ಚಳ್ಳಕೆರೆ
ಪ್ರತಿವರ್ಷವೂ ತಾಲ್ಲೂಕಿನ ಗೌರಸಮುದ್ರ ಶ್ರೀಮಾರಮ್ಮ ದೇವಿ ಜಾತ್ರೆ ನಂತರ ನಗರ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಲ್ಲಿ ಮಾರಮ್ಮ ಹಬ್ಬವನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸುವುದು ನಡೆದುಕೊಂಡು ಬಂದ ಪದ್ದತಿಯಾಗಿದೆ. ಈ ಹಬ್ಬದ ವಿಶೇಷವೆಂದರೆ ಯಾವುದೇ ರೀತಿಯ ಕಷ್ಟಗಳನ್ನು ಕೊಡದೆ ಆರೋಗ್ಯ ಮತ್ತು ಇತರೆ ಭಾಗ್ಯಗಳನ್ನು ನೀಡುವಂತೆ ದೇವಿಯಲ್ಲಿ ಪ್ರಾರ್ಥಿಸಿ ಪ್ರಾಣಿ ಬಲಿ ಕೊಡುವುದು ವಾಡಿಕೆಯಾಗಿದೆ.
ನಗರದ ಕಾಟಪ್ಪನಹಟ್ಟಿ, ಚಿತ್ರಯ್ಯನಹಟ್ಟಿ, ಗಾಂಧಿನಗರ, ಮದಕರಿನಗರ, ರಹೀಂನಗರ ಮುಂತಾದ ಕಡೆಗಳಲ್ಲಿ ಈ ಬಾರಿ ಮಾರಮ್ಮನ ಹಬ್ಬಕ್ಕೆ ವಿಶೇಷ ಕಳೆ ಬಂದಿದೆ. ಕಾರಣ ಈ ಬಾರಿ ಕುರಿ ಮತ್ತು ಮೇಕೆಗಳ ದಂಡು ಹೆಚ್ಚಾಗಿದ್ದು, ಕುರಿ ಮತ್ತು ಮೇಕೆ ಖರೀದಿರುವವರ ಸಂಖ್ಯೆ ಹೆಚ್ಚಾಗಿದೆ. ಇಲ್ಲಿನ ಬಳ್ಳಾರಿ ರಸ್ತೆಯಲ್ಲಿರುವ ಕುರಿ ಮಾರಾಟ ಕೇಂದ್ರದ ಸುತ್ತಮುತ್ತ ಭಾನುವಾರ ಕುರಿಗಳನ್ನು ಖರೀದಿಸಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಅದೇ ರೀತಿ ಸಾವಿರಾರು ಕುರಿಗಳು ಸಹ ಭಕ್ತರ ಮನೆ ಸೇರಲು ಹಾಗೂ ದೇವಿಯ ಪಾದ ಸೇರಲು ಸಿದ್ದವಾಗಿ ನಿಂತಿದ್ದವು.
ಇತ್ತೀಚೆಗೆ ತಾನೇ ನಗರಸಭೆ ಚುನಾವಣೆ ಮುಗಿದಿದ್ದು, ಈ ಚುನಾವಣೆಯಲ್ಲಿ ಕೆಲವು ವಾರ್ಡ್‍ಗಳಲ್ಲಿ ಮಾತ್ರ ಅಭ್ಯರ್ಥಿಗಳು ಮತಗಳಿಸಲು ಕಂತೆ ಕಂತೆ ಹಣವನ್ನು ಮತದಾರರಿಗೆ ನೀಡಿದ್ದು, ಚುನಾವಣೆಯ ಗರಿ ಗರಿ ನೋಟುಗಳು ಈಗ ಕುರಿ ಮೇಕೆ ಖರೀದಿಗೆ ಚಲಾವಣೆಯಾಗುತ್ತಿವೆ. ಈ ಹಿಂದೆ 4 ಹಲ್ಲಿನ ಒಂದು ಕುರಿಗೆ ಇದ್ದ ದರ 5 ರಿಂದ 8 ಸಾವಿರವಾದರೆ ಈಗ ಆ ದರ 10 ರಿಂದ 15 ಸಾವಿರ ಏರಿದೆ. 8 ಹಲ್ಲಿನ ಕುರಿಗಳು 15 ರಿಂದ 20 ಸಾವಿರ ರೂವರೆಗೂ ಹೆಚ್ಚಳವಾಗಿದೆ.
ಕುರಿ ಖರೀದಿ ಮಾಡಲು ಬಂದ ಹಲವಾರು ಜನರು ಪತ್ರಿಕೆಯೊಂದಿಗೆ ಮಾತನಾಡಿ, ಈ ಬಾರಿ ಕುರಿಯ ಖರೀದಿ ದರ ಪೆಟ್ರೋಲ್, ಡಿಸೇಲ್‍ನಂತೆ ಗಗನಕ್ಕೆ ಏರಿದ್ದು ಕೊಳ್ಳುವವರ ಸಂಖ್ಯೆಯೂ ಹೆಚ್ಚಿದ್ದು, ಯಾವುದೇ ಹಂತದಲ್ಲೂ ದರಗಳು ಇಳಿಯುವ ಸಾಧ್ಯತೆ ಇಲ್ಲ. ಪ್ರತಿಯೊಬ್ಬರೂ ಸಹ ಈ ಹಬ್ಬವನ್ನು ಮಾಡುವ ನಿಟ್ಟಿನಲ್ಲಿ ದರ ಎಷ್ಟಾದರೂ ಖರೀದಿಸಲು ಸಿದ್ದರಾಗಿದ್ಧಾರೆ.
ಒಟ್ಟಿನಲ್ಲಿ ಈ ಬಾರಿಯ ಮಾರಮ್ಮನ ಹಬ್ಬಕ್ಕೆ ಕುರಿಗಳ ದರ ಹೆಚ್ಚಿದಂತೆ ಇತರೆ ದರಗಳು ಸಹ ಹೆಚ್ಚುವ ಸಂಭವವಿದೆ. ಆದರೆ, ಹಬ್ಬ ಮಾಡುವ ಕ್ರಮದಲ್ಲಿ ಯಾವುದೇ ಲೋಪವಿಲ್ಲ. ಕಾರಣ ಈ ಹಬ್ಬಕ್ಕೆ ಮಾತ್ರ ನೆಂಟರಿಷ್ಟರು, ಬಂದು ಬಳಗ, ಸ್ನೇಹಿತರು ತಪ್ಪದೆ ಬರುತ್ತಾರೆ. ಆದ್ದರಿಂದ ಈ ಹಬ್ಬ ವಿಶೇಷತೆಯಿಂದ ಕೂಡಿದೆ ಎನ್ನುತ್ತಾರೆ.
ಚುನಾವಣೆ ಎಫೇಕ್ಟ್ :- ವಿಧಾನಸಭಾ, ನಗರಸಭಾ ಚುನಾವಣೆ ಮೇಲಿಂದ ಮೇಲೆ ನಡೆದ ಹಿನ್ನೆಲೆಯಲ್ಲಿ ಜನರಲ್ಲೂ ಸಹ ಹಣದ ಶೇಖರ ಸಂತೃಪ್ತವಾಗಿದ್ದು, ಕನಿಷ್ಟ ಪಕ್ಷ ಒಂದು ಮನೆಗೆ ಎರಡು, ಮೂರು ಕುರಿ(ಬೇಟೆ)ಗಳನ್ನು ಖರೀದಿಸುತ್ತಿದ್ದು ಬೇಡಿಕೆ ಹೆಚ್ಚಾಗಿದ್ದು ದರವೂ ಸಹ ಹೆಚ್ಚಾಗಿದೆ. ಈ ಹಬ್ಬದಲ್ಲಿ ವಿಶೇಷವಾಗಿ ಹೆಚ್ಚು ಬೇಟೆಯನ್ನು ಕಡಿಯುವುದೇ ಪದ್ದತಿಯಂತೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ