ನಿರುದ್ಯೋಗಿ ಯುವಕರಿಗೆ ವಂಚನೆ

ಬೆಂಗಳೂರು

      ನಕಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಗಳನ್ನು ನೀಡಿ ಪಿಯುಸಿ ಪಾಸಾದ ಪದವಿ ಫೇಲಾದ ನಿರುದ್ಯೋಗಿ ಯುವಕರಿಗೆ ವಂಚಿಸಿ ಕೋಟ್ಯಂತರ ಹಣ ಗಳಿಸಿದ್ದ ಆಂಧ್ರ ಮೂಲದ ಖದೀಮ ಎಂಬಿಎ ಪದವೀಧರನೊಬ್ಬ ಕೋರಮಂಗಲ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

      ವಂಚಕ ಆಂಧ್ರದ ರಂಗಾರೆಡ್ಡಿ ಜಿಲ್ಲೆಯ ಅರ್ಜುನ್ (30)ನನ್ನು ಬಂಧಿಸಿ ನಡೆಸಿದ ವಿಚಾರಣೆಯಲ್ಲಿ ಆತ ಸುಮಾರು 400 ಮಂದಿ ನಿರುದ್ಯೋಗಿಗಳನ್ನು ವಂಚಿಸಿ 1 ಕೋಟಿ ಗೂ ಹೆಚ್ಚು ಹಣಗಳಿಸಿರುವುದು ಪತ್ತೆಯಾಗಿದೆ. ಬಂಧಿತನಿಂದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಪದವಿ, ಸ್ನಾತಕೋತ್ತರ ಪದವಿಗಳ ನೂರಾರು ನಕಲಿ ಅಂಕಪಟ್ಟಿಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಡಿಸಿಪಿ ಬೋರಲಿಂಗಯ್ಯ ತಿಳಿಸಿದ್ದಾರೆ.

     ಕಳೆದ 2015 ರಲ್ಲಿ ನಗರಕ್ಕೆ ಉದ್ಯೋಗ ಅರಸಿ ಬಂದಿದ್ದ ಅರ್ಜುನ್ ಕೋರಮಂಗಲದ ಜಕ್ಕಸಂದ್ರದಲ್ಲಿ ಮನೆ ಮಾಡಿಕೊಂಡು, ಜ್ಯೋತಿ ನಿವಾಸ್ ಕಾಲೇಜು ರಸ್ತೆಯ ಜಿ.ಎಂ. ಆರ್ಕೆಡ್ ಕಟ್ಟಡದ ಮೂರನೇ ಮಹಡಿಯಲ್ಲಿ ಗುಡ್ ಗೈಡ್ ಅಕಾಡೆಮಿ ಆರಂಭಿಸಿ, ದೂರಶಿಕ್ಷಣದ ಮೂಲಕ ಪದವಿ ಸ್ನಾತಕೋತ್ತರ ಪದವಿಯನ್ನು ಕೊಡಿಸುವುದಾಗಿ ಪಿಯುಸಿ ಪಾಸಾದವರು ಪದವಿ ಫೇಲಾದವರನ್ನು ಸಂಪರ್ಕಿಸುತ್ತಿದ್ದ.

ಹಲವು ವಿವಿಗಳ ಪ್ರಮಾಣ ಪತ್ರ      ಪದವಿ ಸ್ನಾತಕೋತ್ತರ ಪದವಿ ಅಂಕಪಟ್ಟಿ ಪ್ರಮಾಣ ಪತ್ರ ಪಡೆಯುವವರಿಗೆ ಕನಿಷ್ಠ 45 ಸಾವಿರ ರೂ. ಪಡೆದು ಮೂರು ವರ್ಷದ ಬಿಕಾಂ, ಬಿಎ, ಬಿಎಸ್‍ಸಿ ಸೇರಿ ಎರಡು ವರ್ಷದ ಸ್ನಾತಕೋತ್ತರ ಪದವಿಯ ಅಂಕಪಟ್ಟಿಗಳನ್ನು ಒಂದೇ ಬಾರಿಗೆ ನೀಡುತ್ತಿದ್ದ ಆರೋಪಿಯು ಹಲವು ಪಿಯುಸಿ ಪಾಸಾದ, ಪದವಿ ಫೇಲಾದ ನಿರುದ್ಯೋಗಿಗಳಿಗೆ ಸಿವಿ ರಾಮನ್, ಪೆರಿಯಾರ್, ಕುವೆಂಪು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳ ನಕಲಿ ಮಾಸ್‍ಕಾರ್ಡ್‍ಗಳನ್ನು ನೀಡಿದ್ದ. ಇಲ್ಲಿಯವರೆಗೆ ಸುಮಾರು 400 ಮಂದಿಗೆ ನಕಲಿ ಮಾಸ್‍ಕಾರ್ಡ್ ನೀಡಿರುವುದು ತನಿಖೆಯಲ್ಲಿ ಕಂಡುಬಂದಿದೆ.

    ನಕಲಿ ಅಂಕಪಟ್ಟಿ ಪ್ರಮಾಣ ಪತ್ರ ನೀಡುತ್ತಿರುವ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಕೋರಮಂಗಲದ ಇನ್‍ಸ್ಪೆಕ್ಟರ್ ಮಂಜುನಾಥ್ ಮತ್ತವರ ತಂಡ ಗುಡ್ ಗೈಡ್ ಅಕಾಡೆಮಿ ಮೇಲೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ. ಆರೋಪಿಯು ಸುಮಾರು 1 ಕೋಟಿ ರೂ. ವರೆಗೆ ವಂಚನೆ ನಡೆಸಿರುವುದು ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

               ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link