ವಿವಿಗಳಲ್ಲಿನ ಭ್ರಷ್ಟಾಚಾರ ತನಿಖೆಗೆ ಎಬಿವಿಪಿ ಆಗ್ರಹ

ದಾವಣಗೆರೆ:

      ಕುಲಪತಿಗಳ ನೇಮಕಾತಿ, ಬೋಧಕ-ಬೋಧಕೇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

      ನಗರದ ಹೊರವಲಯದ ಜಿಎಂಐಟಿ ಕಾಲೇಜು ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟ ವಿದ್ಯಾರ್ಥಿಗಳು ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಮುಖಂಡರು, ಉನ್ನತ ಶಿಕ್ಷಣ ಎಲ್ಲರಿಗೂ ಸಿಗಬೇಕೆಂಬ ಉದ್ದೇಶದಿಂದ ರಾಜ್ಯದಲ್ಲಿ ಅನೇಕ ವಿವಿಗಳನ್ನು ಸ್ಥಾಪಿಸಲಾಗಿದೆ. ಆದರೆ, ಬೋಧದಕ-ಬೋಧಕೇತರ ಸಿಬ್ಬಂದಿಗಳ ಕೊರತೆಯಿಂದ ಅನೇಕ ವಿವಿಗಳು ರೋಗಗ್ರಸ್ಥವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ರಾಜ್ಯದ ಅನೇಕ ವಿವಿಗಳಿಗೆ ಕುಲಪತಿಗಳೇ ನೇಮಕಗೊಂಡಿಲ್ಲ. ರಾಜ್ಯದ ವಿವಿಗಳಲ್ಲಿ 1700 ಬೋಧಕ ಹಾಗೂ 4202 ಬೋಧಕೇತರ ಹುದ್ದೆಗಳನ್ನು ಒಳಗೊಂಡಂತೆ 6 ಸಾವಿರಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿಯೇ ಈವರೆಗೆ ನಡೆದಿಲ್ಲ. ಇದು ಸರ್ಕಾರವು ಉನ್ನತ ಶಿಕ್ಷಣದ ಬಗ್ಗೆ ಹೊಂದಿರುವ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ. ಉನ್ನತ ಶಿಕ್ಷಣದ ಉಳಿವಿಗಾಗಿ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ವಿವಿಗಳ ಎಲ್ಲಾ ಹುದ್ದೆಗಳನ್ನು ತಕ್ಷಣವೇ ಭರ್ತಿ ಮಾಡಬೇಕೆಂದು ಆಗ್ರಹಿಸಿದರು.

      ರಾಜ್ಯದಲ್ಲಿ 412 ಪ್ರಥಮ ದಜೆ ಕಾಲೇಜುಗಳಿದ್ದು, ಈ ಪೈಕಿ 372 ಕಾಲೇಜುಗಲ್ಲಿ ಗ್ರೇಡ್-1 ಪ್ರಾಂಶುಪಾಲರ ಹುದ್ದೆಗಳು ಮಂಜೂರಾಗಿವೆ. ಅದರಲ್ಲಿ 6 ಜನ ಮಾತ್ರವೇ ಕಾರ್ಯ ನಿರ್ವಹಿಸುತಿದ್ದು, 366 ಹುದ್ದೆಗಳು ಖಾಲಿ ಇವೆ. ತಕ್ಷಣವೇ ನೇಮಕಾತಿ ಪ್ರಕ್ರಿಯೆಗೆ ಸರ್ಕಾರ ಮುಂದಾಗಲಿ.

      ಉನ್ನತ ಶಿಕ್ಷಣದ ಕೇಂದ್ರಗಳಾಗಬೇಕಾದ ವಿವಿಗಳು ಇಂದು ಭ್ರಷ್ಟಾಚಾರದ ಕೇಂದ್ರಗಳಾಗುತ್ತಿವೆ. ವಿವಿಗಳ ಕಟ್ಟಡ ಕಾಮಗಾರಿ ಹೆಸರಿನಲ್ಲಿ, ಪ್ರಯೋಗಾಲಯ ಅಭಿವೃದ್ಧಿ ನೆಪದಲ್ಲಿ, ಉಪಕರಣ ಖರೀದಿ ಹೆಸರಲ್ಲಿ, ಅಂಕಪಟ್ಟಿ ಅವ್ಯವಹಾರ, ಸಿಬ್ಬಂದಿ ನೇಮಕಾತಿ ಸೇರಿದಂತೆ ನಾನಾ ನೆಪ, ಹೆಸರು, ಕಾರಣಗಳಲ್ಲಿ ರಾಜ್ಯದ ಬಹುತೇಕ ವಿಶ್ವ ವಿದ್ಯಾನಿಲಯಗಳಲ್ಲಿ ಅವ್ಯವಹಾರ, ಭ್ರಷ್ಟಾಚಾರವು ಆಳವಾಗಿ ಬೇರೂರಿದೆ. ತಕ್ಷಣವೇ ಸರ್ಕಾರ ಕುಲಪತಿಗಳ ನೇಮಕಾತಿ, ಬೋಧಕ-ಬೋಧಕೇತರ ಸಿಬ್ಬಂದಿಗಳ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆಗೆ ಮುಂದಾಗಬೇಕೆಂದು ಆಗ್ರಹಿಸಿದರು.

      ವಿದ್ಯಾ ಸಿರಿಯಡಿ ವಿದ್ಯಾರ್ಥಿ ವೇತನ ಇನ್ನೂ ವಿತರಿಸಿಲ್ಲ. ತರಗತಿಗಳು ಆರಂಭವಾಗಿ 3 ತಿಂಗಳಾದರೂ ಅರ್ಜಿಯನ್ನೇ ಆಹ್ವಾನಿಸಿಲ್ಲ. ಬಡ, ಪ್ರತಿಭಾವಂತ, ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ತೀವ್ರ ಅನ್ಯಾಯವಾಗುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದಾಗಿ ಇಂತಹದ್ದೊಂದು ಯೋಜನೆ ನಿಂತು ಹೋದೀತೇನೋ ಎಂಬ ಆತಂಕ ವಿದ್ಯಾರ್ಥಿಗಳಲ್ಲಿ ಮನೆಮಾಡಿದೆ. ಉಚಿತ ಬಸ್ಸು ಪಾಸ್ ನೀಡುವುದಾಗಿ ಸರ್ಕಾರ ಘೋಷಿಸಿದ್ದು ಕೇವಲ ಘೋಷಣೆಯಾಗಿ ಉಳಿದಿದೆ.

     ಶಿಕ್ಷಣದ ಬಗ್ಗೆ, ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಈ ಸರ್ಕಾರಕೆ ಯಾವುದೇ ಕಳಕಳಿ ಇಲ್ಲ ಎಂದು ಆರೋಪಿಸಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು ತಕ್ಷಣವೇ ಸರ್ಕಾರ ವಿದ್ಯಾಸಿರಿ ಯೋಜನೆಯಡಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿ, ವಿದ್ಯಾರ್ಥಿ ವೇತನ ಹಾಗೂ ಉಚಿತ ಬಸ್‍ಪಾಸ್ ವಿತರಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ಸಂಘಟನೆ ಮುಖಂಡರಾದ ರಾಮಕುಮಾರ, ಕಿರಣ್, ರೋಜಾ, ಸ್ನೇಹಾ, ಭವ್ಯಾ, ರಾಕೇಶ್, ಹಾಲೇಶ್, ಶರತ್, ವಿನಯ್ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.

                    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link