ಹೊಸಪೇಟೆ :
ನಾನು ಸಚಿವಾಕಾಂಕ್ಷಿ ಅಲ್ಲ. ನನಗೆ ವಿಜಯನಗರ ಜಿಲ್ಲೆ ರಚನೆ ನನ್ನ ಪ್ರಮುಖ ಗುರಿ ಎಂದು ಬೆಳಿಗ್ಗೆ ಹೇಳಿಕೆ ನೀಡಿದ್ದ ಶಾಸಕ ಆನಂದಸಿಂಗ್ ಸಂಜೆ ವೇಳೆಗೆ ಹಂಪಿ ಶ್ರೀ ವಿರುಪಾಕ್ಷ ದೇವಸ್ಥಾನಕ್ಕೆ ದರ್ಶನ ಪಡೆಯಲು ಬಂದಿದ್ದ ಕೇಂದ್ರ ರೈಲ್ವೇ ಖಾತೆ ಸಚಿವ ಪಿಯೂಷ್ ಗೋಯೆಲ್‍ರನ್ನು ಭೇಟಿ ಮಾಡಿ ಅವರಿಗೆ ಹೂಗುಚ್ಚ ನೀಡಿ ಸ್ವಾಗತಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.
ರಾಜ್ಯ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ನಡೆದು ಗೊಂದಲದಲ್ಲಿರುವಾಗಲೇ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ. ವಿರುಪಾಕ್ಷೇಶ್ವರನ ದರ್ಶನ ಪಡೆದು ಮರಳುವವರೆಗೂ ಅವರ ಜೊತೆಯಲ್ಲೇ ಇದ್ದು, ಕಮಲಾಪುರದ ತಮ್ಮ ರಜಪೂತ ಕೋಟೆಗೆ ಕರೆದೊಯ್ದು ಅವರನ್ನು ಸತ್ಕರಿಸಿದ್ದು ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿತು. ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡು ಬಿಜೆಪಿ ಕಡೆ ವಾಲುತ್ತಿದ್ದಾರಾ ? ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರತೊಡಗಿದವು.
ಕೇಂದ್ರ ಸಚಿವ ಹಂಪಿಗೆ ಭೇಟಿ : ವಿಶ್ವ ಪರಂಪರೆ ತಾಣ ಹಂಪಿಗೆ ಕೇಂದ್ರ ರೈಲ್ವೇ ಖಾತೆ ಸಚಿವ ಪಿಯೂಷ್ ಗೋಯೆಲ್ ತಮ್ಮ ಕುಟುಂಬ ಪರಿವಾರ ಸಮೇತ ಫಲಪೂಜಾ ದಿನವಾದ ಸೋಮವಾರ ಭೇಟಿ ನೀಡಿದರು.
ಜಿಂದಾಲ್ ವಿಮಾನ ನಿಲ್ದಾಣದಿಂದ ನೇರವಾಗಿ ಹಂಪಿಗೆ ಭೇಟಿ ನೀಡಿದ ಸಚಿವರನ್ನು ಹಂಪಿ ವಿದ್ಯಾರಣ್ಯ ಶ್ರೀಗಳು ಹಾಗು ಶಾಸಕ ಆನಂದಸಿಂಗ್ ಬರ ಮಾಡಿಕೊಡರು. ಬಳಿಕ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿದ ನಂತರ ಇಲ್ಲಿನ ಶಿಲ್ಪಕಲೆ ಕಂಡು ಬೆರಗಾದರು. ದಾಖಲೆ ಪುಸ್ತಕದಲ್ಲಿ ನನಗೆ ಶಿವ ಪಾರ್ವತಿಯರ ಅನುಗ್ರಹ ಸಿಗಲಿದೆ ಎಂಬ ನಂಬಿಕೆ ಇದೆ ಎಂದು ಬರೆದರು. ಇದಾದ ಬಳಿಕ ವಿಜಯ ವಿಠಲ ದೇವಸ್ಥಾನ, ಕಲ್ಲಿನ ತೇರು, ಸಂಗೀತ ಮಂಟಪಗಳನ್ನು ನೋಡಿ ಖುಷಿ ಪಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
