ವಿಕಲಚೇತನರ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮ

ಹಾನಗಲ್ಲ :

      ವಿಕಲಚೇತನರು ತಮ್ಮ ಪ್ರತಿಭೆಯನ್ನಾಧರಿಸಿ ಉತ್ತಮ ಆರ್ಥಿಕ ಯೋಜನೆಗಳನ್ನು ತಮ್ಮದಾಗಿಸಿಕೊಂಡು ಸಮಾಜದ ಮುಖ್ಯ ವಾಹಿನಿಯಲ್ಲಿ ಹುಬ್ಬೇರಿಸುವಂತೆ ಬದುಕುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ ಎಂದು ಅಸೋಸಿಯೇಶನ್ ಆಫ್ ಪೀಪಲ್ ವಿಥ್ ಡಿಸೆಬಲಿಟಿ ಸಂಸ್ಥೆಯ ವಿಭಾಗೀಯ ಪ್ರತಿನಿಧಿ ಟಿ.ಪುಷ್ಪಾವತಿ ತಿಳಿಸಿದರು

      ಹಾನಗಲ್ಲಿನ ತಾಲೂಕು ಪಂಚಾಯತ ಆವರಣದಲ್ಲಿ ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ತಾಲೂಕು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರ ಸಂಘ, ಗ್ರಾಮೀಣ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಂಘ ಅಸೋಸಿಯೇಶನ್ ಆಫ್ ಪೀಪಲ್ ವಿಥ್ ಡಿಸೆಬಲಿಟಿ ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಕಲಚೇತನರ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಪ್ರತಿಭೆ ಆಧಾರಿತ ಜೀವನ ಸೌಖ್ಯದ ದಾರಿ ಇದೆ. ಕೇವಲ ಹಣ ಅಧಿಕಾರದಿಂದ ಮಾತ್ರ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ.

       ವಿಕಲಚೇತನರು ಅಚ್ಚರಿಯಾಗಿ ತಮ್ಮ ಪ್ರತಿಭೆ ಮೆರೆದು ಉದ್ಯೋಗ, ವ್ಯಾಪಾರ, ಸೇವೆ, ಸಾಮಾಜಿಕ ಜೀವನದಲ್ಲಿ ಗುರುತಿಸಿಕೊಂಡಿದ್ದಾರೆ. ಕೀಳರಿಮೆಯಿಂದ ಹೊರಬಂದು ತಮ್ಮ ಶಕ್ತಿಯನ್ನು ಸದುಪಯೋಗ ಮಾಡಿಕೊಂಡರೆ ಇನ್ನೊಬ್ಬರಲ್ಲಿ ಬಿಕ್ಷೆ ಬೇಡುವ ಸ್ಥಿತಿಯೇ ಬರಲಾರದು. ಸರಕಾರ ಹಾಗೂ ಸಂಘ ಸಂಸ್ಥೆಗಳು ವಿಕಲ ಚೇತನರಿಗಾಗಿ ಕೊಡ ಮಾಡುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

      ವಿಕಲಚೇತನರಿಗೆ ನೀಡುವ ತರಬೇತಿ ಪಡೆಯುವವರು ಅಂಗವಿಕಲರ ಗುರುತಿನ ಚೀಟಿ, ಶೈಕ್ಷಣಿಕ ದಾಖಲಾತಿ, ಆಧಾರ ಕಾರ್ಡ, ಚುನಾವಣಾ ಗುರುತಿನ ಚೀಟಿ, ರೇಶನ್ ಕಾರ್ಡ, ಆದಾಯ ಹಾಗೂ ಜಾತಿ ಪ್ರಮಾಣಪತ್ರ, ಪಾನ್‍ಕಾರ್ಡ, ಬ್ಯಾಂಕ ಖಾತೆ ವಿವರ, ಪಾಸ್‍ಪೋರ್ಟ ಸೈಜ ಭಾವಚಿತ್ರಗಳು, ತರಬೇತಿ ನೇಮಕಾತಿ ಪತ್ರಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಪುಷ್ಪಾ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಪಿಡಿ ಸಂಸ್ಥೆಯ ಪ್ರತಿನಿಧಿ ಎಂ.ಎಸ್.ರಘು, ವಿಕಲಚೇತನರಿಗಾಗಿ ಎಪಿಡಿ ಸಂಸ್ಥೆ ಪ್ರಾಂಜಲ ಮನಸ್ಸಿನಿಂದ ಸಹಾಯಹಸ್ತ ಚಾಚಿದೆ.

     ಇಂದು ಎಪಿಡಿ ಸಂಸ್ಥೆ ಜಿಲ್ಲಾ ಮಟ್ಟದ ಕಛೇರಿಗಳನ್ನು ತೆರೆಯುತ್ತಿದೆ. ಸೇವೆ ಹಾಗೂ ಸಹಕಾರಕ್ಕಾಗಿ ನಮ್ಮನ್ನು ಸಂಪರ್ಕಿಸಿರಿ. ಇಲ್ಲಿ ಕೊಡುತ್ತಿರುವ ತರಬೇತಿಗಳು ಸ್ವಾವಲಂಬನೆಯ ಸ್ವಚ್ಛ ಬದುಕನ್ನು ನೀಡುತ್ತವೆ. ಹಂಗಿನ ಅನ್ನಕ್ಕಿಂತ ನಮ್ಮ ಶ್ರಮದ ಗಂಜಿಗೆ ಹೆಚ್ಚು ಬೆಲೆ ಇದೆ. ಆದರೆ ಕಷ್ಟಪಟ್ಟು ಸಂಪಾದಿಸುವುದನ್ನು ಕಲಿಯಬೇಕು ಎಂದರು.

      ಕಾರ್ಯಕ್ರಮದಲ್ಲಿ ಅರ್ಜುನ ಜೋಗೇರ, ಶೇಕಪ್ಪ ಹುಲ್ಲತ್ತಿ, ಶೇಕಪ್ಪ ಮಾಸ್ತೇರ, ನಾಗರಾಜ ಬಸಾಪೂರ, ಪ್ರಕಾಶ ಚಾವಡಿ ಮೊದಲಾದವರಿದ್ದರು.

                 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link