ಜ್ಞಾನೇಶ್ವರನ ಸುಮಧುರ ಸಂಗೀತಕ್ಕೆ ಪ್ರೇಕ್ಷಕರು ಫೀದಾ…!

ಬಳ್ಳಾರಿ:

     ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರವಿದೆಯೇ…ಎಂಬ ಶಬ್ದ ಆ ಸುಮಧುರ ಕಂಠದಿಂದ ಹೊರಡುತ್ತಿದ್ದಂತೆಯೇ ಇಡೀ ಸಭಾಂಗಣವೇ ಸ್ತಬ್ಧ. ಎಲ್ಲರ ಗಮನ ಆ ಧ್ವನಿ ಹೊರಡುತ್ತಿದ್ದ ವೇದಿಕೆಯತ್ತ…

       ಆ ಪುಟ್ಟ ಪೋರ ಇದ್ಯಾವುದರ ಗಮನವಿರದೇ ತಾನಾಯ್ತು ತನ್ನ ಪಾಡಾಯ್ತು ಎನ್ನುವಂತೆ ತನ್ನ ಸುಶ್ರಾವ್ಯ ಕಂಠದಿಂದ ಅಮ್ಮ ಎನ್ನುವ ಹಾಡು ಹಾಡುತ್ತಾ ಎಲ್ಲರನ್ನು ಮಂತ್ರಮುಗ್ದಗೊಳಿಸಿದ. ಒಂದು ಹಾಡು ಮುಗಿಯುತ್ತಲೇ ಇನ್ನೊಂದು ಹಾಡು…

       ಇನ್ನೊಂದು..ಹೀಗೆ 40 ನಿಮಿಷಗಳ ಕಾಲ ತನ್ನ ಸುಮಧುರಕಂಠದಿಂದ ಎಲ್ಲರನ್ನು ತನ್ನತ್ತಸೆಳೆದುಬಿಟ್ಟ…ಆ ಬಾಲಕನೇ ಸರಿಗಮಪದ ಖ್ಯಾತಿಯ ಎಮ್ಮಿಗನೂರಿನ ಜ್ಞಾನೇಶ್ವರ.

     ನಗರದ ಹೊರವಲಯದ ಬೆಳಗಲ್ಲು ಗ್ರಾಮದ ನಂದಿ ಇಂಟರ್‍ನ್ಯಾಶನಲ್ ಸ್ಕೂಲ್ ಆವರಣದಲ್ಲಿ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಚಿಗುರು ಸಾಂಸ್ಕತಿಕ ಕಾರ್ಯಕ್ರಮಗಳಲ್ಲಿ ಕೊಡಗನ ಕೋಳಿ ನುಂಗಿತ್ತ ನೋಡವ್ವ ತಂಗಿ.., ಕಾಣದ ಕಡಲಿಗೆ ಹಂಬಲಿಸಿದೆ ಮನ.., ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ ಸೇರಿದಂತೆ ವಿವಿಧ ರೀತಿಯ ಹಾಡುಗಳನ್ನು ತನ್ನ ಸುಮಧುರ ಕಂಠದಿಂದ ಪ್ರಸ್ತುತಪಡಿಸಿ ಎಲ್ಲರಿಂದ ಬೇಷ್ ಎನ್ನುವ ಚಪ್ಪಾಳೆ ಗಿಟ್ಟಿಸಿದ.

     ಪೂರ್ವಿ ಅರಳಕಟ್ಟಿ ಮತ್ತು ಸಂಗಡಿಗರು “ತಬಲಾ ಜುಗಲ್‍ಬಂದಿ” ನೆರೆದಿದ್ದವರನ್ನು ಇನ್ನಷ್ಟು ಕೇಳಬೇಕಿನಿಸುವಂತೆ ಮಾಡಿದರು.
ಭಾರತಿ ಸರ್ಜನ್ ಮತ್ತು ಸಂಗಡಿಗರು ಚನ್ನಪ್ಪ ಚನ್ನಗೌಡ ಕುಂಬಾರ ಮಾಡಿದ ಕೊಡನವ್ವ..ಹಾಡಿಗೆ ಆ ಪುಟ್ಟ ಮಕ್ಕಳ ಸಮೂಹ ನೃತ್ಯ ನೆರೆದಿದ್ದವರನ್ನು ಇನ್ನಷ್ಟು ನೋಡಬೇಕಿನಿಸಿತ್ತು. ಭಾರತಿ ಸರ್ಜನ್ ಅವರು ಕಂಡೆನಾ ಗೋವಿಂದನಾ… ಹಾಡಿಗೆ ನೃತ್ಯ ಪ್ರದರ್ಶಿಸಿದರು.

      ಕೆ.ಎಂ.ಅಜಯ್ ಎನ್ನುವ ಬಾಲಕ ಬಾಲಕೃಷ್ಣನ ಕುರಿತು ಏಕಪಾತ್ರಾಭಿನಾಯ ಬಯಲಾಟ ಸನ್ನಿವೇಶವನ್ನು ಪ್ರಸ್ತುತಪಡಿಸಿದರು. ಕೆ.ಪ್ರತೀಕ್ಷಾ ಜಾನಪದ ಗೀತೆಗಳು ಹಾಡಿದರೇ, ಬಿ.ಸಿ.ಶ್ರೇಯಾ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಿದರು. ಮಹಾಲಕ್ಷ್ಮೀ ಓಡಿಸ್ಸಿ ನೃತ್ಯ ಪ್ರದರ್ಶಿಸಿದರು. ಡಿ.ಭುವನ್ ಸಾಯಿ ಮತ್ತು ಸಂಗಡಿಗರಿಂದ ಸೌಂಡ್ ಸರ್ ಸೌಂಡ್ ಹಾಸ್ಯ ನಾಟಕ ನಡೆಯಿತು.

     ಈ ಸಾಂಸ್ಕತಿಕ ಕಾರ್ಯಕ್ರಮಗಳಿಗೂ ಮುಂಚೆ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ತಾಪಂ ಅಧ್ಯಕ್ಷೆ ರಮೀಜಾ ಬಿ ಅವರು ಚಾಲನೆ ನೀಡಿದರು.

      ಬೆಳಗಲ್ಲು ಗ್ರಾಪಂ ಅಧ್ಯಕ್ಷೆ ಕೆ.ಎಂ.ವಸಂತ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಉಪಾದ್ಯಕ್ಷೆ ಸಣ್ಣ ತಾಯಮ್ಮ, ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ಇಕ್ಬಾಲ್ ಅಹ್ಮದ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಎನ್‍ಐಸಿ ಅಧಿಕಾರಿ ಎಸ್.ವಸ್ತ್ರದ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ, ನೃತ್ಯಗುರು ಜಿಲಾನಿಭಾಷಾ, ಬೆಳಗಲ್ಲು ಪಿಡಿಒ ಬಿ.ಉದ್ದನಗೌಡ, ನಂದಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಶೋಭಾರಾವ್, ನಿರ್ದೇಶಕ ಉಬೇದ್ ಅಹ್ಮದ್, ನಂದಿ ಇಂಟರ್‍ನ್ಯಾಷನಲ್ ಸ್ಕೂಲ್ ಪ್ರಾಚಾರ್ಯ ಇಮ್ರಾನ್ ಜಾವೇದ್, ಚಿತ್ರಕಲಾವಿದ ಮಂಜುನಾಥ ಮತ್ತಿತರರು ಇದ್ದರು.

                ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link