ಕೂಡ್ಲಿಗಿ:
ಮಾಸಿಕ ಪ್ರಗತಿ ಪರಿಶೀಲನ ಸಭೆಗೆ ನೀಡಬೇಕಾದ ಅನುಪಾಲನ ವರದಿಗಳನ್ನು ತಾಲ್ಲೂಕಿನ ಬಹುತೇಕ ಇಲಾಖೆಗಳು ಸಮಯಕ್ಕೆ ಸರಿಯಾಗಿ ನೀಡುತ್ತಿಲ್ಲ. ಅಲ್ಲದೆ ಅನೇಕ ಅಧಿಕಾರಿಗಳು ಸಹ ಸಭೆ ಬರುವುದಿಲ್ಲ. ಈ ರೀತಿಯ ನಿರ್ಲಕ್ಷ್ಯವವನ್ನು ಅಧಿಕಾರಿಗಳು ಬಿಡಬೇಕು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ. ವೆಂಕಟೇಶ್‍ನಾಯ್ಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಸೋಮವಾರ ನಡೆದ ಮಾಸಿಕ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ತಿಂಗಳು ನಡೆಯುವ ಸಭೆಗೆ ಇಲಾಖೆಗೆ ಸಂಬಂಧಿಸಿದ ಪ್ರಗತಿಯ ಅನುಪಾಲನ ವರದಿಯನ್ನು ನೀಡಬೇಕು. ಆದರೆ ಸಕಾಲಕ್ಕೆ ಯಾರು ನೀಡುತ್ತಿಲ್ಲ. ಕೆಲವರು ಸಭೆ ಆರಂಭಕ್ಕೆ ಮುನ್ನ ನೀಡುತ್ತಾರೆ ಎಂದ ಅವರು, ಅನುಮತಿ ಇಲ್ಲದೆ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟೀಸ್ ನೀಡುವಂತೆ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯ್ತಿ ಎಂಜನಿಯರಿಂಗ್ ಇಲಾಖೆಯ ಅಧಿಕಾರಿಗಳು ಕೆಲ ಕಾಮಗಾರಿಗೆ 2.70 ಲಕ್ಷ ರೂಪಾಯಿಗಳ ಖರ್ಚು ತೋರಿಸುತ್ತಾರೆ. ಆದರೆ ಅಲ್ಲಿ 20 ಸಾವಿರ ರೂಪಾಯಿಯಷ್ಟು ಖರ್ಚಾಗಿಲ್ಲ. ಅಲ್ಲದೇ ಅದೇ ಕಾಮಗಾರಿಗೆ ನರೇಗಾ ಯೋಜನೆಯಡಿ ಕೆಲಸ ಮಾಡಿಸಲಾಗಿದೆ ಎಂದು ಬಿಲ್ ಮಾಡಿದ್ದಾರೆ. ಇಂತಹ ಅನೇಕ ಲೋಪಗಳಿದ್ದು, ಕಳೆದ 3 ವರ್ಷಗಳಿಂದ ಏನೇನು? ಕೆಲಸ ನಡೆದಿದೆ ಎನ್ನುವುದರ ಬಗ್ಗೆ ಸಮಗ್ರ ವರದಿ ನೀಡುವಂತೆ ಜಿಲ್ಲಾ ಪಂಚಾಯ್ತಿ ಎಂಜನಿಯರಿಂಗ್ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ತಾಲ್ಲೂಕಿನ ಗುಡೇಕೋಟೆ ಅರಣ್ಯ ವಲಯದಲ್ಲಿ 250 ಫಲಾನುಭವಿಗಳಿಗೆ ಗ್ಯಾಸ್ ಕಿಟ್ ಬಂದಿದ್ದು, 200 ಜನಕ್ಕೆ ವಿತರಣೆ ಮಾಡಲಾಗಿದೆ. 20 ಫಲಾನುಭವಿಗಳು ವಿವಿಧ ಕಾರಣಗಳಿಂದ ತಿರಸ್ಕೃತಗೊಂಡಿದ್ದು, 30 ಜನ ಫಲಾನುಭವಿಗಳು ಸರಿಯಾದ ದಾಖಲೆಗಳನ್ನು ನೀಡಿಲ್ಲ ಎಂದು ಗುಡೇಕೋಟೆ ವಲಯ ಸಹಾಯಕ ಹೊನ್ನೂರಪ್ಪ ಸಭೆಯ ಗಮನಕ್ಕೆ ತಂದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಬಿ.ವೆಂಕಟೇಶ್ ನಾಯ್ಕ್ ಮಾತನಾಡಿ, ಕೂಡ್ಲಿಗಿ ವಲಯ ಕಚೇರಿಯಿಂದ ಫಲಾನುಭವಿಗಳಿಗೆ ಗ್ಯಾಸ್ ಕಿಟ್ ಪೂರೈಕೆ ಮಾಡಲು ಏಜನ್ಸಿಯೊಂದಕ್ಕೆ ಜನೆವರಿಯಲ್ಲಿಯೇ ಚೆಕ್ ನೀಡಲಾಗಿದೆ. ಆದರೆ ಇದುವರೆಗೂ ಗ್ಯಾಸ್ ಕಿಟ್ ವಿತರಣೆ ಮಾಡಿಲ್ಲ ಏಕೆ? ಒಂದು ವಾರದೊಳಗೆ ಕಿಟ್ ವಿತರಣೆ ಮಾಡದೇ ಇದ್ದರೆ ಸಂಬಂಧಿಸಿದ ಎಲ್ಲರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ಆರಣ್ಯಧಿಕರಿಗಳಿಗೆ ಎಚ್ಚರಿಕೆ ನೀಡಿದರು.
ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಹಾಲಿನ ಪುಡಿ, ಹೆಸರು ಕಾಳು ಸೇರಿದಂತೆ ಮಕ್ಕಳಿಗೆ ಹಾಗೂ ಫಲಾನುಭವಿಗಳಿಗೆ ಸೇರಬೇಕಾದ ಅನೇಕ ಆಹಾರ ಪದಾರ್ಥಗಳು ಕಿರಾಣಿ ಅಂಗಡಿಗಳಲ್ಲಿ ಮಾರಾಟವಾಗುತ್ತಿವೆ. ಈ ಬಗ್ಗೆ ಅಂಗನವಾಡಿ ಕಾರಕರ್ತೆಯರಿಗೆ ಸೂಕ್ತ ಎಚ್ಚರಿಕೆ ನೀಡಬೇಕುಎಂದು ಶಿಶು ಅಭಿವೃದ್ಧಿ ಅಧಿಕಾರಿಗೆ ಅಧ್ಯಕ್ಷರು ಸೂಚನೆ ನೀಡಿದರು.
ಆರೋಗ್ಯ, ವಿದ್ಯುತ್, ಸಮಾಜ ಕಲ್ಯಾಣ, ಪಶು ಸಂಗೋಪನೆ, ಬಿಸಿಎಂ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ತಾಲ್ಲೂಕು ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆಇಬಿ ಬಸವರಾಜ, ತಾಲ್ಲುಕು ಪಂಚಾಯ್ತಿ ಕಾರ್ಯನಿರ್ವಾಹಕಾಧಿಕಾರಿ ಜಿ.ಎಂ. ಬಸಣ್ಣ ವೇದಿಕೆಯಲ್ಲಿದ್ದರು. ಪಂಚಾಯ್ತಿ ಅಭಿವೃದ್ಧಿ ಆಧಿಕಾರಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ