ಜನಪ್ರತಿನಿಧಿಗಳನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಪತ್ರಿಕೆಗಳು ಮಹತ್ವದ ಪಾತ್ರವಹಿಸುತ್ತವೆ.

ಚಳ್ಳಕೆರೆ

      ಸಮಾಜದಲ್ಲಿ ಕಳೆದ ಹಲವಾರು ದಶಕಗಳಿಂದ ಜನರಿಗೆ ಸರ್ಕಾರದ ಹಲವಾರು ಯೋಜನೆಗಳನ್ನು ಪರಿಚಯಿಸುವುದರಲ್ಲಿ ಪತ್ರಿಕೆಗಳ ಪಾತ್ರ ಹೆಚ್ಚಿದೆ. ವಿಶೇಷವಾಗಿ ಸರ್ಕಾರದ ಹಾಗೂ ಚುನಾಯಿತ ಜನಪ್ರತಿನಿಧಿ ಜನರ ಸಮಸ್ಯೆಗೆ ಸ್ಪಂದಿಸದೆ ಯಾವುದೇ ರೀತಿಯಲ್ಲೂ ಜನರಿಗೆ ಸೌಲಭ್ಯಗಳು ದೊರೆಯದ ಸಮಯದಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳನ್ನ ತಮ್ಮದೇಯಾದ ವರದಿಗಳ ಮೂಲಕ ಗಮನ ಸೆಳೆಯುವುದರಲ್ಲಿ ಪತ್ರಿಕೆಗಳ ಪಾತ್ರ ಮಹತ್ವದುಳ್ಳದಾಗಿದೆ. ಪತ್ರಿಕೆಗಳು ಸಹ ಸುಧಾರಣೆಯ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಹೆಚ್ಚು ಪರಿಶ್ರಮವನ್ನು ವಹಿಸುತ್ತಿರುವುದು ಸ್ವಾಗತಾರ್ಹ ವಿಷಯವೆಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

      ಅವರು, ಶನಿವಾರ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಚಳ್ಳಕೆರೆ ತಾಲ್ಲೂಕು ಸಮಗ್ರ ಅಭಿವೃದ್ಧಿಯಲ್ಲಿ ಮಾದ್ಯಮಗಳ ಪಾತ್ರ ಕುರಿತು ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಈ ಕಾರ್ಯಕ್ರಮ ಆಯೋಜಿಸಿತ್ತು. ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಹಾಗೂ ಎಲೆಕ್ಟ್ರಾನಿಕ್ ಮೀಡಿಯಾಗಳು ರಾಜ್ಯದ ಹಲವಾರು ಸಮಸ್ಯೆಗಳು ಹಾಗೂ ಬೆಳವಣಿಗೆಯ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪ್ರಚಾರವನ್ನು ಮಾಡುವ ಮೂಲಕ ಜನತೆಗೆ ಹೆಚ್ಚಿನ ವಿಷಯವನ್ನು ಕಡಿಮೆ ಅವಧಿಯಲ್ಲಿ ತಿಳಿಸುತ್ತದೆ.

      ಪತ್ರಿಕೆಗಳು ಇಂದು ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ. ಹಲವಾರು ಸಮಸ್ಯೆಗಳ ನಡುವೆಯೂ ಸಹ ಪತ್ರಿಕೆ ಹಾಗೂ ಪತ್ರಕರ್ತರು ಪತ್ರಿಕಾ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿಯುವುದರಲ್ಲಿ ಸಫಲರಾಗಿದ್ಧಾರೆ. ಯಾವುದೇ ಸಂದರ್ಭದಲ್ಲೂ ಸಹ ಕಳಂಕ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಪತ್ರಿಕೆಗಳ ಮತ್ತು ಪತ್ರಕರ್ತರು ಸಮಾಜ ಮತ್ತು ಸರ್ಕಾರದ ಉಸಿರು ಎಂದರೆ ತಪ್ಪಾಗದು ಎಂದು ಹೇಳಿದರು.

      ಸಂದರ್ಶಕ ಪ್ರಾಧ್ಯಾಪಕ ಡಾ.ನಟರಾಜು ತಮ್ಮ ಉಪನ್ಯಾಸ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಸಮಗ್ರ ಅಭಿವೃದ್ಧಿಯಲ್ಲಿ ಮಾಧ್ಯಗಳ ಪಾತ್ರ ಕುರಿತು ಸಂವಾದವನ್ನು ಹಮ್ಮಿಕೊಳ್ಳಲಾಗಿದೆ. ಕೇವಲ ಇದು ಈ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿದೆ. ಆದರೆ, ಸಮಗ್ರವಾಗಿ ಆಲೋಚಿಸಿದಾಗ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಹೆಚ್ಚಿನ ಪಾತ್ರವನ್ನು ನಿರ್ವಹಿಸುವುದು ಪತ್ರಿಕಾ ಕ್ಷೇತ್ರ ಹಾಗೂ ಪತ್ರಕರ್ತರು. ಚಳ್ಳಕೆರೆ ಕ್ಷೇತ್ರ ಕಳೆದ ಐದು ವರ್ಷಗಳಿಂದ ದಾಖಲಾರ್ಹ ಅಭಿವೃದ್ಧಿಯನ್ನು ಹೊಂದಿದೆ.

      ಈ ಅಭಿವೃದ್ಧಿಯಲ್ಲಿ ಕ್ಷೇತ್ರದ ಶಾಸಕರು ಸಂಪೂರ್ಣವಾಗಿ ತೊಡಗಿಕೊಂಡು ರಾಜ್ಯವೇ ಮೆಚ್ಚುವಂತಹ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ಧಾರೆ. ಈಗಾಗಲೇ ನಾಡಿನ ಹಲವಾರು ಪ್ರದೇಶಗಳಿಂದ ಆಗಮಿಸುವ ಜನರು ಈ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಹೆಚ್ಚು ಸಂತಸವನ್ನು ವ್ಯಕ್ತ ಪಡಿಸುತ್ತಿದ್ಧಾರೆ. ಶೈಕ್ಷಣಿಕ ಕ್ಷೇತ್ರದಲ್ಲೂ ಸಹ ಗಮನಾರ್ಹ ಬದಲಾವಣೆಯತ್ತ ಹೆಜ್ಜೆ ಇಡಲಾಗಿದೆ. ಈ ಕ್ಷೇತ್ರ ನಿರಂತರ ಬರಗಾಲದ ಬವಣೆಯಲ್ಲಿ ರೈತರು ಪರಿತಪಿಸುತ್ತಿದ್ದು, ಎಲ್ಲಾ ಜನರಿಗೆ ಅನುಕೂಲವಾಗುವಂತೆ ಶಾಸಕರು ಈ ಕ್ಷೇತ್ರದಲ್ಲಿ ಉದ್ಯೋಗಗಳನ್ನು ನೀಡುವಂತಹ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದರು.

      ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ನರೇನಹಳ್ಳಿ ಅರುಣ್‍ಕುಮಾರ್ ಮಾತನಾಡಿ, ಪ್ರಸ್ತುತ ಸ್ಥಿತಿಯಲ್ಲಿ ಸಮಾಜದ ಹಲವಾರು ಸಮಸ್ಯೆಗಳ ಬಗ್ಗೆ ಜನರ ಗಮನ ಸೆಳೆಯುವುದಲ್ಲದೆ ಅಧಿಕಾರಿಗಳಲ್ಲಿ ಮತ್ತು ರಾಜಕಾರಣಿಗಳಲ್ಲಿ ತಮ್ಮ ಕರ್ತವ್ಯ ಪ್ರಜ್ಞೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಪತ್ರಿಕೆಗಳು ಯಶಸ್ಸಿಯಾಗಿವೆ. ಇಂದು ಯಾವುದೇ ಕ್ಷೇತ್ರದಲ್ಲಿ ಬದಲಾವಣೆಯ ಪರ್ವ ಪ್ರಾರಂಭವಾಗಿದ್ದಲ್ಲಿ ಅಲ್ಲಿ ಪತ್ರಿಕೆಗಳ ಪಾತ್ರವೇ ಹೆಚ್ಚು. ಸಮಾಜದವನ್ನು ಕಾಡುವ ಹಲವಾರು ಸಮಸ್ಯೆಗಳ ಬಗ್ಗೆ ಮತ್ತು ರಾಜಕಾರಣಿಗಳ ನಿರ್ಲಕ್ಷ್ಯೆಯ ಬಗ್ಗೆ ಪತ್ರಿಕೆಗಳು ಮಾತ್ರ ದೈರ್ಯವಾಗಿ ನೈಜ ಸ್ಥಿತಿಯನ್ನು ಜನರ ಮುಂದೆ ಇಡುತ್ತವೆ.

      ಇಂದಿಗೂ ಸಹ ಪತ್ರಿಕಾ ಕ್ಷೇತ್ರ ಹೆಚ್ಚು ಪ್ರಭಾವ ಹಾಗೂ ಮೌಲ್ಯವನ್ನು ಹೊಂದಿದ್ದು, ಈ ಮೌಲ್ಯವೇ ಈ ಕ್ಷೇತ್ರದ ಗೌರವವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯವಾಗಿದೆ ಎಂದರು.

       ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಎಚ್.ಲಕ್ಷ್ಮಣ್ ಮಾತನಾಡಿ, ಹಲವಾರು ದಶಕಗಳಿಂದ ಮೂಲಭೂತ ಸೌಕರ್ಯಗಳ ಕೊರತೆ ಇದ್ದರೂ ಸಹ ಪತ್ರಕರ್ತರು ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ಧಾರೆ. ಬೇರೆ ಎಲ್ಲಾ ಕ್ಷೇತ್ರಗಳಲ್ಲೂ ಹಲವಾರು ರೀತಿಯ ಭ್ರಷ್ಟಾಚಾರ ತಾಂಡವಾಡುತ್ತಿದ್ದರೂ ಪತ್ರಿಕಾ ಕ್ಷೇತ್ರದ ಪಾವಿತ್ರತೆಗೆ ಯಾವುದೇ ದಕ್ಕೆ ಬಂದಿಲ್ಲವೆಂದರು. ಕಾರ್ಯಕ್ರಮ ಉದ್ದೇಶಿಸಿ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಸ್ಥಾಪಕ ಅಧ್ಯಕ್ಷ ಸೋಮಗುದ್ದು ರಂಗಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಿರಿಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಜಿಲ್ಲಾ ರೈತ ಸಂಘದ ಅಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿದರು.

      ವೇದಿಕೆಯಲ್ಲಿ ಹಿರಿಯ ಲೇಖಕ ಬಿ.ತಿಪ್ಪಣ್ಣ ಮರಿಕುಂಟೆ, ಜಿಲ್ಲಾ ಪಂಚಾಯಿತಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಪಿ.ಪ್ರಕಾಶ್‍ಮೂರ್ತಿ, ಹಿರಿಯ ಪತ್ರಕರ್ತ ಟಿ.ಕೆ.ಬಸವರಾಜು, ಉಪಾಧ್ಯಕ್ಷರಾದ ಬಿ.ಕುಮಾರಸ್ವಾಮಿ, ನಾಗರಾಜಕಟ್ಟೆ, ಪ್ರಧಾನ ಕಾರ್ಯದರ್ಶಿ ದಿನೇಶ್‍ಗೌಡಗೆರೆ, ಕಾರ್ಯದರ್ಶಿ ಡಿ.ಈಶ್ವರಪ್ಪ, ಸಿ.ವೈ.ಶಿವರುದ್ರಪ್ಪ, ರಾಜ್ಯ ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಸಿರಿಗೆರೆ ತಿಪ್ಪೇಶ್, ಕೆ.ಶಿವಕುಮಾರ್, ಬಿ.ಎಸ್.ಲಕ್ಷ್ಮಣ್, ನಾವೆಲ್ಲಾ ಮಹೇಶ್, ರಾಜಪರಶುರಾಮನಾಯಕ ಮುಂತಾದವರು ಉಪಸ್ಥಿತರಿದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link