ಎಸ್ಸಿ ಹಾಗೂ ಎಸ್ಟಿ ಬಡ್ತಿ ವಿಚಾರದಲ್ಲಿ ತೊಂದರೆ ತಡೆಯುವಂತೆ ಒತ್ತಾಯ

ಬಳ್ಳಾರಿ:

     ಎಸ್ಸಿ ಹಾಗೂ ಎಸ್ಟಿ ಸರ್ಕಾರಿ ನೌಕರರಿಗೆ ಬಡ್ತಿ ವಿಚಾರದಲ್ಲಿ ಸಮ್ಮಿಶ್ರ ಸರ್ಕಾರ ಮೌನ ವಹಿಸಿದ್ದು, ಕೂಡಲೇ ಎಲ್ಲ ನೌಕರರು ಮೊದಲಿನ ಹುದ್ದೆಯಲ್ಲೇ ಮುಂದುವರೆಯಲು ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ದಲಿತ ಸಂಘರ್ಷ ಸಮೀತಿ(ಪ್ರೊ.ಬಿ.ಕೃಷ್ಣಪ್ಪ ಬಣ) ರಾಜ್ಯ ಸಂಚಾಲಕ ಎಂ.ಸೋಮಶೇಖರ ಅವರು ಒತ್ತಾಯಿಸಿದರು.

      ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಎಸ್ಸಿ ಹಾಗೂ ಎಸ್ಟಿ ನೌಕರರಿಗೆ ಬಡ್ತಿ ವಿಚಾರದಲ್ಲಿ ನಾನಾ ರೀತಿಯ ತೊಂದರೆಗಳಾಗುತ್ತಿದ್ದು, ಕೂಡಲೇ ಸಮ್ಮಿಶ್ರ ಸರ್ಕಾರ ಎಲ್ಲ ನೌಕರರು ಮೊದಲಿನ ಹುದ್ದೆಯಲ್ಲೇ ಮುಂದುವರೆಯುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ನಾನಾ ಕಡೆ ಕೆಲ ನೌಕರರು ಅಪಮಾನ ತಾಳದೇ ಆತ್ಮಹತ್ಯೆಗೆ ಮುಂದಾಗಿದ್ದಾರೆ. ಕೂಡಲೇ ಸಮ್ಮಿಶ್ರ ಸರ್ಕಾರ ಈ ಕುರಿತು ಗಂಬೀರವಾಗಿ ಪರಿಗಣಿಸಿ, ನೌಕರರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.

      ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮೀ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ದಲಿತರಿಗೆ ಕಿಮ್ಮತ್ತಿಲ್ಲದಂತಾಗಿದ್ದು, ಕಳೆದ ನಾಲ್ಕು ತಿಂಗಳಿಂದ ಇಲ್ಲಿವರೆಗೆ ದಲಿತರಿಗೆ ಯಾವುದೇ ಸೌಲಭ್ಯ ಹಾಗೂ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವ ಎನ್.ಮಹೇಶ್ ಸೇರಿದಂತೆ ಶಾಸಕರು, ಸಂಸದರಿಗೆ ಸರ್ಕಾರದಲ್ಲಿ ಕಿಮ್ಮತ್ತಿಲ್ಲದಂತಾಗಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮೀ ಅವರ ನಿರ್ಧಾರವೇ ಅಂತಿಮ ಎನ್ನುವಂತಾಗಿದೆ. ಉಪ ಮುಖ್ಯಮಂತ್ರಿಗಳು, ಸಚಿವರು, ಶಾಸಕರ ಗಮನಕ್ಕೆ ಬಾರದೇ ಎಲ್ಲ ಕೆಲಸಗಳು ಸರ್ಕಾರದಲ್ಲಿ ನಡೆಯುತ್ತಿದ್ದು, ದಲಿತರನ್ನು ಸಂಪೂರ್ಣ ಕಡೆಗಣಿಸಲಾಗುತ್ತಿದೆ.

      ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮೀ ಎಲ್ಲ ಕೆಲಸಗಳಲ್ಲೂ ಮೂಗು ತೂರಿಸುತ್ತಿದ್ದು, ಸಚಿವರು ಹಾಗೂ ಶಾಸಕರು ಆಟಕ್ಕೆ ಉಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ. ಗೃಹಖಾತೆ ಸಚಿವ ಡಾ.ಜಿ.ಪರಮೇಶ್ವರ ಅವರ ಗಮನಕ್ಕೆ ಬಾರದೇ ಅಧಿಕಾರಿಗಳ ವರ್ಗಾವಣೆ ದಂಧೆ ನಡೆಯುತ್ತಿದ್ದು, ಈ ಕುರಿತು ಯಾರೇ ಪ್ರಶ್ನಿಸಿದರೂ ಮುಖ್ಯಮಂತ್ರಿಗಳು ಉತ್ತರ ನೀಡುತ್ತಿಲ್ಲ ಎಂದು ಕಿಡಿಕಾರಿದರು.

       ದಲಿತರಿಗೆ ನಮ್ಮ ಸರ್ಕಾರದಲ್ಲಿ ಮನ್ನಣೆ ನೀಡಲಾಗುತ್ತಿದೆ, ಎಲ್ಲರಂತೆ ದಲಿತರಿಗೂ ಪ್ರಮುಖ ಖಾತೆಗಳನ್ನು ನೀಡಲಾಗಿದೆ, ದಲಿತರಿಗೆ ಅನ್ಯಾಯವಾದರೇ ಸಹಿಸೋಲ್ಲ ಎನ್ನುವ ಮಾತುಗಳು ವೇದಿಕೆ ಅಷ್ಟೇ ಸೀಮಿತವಾಗಿದ್ದು, ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮೀ ನುಡಿದಂತೆ ನಡೆದುಕೊಳ್ಳುತ್ತಿಲ್ಲ.

      ದಲಿತ ಶಾಸಕರಿಗೆ, ಸಚಿವರಿಗೆ ಈ ರೀತಿ ಸರ್ಕಾರದಲ್ಲಿ ಅನ್ಯಾಯ, ಶೋಷಣೆಯಾದರೇ ಸಾಮಾನ್ಯ ಜನರ ಸ್ಥಿತಿ ಏನೂ, ಗ್ರಾಮೀಣ ಭಾಗದ ನಮ್ಮ ದಲಿತರು ನಾನಾ ರೀತಿಯ ಅನ್ಯಾಯಕ್ಕೊಳಗಾದರೇ ಅವರನ್ನು ಕೇಳುವರ್ಯಾರು ಎಂದು ಪ್ರಶ್ನಿಸಿದರು. ಸರ್ಕಾರದ ಪ್ರಬಾವಿ ಸಚಿವರಿಗೆ ಈಗಾಗಲೇ ಕ್ವಾಟರ್ಸ್‍ಗಳನ್ನು ಹಂಚಿಕೆ ಮಾಡಲಾಗಿದೆ.

      ಆದರೇ, ಇಲ್ಲಿವರೆಗೆ ಪ್ರಾಥಮಿಕ ಹಾಗೂ ಪ್ರೌಡ ಶಿಕ್ಷಣ ಸಚಿವ ಎನ್.ಮಹೇಶ್ ಅವರಿಗೆ ಕ್ವಾಟರ್ಸ್‍ನ್ನು ಹಂಚಿಕೆ ಮಾಡದೇ ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗಿದೆ. ದಲಿತರಿಗೆ ಸಮ್ಮಿಶ್ರ ಸರ್ಕಾರದಲ್ಲಿ ಕಿಮ್ಮತ್ತಿಲ್ಲ ಎನ್ನುವದಕ್ಕೆ ಇದೊಂದೆ ನಿದರ್ಶನವಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಸರ್ಕಾರ ದಲಿತರನ್ನು ಇದೇ ರೀತಿ ನಿರ್ಲಕ್ಷ್ಯವಹಿಸಿದರೇ ಸಂಘರ್ಷ ಸಮೀತಿ ಆಶ್ರಯದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಎಚ್.ಲಕ್ಷ್ಮಣ ಜುವೆದಾರ್, ಮುಖಂಡರಾದ ನಿಂಗಪ್ಪ, ಕವಾಲಿ ವೆಂಕಟರಮಣ, ಅಂದಾನಿ ಸೋಮನಹಳ್ಳಿ, ಎಚ್.ಎನ್.ನಂದಕುಮಾರ್, ವಿ.ನಾರಾಯಣಸ್ವಾಮೀ, ಕೆ.ಲಕ್ಷ್ಮೀನಾರಾಯಣ, ಸೂರ್ಯನಾರಾಯಣ ಸೇರಿದಂತೆ ಇತರರು ಇದ್ದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link