ದಾವಣಗೆರೆ:
ವಿದ್ಯಾರ್ಥಿ ವೇತನ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ದಾಖಲಿಸುವ ಕೆಲಸದಿಂದ ಶಿಕ್ಷಕರನ್ನು ಮುಕ್ತಿ ಗೊಳಿಸಿ, ಪಾಠ-ಪ್ರವಚನಕ್ಕೆ ಸೀಮಿತಗೊಳಿಸಬೇಕೆಂದು ಆಗ್ರಹಿಸಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಬಳಿಕ ಜಿಲ್ಲಾ ಪಂಚಾಯತ್‍ಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಪರಮೇಶ್ವರ್ ಕುಂದೂರ್, ಬಹುತೇಕ ಶಿಕ್ಷಕರು ವಿದ್ಯಾರ್ಥಿಗಳ ವಿದ್ಯಾರ್ಥಿವೇತನದ ಮಾಹಿತಿಯ ಆನ್‍ಲೈನ್ ಅಳವಡಿಕೆ ಕಾರ್ಯದಲ್ಲಿ ತೊಡಗಿರುವುದರಿಂದ ಸೆ.1 ರಿಂದ ಶಾಲಾ ತರಗತಿಗಳಲ್ಲಿ ಪಾಠ ಪ್ರವಚನಗಳು ಕುಂಟಿತವಾಗಿವೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಹೆಚ್ಚು ವಿಷಯಗಳನ್ನು ಕಡಿಮೆ ಶಿಕ್ಷಕರು ಲಭ್ಯ ಇರುವ ಶೈಕ್ಷಣಿಕ ಅವಧಿಯಲ್ಲಿ ಬೋಧಿಸಬೇಕಾಗಿದ್ದು, ಮಕ್ಕಳ ಕಲಿಕೆಗೆ ಭೌತಿಕ ಪ್ರಗತಿಗೆ ಅಡಚಣೆಯಾಗುತ್ತಿದೆ ಎಂದು ಆರೋಪಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳನ್ನು ಸಂಕಲನಾತ್ಮಕ ಪರೀಕ್ಷಾ ಪದ್ಧತಿಗೆ ಅಣಿಗೊಳಿಸಬೇಕಾದ ಗುರುತರವಾದ ಜವಾಬ್ದರಾರಿ ಶಿಕ್ಷಕರ ಮೇಲಿದ್ದು, ಸ್ಪರ್ಧಾತ್ಮಕ ದಿನಮಾನಗಳಲ್ಲಿ ಪೋಷಕರ ಅಪೇಕ್ಷೆಯಂತೆ ಮಕ್ಕಳನ್ನು ಶೈಕ್ಷಣಿಕವಾಗಿ ಬಲಗೊಳಿಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದ್ದರೂ ಇಲಾಖೆ/ಸರಕಾರ ಶಿಕ್ಷಕರನ್ನು ಹೆಚ್ಚಾಗಿ ಬೇರೆ ಕೆಲಸಗಳಿಗೆ ಒಳಪಡಿಸುತ್ತಿರುವ ಮೂಲಕ ಸರಕಾರಿ ಶಾಲಾ ಮಕ್ಕಳ ಕಲಿಕಾ ಆಸಕ್ತಿ ಕುಂದುವಂತೆ ಮಾಡುತ್ತಿದೆ. ಮಕ್ಕಳು ಶಾಲೆತೊರೆದು ಹೋಗಲು ದಾರಿಮಾಡುತ್ತಿದೆ. ಇದರ ಮೂಲಕ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯಾಧಾರವಾಗಿ ಶಿಕ್ಷಕರನ್ನು ಹೆಚ್ಚುವರಿಯಾಗಿ ಮಾಡುತ್ತ ಇದ್ದ ಕಡಿಮೆ ಶಿಕ್ಷಕರನ್ನೂ ಬೇರೆಕಡೆ ಕಳಿಸಿ ಸರಕಾರಿ ಶಾಲೆಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಶಿಕ್ಷಣ ಇಲಾಖೆಯ ಇಂತಹ ಆಡಳಿತ ನೀತಿಯಿಂದ ಸರಕಾರಿ ಶಾಲೆಯಲ್ಲಿರುವ ಈಗಿರುವ ಮಕ್ಕಳೂ ಕೂಡ ಬೇರೆ ಶಾಲೆಗಳತ್ತ ಮುಖಮಾಡುವ ಲಕ್ಷಣಗಳು ಹೆಚ್ಚಾಗುತ್ತವೆ. ಇದರಿಂದ ಸರಕಾರಿ ಶಾಲಾ ಶಿಕ್ಷಣವ್ಯವಸ್ಥೆಯನ್ನು ಸರಕಾರವೆ ಮೊಟಕುಮಾಡುವ ಕುತಂತ್ರದಲ್ಲಿ ತೊಡಗಿರುವುದು ಕಂಡುಬರುತ್ತಿದೆ. ಇದರ ಬದಲು ಶಿಕ್ಷಕರನ್ನು ಶೈಕ್ಷಣಿಕ ಬೋಧನಾ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಆದೇಶಿಸಬೇಕೆಂದು ಹಾಗೂ ಶಿಕ್ಷಕರನ್ನು ಬೋಧನೇತರ ಕಾರ್ಯಗಳಿಂದ ಮುಕ್ತಿಗೊಳಿಸಿ, ಶಿಕ್ಷಕರನ್ನು ಪಠ್ಯ ಪ್ರವಚನಕ್ಕೆ ಸೀಮಿತಗೊಳಿಸಿ, ಸರ್ಕಾರಿ ಶಾಲೆಗಳನ್ನು ಸದೃಢಗೊಳಿಸಬೇಕೆಂದು ಆಗ್ರಹಿಸಿದರು.
ಸಂಘಟನೆ ಮುಖಂಡರಾದ ನಲ್ಕುದುರೆ ಶೌಕತ್ ಅಲಿ, ಉತ್ತರ ಕೊಂಬಳಿ ಬಸಪ್ಪ ಸಿದ್ದಪ್ಪ, ಎಸ್‍ಪಿಎಸ್ ನಗರದ ಮಂಜಮ್ಮ, ಸದಾಶಿವ, ಕೂಲಂಬಿ ಕೆ.ಆರ್.ಅಜ್ಜಯ್ಯ, ಮತ್ತಿ ಪಿ.ಎಂ.ಮಂಜುನಾಥ, ನಾಗರಾಜ, ಆಂಜನೇಯ ಶಿವಕ್ಕಳ, ಹಾಲಿವಾಣ ಪರಮೇಶ್ವರಪ್ಪ, ಹದಡಿ ನಳಿನಾ ಶೇಖರ್, ಎಚ್.ನಿಂಗರಾಜ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
