ಕುಣಿಗಲ್:
ತಾಲ್ಲೂಕಿನಲ್ಲಿ ಅತೀವೃಷ್ಠಿಯಿಂದಾಗಿ ರಾಗಿ ಬೆಳೆ ಸಂಪೂರ್ಣ ನೆಲ ಕಚ್ಚಿದೆ. ತೆನೆಗಳು ಕೊಯ್ಲಿಗೂ ಮುನ್ನ ಮಣ್ಣು ಹಿಡಿದು ಮೊಳಕೆ ಒಡೆದು ಹಾಳಾಗುತ್ತಿವೆ. ಇದರಿಂದ ಮೊದಲೆ ಕೋವಿಡ್ ಸಂಕಷ್ಟದಲ್ಲಿದ್ದ ರೈತರ ಬಾಳು ಮತ್ತಷ್ಟು ಹದಗೆಟ್ಟಿದೆ.
ಬಿಟ್ಟೂ ಬಿಡದೆ ಬೀಳುತ್ತಿರುವ ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ಸುಮಾರು 32 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಷ್ಟಪಟ್ಟು ಬೆಳೆದಿದ್ದ ರಾಗಿ ಬೆಳೆಯಲ್ಲಿ ಶೇ.70ರಷ್ಟು ರಾಗಿ ನೆಲಕಚ್ಚಿದ್ದು, ರಾಗಿಬೆಲೆ ಮಳೆ ನೀರಲ್ಲಿ ಸಂಪೂರ್ಣ ಮುಳುಗಿ ಹೋಗಿದ್ದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಇದರಿಂದ ಕಂಗಾಲಾದ ರೈತರು ಬೇಡದ ಮಳೆ ನಮ್ಮ ಬದುಕನ್ನೆ ಕಸಿದುಕೊಂಡಂತಾಗಿದೆ. ಇಂತಹ ಅಕಾಲಿಕ ಮಳೆ ಬಂದರೆಷ್ಟು, ಬಿಟ್ಟರೆಷ್ಟು ಎಂದು ವರಣನಿಗೆ ಹಿಡಿ ಶಾಪ ಹಾಕುತ್ತ, ತಲೆ ಮೇಲೆ ಕೈಹೊತ್ತು, ದಿಕ್ಕು ತೋಚದಂತೆ ಕುಳಿತಿದ್ದಾರೆ.
ಕೆರೆಯಾದ ತೋಟಗಳು :
ಹೆಚ್ಚು ಮಳೆ ಸುರಿದಿರುವುದರಿಂದ ಕೆರೆಯಲ್ಲಿ ಜೌಗು ಹೆಚ್ಚಾಗಿ ಅಚ್ಚು ಕಟ್ಟು ಪ್ರದೇಶಗಳಲ್ಲಿ ಹೆಚ್ಚು ನೀರು ನಿಂತು, ಜಮೀನುಗಳು ಚಿಕ್ಕ ಕಟ್ಟೆ ಕೆರೆಗಳಂತಾಗಿದ್ದು ಅಡಕೆ, ತೆಂಗಿನ ತೋಟಗಳಿಗೆ ಅಪಾಯ ಉಂಟಾಗಿದೆ. ಇಷ್ಟೆಲ್ಲಾ ಅನಾಹುತಗಳು ನಡೆದರೂ ಜಡ್ಡು ಗಟ್ಟಿರುವ ಕೃಷಿ ಇಲಾಖೆಯೂ, ರೈತರಿಗೆ ಸಮರ್ಪಕ ಮಾಹಿತಿ ನೀಡುವಲ್ಲಿ ವಿಫಲವಾಗಿದ್ದು, ರೈತರ ಸಂಕಷ್ಟದ ವೇಳೆ ನೆರವಾಗುವುದನ್ನು ಮರೆತಂತೆ ಕಾಣುತ್ತಿದೆ. ಎಷ್ಟೋ ರೈತರು ಕೃಷಿ ಬಗ್ಗೆ ಮಾಹಿತಿ ತಿಳಿಯಲು ಇಲಾಖೆಗೆ ಬಂದರೆ ಸಮರ್ಪಕ ಮಾಹಿತಿ ಸಿಗದೇ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ್ದಾರೆ. ಮಳೆ ಪ್ರಮಾಣ ಹೆಚ್ಚಾಗುವ ಮುನ್ನ ಸರಿಯಾದ ಮಾಹಿತಿ ನೀಡಿದ್ದರೆ ಎಷ್ಟೋ ರೈತರು ಎಚ್ಚರಿಕೆಯ ಹೆಜ್ಜೆಯನ್ನಾದರೂ ಹಿಡಿಯುವ ಮೂಲಕ ನಷ್ಠದಿಂದ ಹೊರ ಬರುತ್ತಿದ್ದರು. ಈಗ ಅಧಿಕಾರಿಗಳು, ಜನಪ್ರತಿನಿಧಿಗಳು, ಬೆಳೆ ಹಾಳಾಗಿರುವ ರೈತರ ಬೆಳೆಗಳನ್ನು ಗುರ್ತಿಸಿ ಪರಿಹಾರ ಕೊಡಿಸಲು ಎಷ್ಟರ ಮಟ್ಟಿಗೆ ಮುಂದಾಗುವರು ಎಂಬ ಪ್ರಶ್ನೆ ತಾಲ್ಲೂಕಿನ ರೈತ ಸಮುದಾಯದಲ್ಲಿ ಕಾಡುತ್ತಿದೆ.
ಡ್ಯಾಂಗೆ ಅಧಿಕ ನೀರು, ಆತಂಕದಲ್ಲಿ ರೈತರು : ಸತತ ಬೀಳುತ್ತಿರುವ ಮಳೆಯಿಂದ ತಾಲೂಕಿನಾದ್ಯಂತ ಈಗಾಗಲೇ ಚಿಕ್ಕ ಕೆರೆಗಳು ತುಂಬಿ ಕೋಡಿ ಹರಿಯುತ್ತಿವೆ, ನೀರಿಲ್ಲದೆ ಬತ್ತಿ ಹೋಗಿದ್ದ ಕೊಳವೆ ಬಾವಿಗಳೆಲ್ಲ ರೀಚಾರ್ಜ್ ಆಗಿ ನೀರು ಹರಿಯುತ್ತಿವೆ. ಇತಿಹಾಸ ಪ್ರಸಿದ್ಧ ಮಾರ್ಕೋನಹಳ್ಳಿ ಜಲಾಶಯದ ಒಳ ಹರಿವು ಹೆಚ್ಚಾದ ನಂತರ ನೀರು ಹೊರಹಾಕಲು ಏಷಿಯಾ ಖಂಡದಲ್ಲಿಯೆ ಮೊದಲ ಸ್ವಯಂ ಚಾಲಿತ ಎರಡು ಗೇಟ್‍ಗಳ ಮೂಲಕ ನೀರು ಹೊರ ಹಾಕಲಾಗುತ್ತಿದ್ದು ಡ್ಯಾಂನ ರಕ್ಷಣೆ ಮಾಡಲಾಗಿದೆ. ಡ್ಯಾಂನ ಕೋಡಿಯಲ್ಲೂ ಸಹ ನೀರು ರಭಸವಾಗಿ ಹೊರ ಹೋಗುತ್ತಿದ್ದು, ಡ್ಯಾಮ್‍ನ 5ಗೇಟ್‍ಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಡ್ಯಾಂಗೆ ತುರುವೇಕೆರೆ ಭಾಗದ ಕೋಡಿಯಾದ ಕೆರೆಗಳ ನೀರು ಹೆಚ್ಚಾಗಿ ಬರುತ್ತಿದ್ದು, ನೀರು ಜಾಸ್ತಿಯಾದರೆ ಡ್ಯಾಂನ ಗತಿಯೇನು ಎಂಬುದು ರೈತರ ಆತಂಕಕ್ಕೆ ಕಾರಣವಾಗಿದೆ.
ಮುಂದಾಗುವ ಅನಾಹುತ ತಪ್ಪಿಸಲಿ : ಮುಂಜಾಗ್ರತಾ ಕ್ರಮವಾಗಿ ಇಂಜಿನಿಯರ್‍ಗಳು ಗೇಟ್‍ಗಳು ಸರಿಯಾಗಿ ಕೆಲಸ ಮಾಡುತ್ತಿವೆಯೊ, ಇಲ್ಲವೊ ಎಂಬುದನ್ನು ಮೊದಲೇ ನೋಡಿಕೊಳ್ಳದೆ ಡ್ಯಾಂನ ವಿಚಾರವಾಗಿ ತುಂಬ ನಿರ್ಲಕ್ಷ್ಯವಹಿಸಿರುವುದು ಎದ್ದು ಕಾಣುತ್ತಿದೆ. ಡ್ಯಾಂನಲ್ಲಿ ನೀರು ಜಾಸ್ತಿಯಾದಾಗ ಎಂಜಿನಿಯರ್‍ಗಳು ತಡವರಿಸುತ್ತಿದ್ದು, ಜಲಾಶಯದ ಕೆಳಭಾಗದಲ್ಲಿರುವ ಹಲವಾರು ಹಳ್ಳಿಗಳ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆಯೂ ಇದೆ. ಮಾರ್ಕೋನಹಳ್ಳಿ ಜಲಾಶಯದಿಂದ ಸಾವಿರಾರು ಜನರ ಬಾಳು ಹಸನಾಗಿದ್ದು, ಇದೀಗ ಡ್ಯಾಂನ ಒಳ ಹರಿವು ದಿನೆ ದಿನೆ ಹೆಚ್ಚುತ್ತಿದ್ದು, ಸಂಬಂಧ ಪಟ್ಟ ಅಧಿಕಾರಿಗಳೆಲ್ಲ ದಿನ ಪೂರ್ತಿ ಡ್ಯಾಂನ ಸಮೀಪವಿದ್ದು ನಿಗಾವಹಿಸುವ ಮೂಲಕ ಮುಂದಾಗುವ ಅನಾಹುತಗಳನ್ನು ತಪ್ಪಿಸಲಿ ಎಂಬುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.
ಪರಿಹಾರದ ಭರವಸೆ ನೀಡಿದ ಶಾಸಕ :
ತಾಲೂಕಿನಾದ್ಯಂತ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸಾವಿರಾರು ರೈತರ ರಾಗಿ ಬೆಳೆ ನೆಲ ಕಚ್ಚಿದ್ದು, ರೈತರ ಹೊಲಗಳಿಗೆ ಶಾಸಕ ಡಾ.ರಂಗನಾಥ್ ಅವರು ಕೃಷಿ, ಕಂದಾಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರೈತರಿಗೆ ಧೈರ್ಯ ತುಂಬಿ, ಬೆಳೆ ನಷ್ಟವಾಗಿರುವ ರೈತರು ಕೃಷಿ ಇಲಾಖೆಯಲ್ಲಿ ಕಡ್ಡಾಯವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಿ ಸರ್ಕಾರದಿಂದ ನಿಯಮಾನುಸಾರ ಬೆಳೆಹಾನಿ ಪರಿಹಾರ ಕೊಡಿಸುವ ಮಾತುಗಳನ್ನಾಡಿ ರೈತರಿಗೆ ಧೈರ್ಯ ತುಂಬುತ್ತಿದ್ದಾರೆ.
ಎಚ್ಚರಿಕೆ ನೀಡಿದ ರೈತ ಸಂಘಟನೆಗಳು : ಮಳೆಹಾನಿಯಿಂದ ರೈತರಿಗಾದ ನಷ್ಟ ಪರಿಹಾರವನ್ನು ಅಧಿಕಾರಿಗಳು ಸಮರ್ಪಕವಾಗಿ ವಿತರಿಸಬೇಕು. ಪರಿಹಾರದ ಹಣವನ್ನು ರೈತರಿಗೆ ನೀಡುವಲ್ಲಿ ವಿಫಲರಾದರೆ ಉಗ್ರಹೋರಾಟ ಮಾಡಲಾಗುವುದು ಎಂದು ರಾಜ್ಯ ಹಸಿರುಸೇನೆ ಹಾಗೂ ರೈತ ಸಂಘದ ಜಿಲ್ಲಾ ಅಧ್ಯಕ್ಷ ಆನಂದ್‍ಪಟೇಲ್, ರೈತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಬೀಚನಹಳ್ಳಿ ಕರೀಗೌಡ, ರಾಜ್ಯ ಮಾಹಿತಿ ಹಕ್ಕು ಹೋರಾಟಗಾರರ ಸಂಘದ ರಾಜ್ಯಾಧ್ಯಕ್ಷ ಹೆಚ್.ಜಿ.ರಮೇಶ್ ಎಚ್ಚರಿಕೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
