ಚಿತ್ರದುರ್ಗದಲ್ಲಿರುವ ಉದ್ಯಾನವನಗಳಿಗೆ ಸುಂದರ ರೂಪ ಕೊಡಬೇಕಾಗಿದೆ. ಅದಕ್ಕಾಗಿ ಇಂಜಿನಿಯರ್ಗಳು ಹಾಗೂ ಅಧಿಕಾರಿಗಳು ಕಾಳಜಿಯಿಂದ ಕೆಲಸ ಮಾಡಿ ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವಿಶಂಕರ್, ಸಹಾಯಕ ಇಂಜಿನಿಯರ್ ಕೃಷ್ಣಮೂರ್ತಿ, ಕೆ.ಯು.ಡಬ್ಲ್ಯು. ಎಸ್. ಹಾಗೂ ಪಿ.ಡಿ.ಎಂ.ಸಿ.ಇಂಜಿನಿಯರ್ಗಳು ಹಾಗೂ ಕಂಟ್ರಾಕ್ಟರ್ ವಿಜಯಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.