ನವದೆಹಲಿ:
ದೆಹಲಿ ಮುಖ್ಯಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಸಚಿವ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ಕೋರ್ಟ್ ಮಂಗಳವಾರ ಸಮನ್ಸ್ ಜಾರಿ ಮಾಡಿದೆ.
ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಅವರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ದೆಹಲಿ ಕೋರ್ಟ್ ಇಂದು ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಸಚಿವ ಮನೀಶ್ ಸಿಸೋಡಿಯಾ ಅವರಿಗೆ ವಿಚಾರಣೆಗೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ಅಂತೆಯೇ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 25ಕ್ಕೆ ಮುಂದೂಡಿದ್ದು, ಅಂದೇ ಖುದ್ದು ಹಾಜರಿಗೆ ಸೂಚಿಸಲಾಗಿದೆ.
ಇನ್ನು ಇದಕ್ಕೂ ಮುನ್ನ ಹಲ್ಲೆ ಪ್ರಕರಣ ಸಂಬಂಧ ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸುಮಾರು 3000 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು. ಚಾರ್ಜ್ ಶೀಟ್ ನಲ್ಲಿ ಮುಖ್ಯ ಕಾರ್ಯದರ್ಶಿಗಳ ಮೇಲೆ ಹಲ್ಲೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರೇ ಜವಾಬ್ದಾರರು ಎಂದು ಆರೋಪಿಸಲಾಗಿದೆ. ಕಾರ್ಯಕರ್ತರ ಮೂಲಕ ಮುಖ್ಯ ಕಾರ್ಯದರ್ಶಿಗಳಿಗೆ ಬೆದರಿಕೆ ಹಾಕಿಸಲಾಗಿದ್ದು, ಅಲ್ಲದೆ ಅವರ ಅನುಪಸ್ಥಿತಿಯಲ್ಲೇ ಅಂಶು ಪ್ರಕಾಶ್ ಅವರ ಮೇಲೆ ಹಲ್ಲೆಯಾಗಿದೆ. ಘಟನೆ ಉದ್ದೇಶ ಪೂರ್ವಕವಾಗಿದ್ದು, ಅವರಿಗೆ ಅನುಮಾನ ಮಾಡಲೆಂದೇ ಸಿಎಂ ನಿವಾಸಕ್ಕೆ ಕರೆಸಿಕೊಳ್ಳಲಾಗಿತ್ತು ಎಂದು ಪೊಲೀಸರು ತಮ್ಮ ಚಾರ್ಜ್ ಶೀಟ್ ನಲ್ಲಿ ದಾಖಲಿಸಿದ್ದಾರೆ.
ಕಳೆದ ಫೆಬ್ರವರಿಯಲ್ಲಿ ಆಪ್ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಹಿನ್ನಲೆಯಲ್ಲಿ ಟಿವಿ ಜಾಹಿರಾತು ನೀಡುವ ಸಂಬಂಧ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್ ಮತ್ತು ದೆಹಲಿ ಸರ್ಕಾರದ ನಡುವೆ ಭಿನ್ನಮತ ಸ್ಫೋಟಗೊಂಡಿತ್ತು. ಈ ಸಂಬಂಧ ಕರೆಯಲಾಗಿದ್ದ ಸಭೆ ವೇಳೆ ಕೇಜ್ರಿವಾಲ್ ನಿವಾಸದಲ್ಲಿ ಆಪ್ ಮುಖಂಡರಾದ ಅಮಾನತುಲ್ಲಾ ಖಾನ್ ಮತ್ತು ಪ್ರಕಾಶ್ ಜರ್ವಾಲ್ ಅವರು ಹಲ್ಲೆ ಮಾಡಿದ್ದರು. ಇದೇ ವಿಚಾರವನ್ನು ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದ್ದು, ಪೊಲೀಸರ ಆರೋಪಗಳನ್ನು ಆಪ್ ಸರ್ಕಾರ ನಿರಾಕರಿಸಿತ್ತು.
