ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ಮುಗಿದ ಅಧ್ಯಾಯ

ಬೆಂಗಳೂರು

     ವಿಧಾನ ಪರಿಷತ್ ಅಭ್ಯರ್ಥಿ ಆಯ್ಕೆ ವಿಚಾರ ಮುಗಿದ ಅಧ್ಯಾಯ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಇಂದಿಲ್ಲಿ ಅತೃಪ್ತಿಗೆ ತೆರೆ ಎಳೆದಿದ್ದಾರೆ. ಪಕ್ಷದ ಕಚೇರಿ ಜೆಪಿ ಭವನದಲ್ಲಿಂದು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಧು ಬಂಗಾರಪ್ಪ ಪರಿಷತ್ ಅಭ್ಯರ್ಥಿ ಸ್ಥಾನವನ್ನು ನಿರಾಕರಿಸಿದರು. ಕೆಲವರ ಹೆಸರುಗಳನ್ನು ಅವರು ಸೂಚಿಸಿದ್ದರು. ಆದರೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ತೀರ್ಮಾನ ತೆಗೆದುಕೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದರು.

     ಪರಿಷತ್ ಅಭ್ಯರ್ಥಿಯಾಗಿ ರಮೇಶ್ ಗೌಡ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಕುರಿತು ರಾಷ್ಟ್ರೀಯ ಅಧ್ಯಕ್ಷರು ತೀರ್ಮಾನ ಮಾಡಿದ್ದಾರೆ ಎಂದರು. ರಮೇಶ್ ಗೌಡರ ಮೇಲ್ ಕೇಸ್ ಗಳಿವೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ಕ್ರಿಮಿನಲ್ ಹಿನ್ನೆಲೆ ಯಾರಿಗೆ ಇಲ್ಲಾ ಹೇಳಿ, ರಾಜಕೀಯದಲ್ಲಿ ಇಂಥ ಬೆಳವಣಿಗೆಗಳು ಸಹಜ ಎಂದು ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದರು.

     ಉಪ ಮೇಯರ್ ಘೋಷಣೆ ನಾಳೆ : ಉಪಮೇಯರ್ ಯಾರು ಎಂಬುದನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು ಹಾಗೂ ಜೆಡಿಎಸ್ ಕಾರ್ಪೋರೇಟರ್ ಗಳ ಜೊತೆ ಚರ್ಚೆ ನಡೆಸಿ ಘೋಷಣೆ ಮಾಡಲಿದ್ದಾರೆ. ಉಪ ಮೇಯರ್ ಸ್ಥಾನಕ್ಕೆ ಸಾಮಾನ್ಯ ವರ್ಗದ ಮಹಿಳೆಯಾಗಿದ್ದು, ಜೆಡಿಎಸ್ ಉಪಮೇಯರ್ ಅಭ್ಯರ್ಥಿ ನಾಳೆ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದರು.

      ಮೈತ್ರಿ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮೈತ್ರಿ ಸರ್ಕಾರಕ್ಕೆ ಎದುರಾಗಿದ್ದ ಎಲ್ಲಾ ಕಾರ್ಮೋಡ ಸರಿದಿದೆ. ಈಗ ಮೋಡ ತಿಳಿಯಾಗಿದೆ ಎಂದರು. ಸಮನ್ವಯ ಸಮಿತಿ ಸದಸ್ಯರಾಗಿ ಮಾಡಬೇಕು ಅನ್ನೋ ಒತ್ತಾಯ ಇದೆ. ಎರಡೂ ಪಕ್ಷದ ಅಧ್ಯಕ್ಷರು ಇದ್ದಾಗಲೇ ಸಮಿತಿ ಎನಿಸಿಕೊಳ್ಳುತ್ತದೆ. ನಾನು ಕೂಡ ಬಹಿರಂಗವಾಗಿ ಹೇಳಿದ್ದೆ. ಸಮಿತಿಗೆ ಸೇರುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ತಿಳಿಸಿದರು.

ಪುಸ್ತಕ ಬಿಡುಗಡೆ :     ನನ್ನ 7 ನೇ ಪುಸ್ತಕ ಅಥೆನ್ಸ್ ರಾಜ್ಯಾಡಳಿತ ಶನಿವಾರ ಬಿಡುಗಡೆ ಯಾಗಲಿದೆ. ಭಾರತೀಯ ವಿದ್ಯಾಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಲೋಕಾಯುಕ್ತ ನಿವೃತ್ತ ನ್ಯಾ. ಸಂತೋಷ್ ಹೆಗ್ಡೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

      ಗ್ರೀಸ್ ದೇಶದ ಸಂಸದೀಯ ಇತಿಹಾಸದ ಕಥನ ಹೊಂದಿರುವ ಪುಸ್ತಕ ಇದಾಗಿದ್ದು, ಇಲ್ಲಿ ಪುಸ್ತಕ ಬಿಡುಗಡೆ ಯಾದ ಮೇಲೆ ಗ್ರೀಸ್ ಗೆ ತೆರಳಿ ಅಲ್ಲಿನ ಸಂಸತ್ ಗೆ ಈ ಪುಸ್ತಕ ಸಲ್ಲಿಕೆ ಮಾಡುತ್ತೇನೆ ಎಂದರು. ಗ್ರೀಸ್ ಗೆ ಹೋಗಿ ಅದ್ಯಯನ ಮಾಡಿ ಈ ಪುಸ್ತಕ ಬರೆದಿದ್ದೇನೆ. ಎರಡು ಸಾವಿರ ವರ್ಷಗಳ ಹಿಂದೆಯೇ ಜನಾಡಳಿತ ಇದ್ದ ಬಗ್ಗೆ ಪುಸ್ತಕದಲ್ಲಿ ಉಲ್ಲೇಖವಿದೆ. ಗ್ರೀಸ್ ನಲ್ಲಿ ಅಂದಿನ ಕಾಲದಲ್ಲೇ ಪ್ರಜಾಪ್ರಭುತ್ವ ಇತ್ತು ಎಂದು ವಿವರಿಸಿದರು. ಗ್ರೀಸ್ ದೇಶದ ಪಾರ್ಲಿಮೆಂಟಿಗೆ ಪುಸ್ತಕ ಸಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ಬಿಡುಗಡೆ ಆದ ನಂತರ ಗ್ರೀಸ್ ದೇಶಕ್ಕೆ ಹೋಗಲಿದ್ದೇನೆ ಎಂದು ಹೇಳಿದರು.

                  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap