ಹಾನಗಲ್ಲ :
ಗಣೇಶ ವಿಸರ್ಜನೆ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸಿ ಜಗಳ ಕಾದಿದ್ದಲ್ಲದೆ ನಾಲ್ಕು ದ್ವಿಚಕ್ರವಾಹನಗಳು, ಒಂದು ಮೆಟಾಡೋರ ಜಕಂಗೊಳಿಸಿದ್ದು, ರೈತರ ಹುಲ್ಲಿನ ಬಣವೆಗಳನ್ನು ಬೆಂಕಿಗೀಡು ಮಾಡಿದ ಘಟನೆ ಹಾಗಲ್ಲ ತಾಲೂಕಿನ ಹೀರೂರು ಗ್ರಾಮದಲ್ಲಿ ನಡೆದಿದೆ.
ಸೋಮವಾರ ತಡರಾತ್ರಿ ಸಾರ್ವಜನಿಕ ಗಣಪತಿಯನ್ನು ವಿಸರ್ಜಿಸಲು ಕೊಂಡ್ಯೋಯ್ಯುತ್ತಿರುವಾಗ ಒಂದು ಮಸೀದಿಯ ಹತ್ತಿರ ಧ್ವನಿವರ್ಧಕ ಬಳಕೆ ವಿಷಯದಲ್ಲಿ ಎರಡು ಕೋಮುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಏಕಾಏಕಿ ಕೈ ಕೈ ಮಿಲಾಯಿಸುವ ಮಟ್ಟಕ್ಕೆ ಹೋಗಿ ಜಗಳವೇ ಆಗಿದೆ. ದುಷ್ಕರ್ಮಿಗಳ ಕೈಗೆ ಸಿಕ್ಕ ನಾಲ್ಕು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ. ಒಂದು ಮೆಟಾಡೋರ ಜಖಂಗೊಂಡಿದೆ. ಗ್ರಾಮದ ಭರ್ಮಣ್ಣ ಚಿಕ್ಕೇರಿ ಹಾಗೂ ಚಂದ್ರಗೌಡ ಪಾಟೀಲ ಎಂಬಿಬ್ಬರು ರೈತರ ಹುಲ್ಲಿನ ಬಣವಿಗಳು ಬೆಂಕಿಗಾಹುತಿಯಾಗಿವೆ.
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ ಘರ್ಷಣೆಯನ್ನು ನಿಯಂತ್ರಿಸಲು ಲಾಠಿ ಪ್ರಹಾರ ನಡೆಸುವ ಸಂದರ್ಬ ಒದಗಿಬಂತು. ಸ್ಥಳಕ್ಕೆ ಆಗಮಿಸಿದ ಹಾವೇರಿ ಪೊಲೀಸ್ ಅಧಿಕಾರಿಗಳ ತಂಡ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಮಾಡಿದೆ. ಗ್ರಾಮದಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ಈಗ ಗ್ರಾಮದಲ್ಲಿ ಶಾಂತಿಯ ವಾತಾವರಣವಿದೆ.
ದುಷ್ಕರ್ಮಿಗಳ ಕಲ್ಲು ತೂರಾಟ ಸಂದರ್ಬದಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ. ಈ ಘಟನೆಗೆ ಸಂಬಂದಿಸಿದಂತೆ ಎರಡೂ ಕೋಮಿನ 60 ಜನರ ಮೇಲೆ ಪ್ರಕರಣ ದಾಖಲಾಗಿದೆ. ಇದರಲ್ಲಿ 23 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಲಾಗಿದೆ.
ಮಂಗಳವಾರ ಬೆಂಗಳೂರು ವಲಯ ಐಜಿಪಿ ಬಿ.ದಯಾನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಡಿಎಸ್‍ಪಿ ಎನ್.ವಿ.ಬರಮನಿ, ಹಾನಗಲ್ಲ ತಹಸೀಲ್ದಾರ್ ಸಿ.ಎಸ್.ಭಂಗಿ, ಸಿಪಿಐ ರೇವಣ್ಣ ಕಟ್ಟಿಮನಿ, ಚಿದಾನಂದ್, ಪಿಎಸ್‍ಐಗಳಾದ ಗುರುರಾಜ್ ಮೈಲಾರ, ಟಿ.ಮುರುಗೇಶ್ ಗ್ರಾಮದಲ್ಲಿ ಬೀಡು ಬಿಟ್ಟು ಪರಿಸ್ಥಿತಿಯನ್ನು ಶಾಂತಗೊಳಿಸಿ ಗ್ರಾಮದ ಜನರಿಗೆ ರಕ್ಷಣೆ ಒದಗಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








