60 ಲಕ್ಷ ರೂ. ಅನುದಾನದಲ್ಲಿ ಪಾಲಿಕೆಯಿಂದ ನಗರದಲ್ಲಿ ‘ರಸ್ತೆ ಗುಂಡಿ’ ಮುಚ್ಚುವ ಕಾಮಗಾರಿ

ತುಮಕೂರು

     ಸುಗಮ ಸಂಚಾರಕ್ಕೆ ನೆರವಾಗುವ ದೃಷ್ಟಿಯಿಂದ ತುಮಕೂರು ನಗರದ ಪ್ರಮುಖ ರಸ್ತೆಗಳಲ್ಲಿರುವ ‘ರಸ್ತೆ ಗುಂಡಿ’ (ಪಾಟ್ ಹೋಲ್ಸ್)ಗಳನ್ನು ಮುಚ್ಚುವ ಕಾಮಗಾರಿಯನ್ನು ತುಮಕೂರು ಮಹಾನಗರ ಪಾಲಿಕೆಯು ಆರಂಭಿಸಿದೆ.

      ನಗರದ ಮಹಾನಗರ ಪಾಲಿಕೆ ಕಚೇರಿ ಮುಂಭಾಗದ ರಸ್ತೆ ಅಂದರೆ ರೈಲು ನಿಲ್ದಾಣದ ರಸ್ತೆಯಲ್ಲಿ ಇದೀಗ ಎಲ್ಲ ‘ರಸ್ತೆಗುಂಡಿ‘ಗಳನ್ನು ಮುಚ್ಚಿ ಸರಾಗ ಸಂಚಾರಕ್ಕೆ ಎಡೆಮಾಡಿಕೊಡಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲೊಂದಾದ ಅಶೋಕ ರಸ್ತೆಯಲ್ಲಂತೂ ಈ ಸಮಸ್ಯೆ ದೊಡ್ಡದಾಗಿಯೇ ಕಾಡುತ್ತಿತ್ತು. ವಿವೇಕಾನಂದ ರಸ್ತೆಯಿಂದ ಅಶೋಕ ರಸ್ತೆ ಪ್ರವೇಶಿಸುವ ಸ್ಥಳದಲ್ಲಿ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಆಗಮನ ಮತ್ತು ನಿರ್ಗಮನ ದ್ವಾರಗಳ ಮುಂಭಾಗ ಸೇರಿದಂತೆ ಒಟ್ಟಾರೆ ಆ ರಸ್ತೆಯಲ್ಲಿದ್ದ ಎಲ್ಲ ‘ರಸ್ತೆಗುಂಡಿ’ಗಳಿಗೆ ಟಾರ್ ಹಾಕಿ ರಸ್ತೆಯನ್ನು ಸಮಗೊಳಿಸಲಾಗಿದೆ. ನಗರದ ಇತರೆ ಪ್ರಮುಖ ರಸ್ತೆಗಳಲ್ಲೂ ಇದೇ ರೀತಿ ಪಾಲಿಕೆಯು ಕ್ರಮ ಕೈಗೊಳ್ಳುತ್ತಿದೆ.

      ನಗರದ ಬಟವಾಡಿಯ 80 ಅಡಿ ಮುಖ್ಯರಸ್ತೆಯಲ್ಲಿ ರೈಲ್ವೆ ಗೇಟ್ ಬಳಿ ಇರುವ ಖಾದರ್‌ನಗರದ ಬಳಿ, ಸದಾಶಿವನಗರದಲ್ಲಿ, ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ- ಹೀಗೆ ನಗರದ ಪ್ರಮುಖ ರಸ್ತೆಗಳಲ್ಲಿ ‘ರಸ್ತೆ ಗುಂಡಿ’ಗಳನ್ನು ಟಾರ್ ಹಾಕಿ ಮುಚ್ಚಲಾಗುತ್ತಿದೆ ಎಂದು ಮಹಾನಗರ ಪಾಲಿಕೆಯ ಮೂಲಗಳು ತಿಳಿಸಿವೆ.

60 ಲಕ್ಷ ಅನುದಾನದಲ್ಲಿ  ‘‘ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿಯನ್ನು 60 ಲಕ್ಷ ರೂ.ಗಳ ಅನುದಾನದಲ್ಲಿ ಮಹಾನಗರ ಪಾಲಿಕೆಯು ಕೈಗೊಂಡಿದೆ. ಈಗಾಗಲೇ ಕೆಲವು ರಸ್ತೆಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ. ಇದೀಗ ಮಿಕ್ಕ ಹಣದಲ್ಲಿ ಮತ್ತೆ ಕಾಮಗಾರಿಯನ್ನು ಮುಂದುವರೆಸಲಾಗುತ್ತಿದೆ. ಈ ಹಣದಲ್ಲಿ ಎಷ್ಟು ಸಾಧ್ಯವೋ ಅಷ್ಟು ‘ರಸ್ತೆಗುಂಡಿ’ಗಳನ್ನು ಈಗ ಟಾರ್ ಹಾಕಿ ಮುಚ್ಚಲಾಗುತ್ತಿದೆ’’ ಎಂದು ಪಾಲಿಕೆಯ ಮೂಲಗಳು ‘ಪ್ರಜಾಪ್ರಗತಿ’ಗೆ ಹೇಳಿವೆ.

ಕ್ರಮಕ್ಕೆ ಸ್ವಾಗತ   ‘‘ನಗರಾದ್ಯಂತ ವಿಶೇಷವಾಗಿ ಪ್ರಮುಖ ರಸ್ತೆಗಳಲ್ಲಿ ಉಂಟಾಗಿರುವ ‘ರಸ್ತೆಗುಂಡಿ’ಗಳು ಸುಗಮ ಸಂಚಾರಕ್ಕೆ ತೊಡಕಾಗಿದ್ದು, ವಾಹನಗಳ ಸವಾರರು ಮತ್ತು ಚಾಲಕರು ವಿಪರೀತ ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲವೆಡೆಗಳಲ್ಲಿ ರಸ್ತೆಗಳ ಸ್ಥಿತಿ ತೀರಾ ಹದಗೆಟ್ಟು ‘ರಸ್ತೆ ಗುಂಡಿ’ಗಳಂತೂ ಅಪಾಯಕಾರಿಯಾಗಿದ್ದು, ಅಪಘಾತಗಳಿಗೆ ಕಾರಣವಾಗುತ್ತಿವೆ. ಮಳೆ ಬಂದಾಗಲಂತೂ ಆಗುವ ತೊಡಕನ್ನು ವರ್ಣಿಸಲಾಗದು. ರಸ್ತೆ ಯಾವುದು? ಗುಂಡಿ ಯಾವುದು? ಎಂಬುದೇ ಗೊತ್ತಾಗದಂತಹ ಸ್ಥಿತಿ ಇದೆ. ಆದ್ದರಿಂದ ‘ರಸ್ತೆ ಗುಂಡಿ’ ಮುಚ್ಚುವ ಕಾಮಗಾರಿಯನ್ನು ಮಹಾನಗರ ಪಾಲಿಕೆಯು ಕೈಗೊಂಡಿರುವುದು ಸ್ವಾಗತಾರ್ಹ. ಈ ಕಾಮಗಾರಿಯು ತ್ವರಿತವಾಗಿ ಹಾಗೂ ಗುಣಮಟ್ಟದಿಂದ ಆಗಬೇಕು. ಜೊತೆಗೆ ಪಾರದರ್ಶಕವಾಗಿಯೂ ಇರಬೇಕಷ್ಟೇ’’ ಎಂದು ನಗರದ ಹೋರಾಟಗಾರರು ಹೇಳುತ್ತಿದ್ದಾರೆ.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link