ಹೊಸಪೇಟೆ :
ಇಲ್ಲಿನ ಯುವ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರು ಗುರುವಾರ ನಗರದ ರೋಟರಿ ವೃತ್ತದಲ್ಲಿ ಕೇಂದ್ರ ಸರ್ಕಾರದ ರಫೆಲ್ ಯುದ್ದ ವಿಮಾನ ಖರೀದಿ ಹಗರಣ ವಿರುದ್ದ ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿಯ ಪ್ರತಿಕೃತಿ ದಹಿಸಿದರು.
ನಗರದ ಅಂಬೇಡ್ಕರ್ ವೃತ್ತದಿಂದ ಮೆರವಣಿಗೆ ಮೂಲಕ ಸಾಗಿ ಬಂದ ಯುವ ಕಾಂಗ್ರೆಸ್ ಕಾರ್ಯಕರ್ತರು ರೋಟರಿ ವೃತ್ತದಲ್ಲಿ ಜಮಾವಣೆಗೊಂಡು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಗಲಿ ಗಲಿ ಮೆ ಶೋರ್ ಹೈ, ಚೌಕೀದಾರ್ ಚೋರ್ ಹೈ ಎಂಬ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬುಲ್ ಕಲಾಮ್ ಅಜಾದ್, ರಫೆಲ್ ಒಪ್ಪಂದದಲ್ಲಿ ರಿಲೆಯನ್ಸ್ ಡಿಫೆನ್ಸ್ ಕಂಪನಿಯನ್ನು ದೇಶಿ ಪಾಲುದಾರ ಸಂಸ್ಥೆಯಾಗಿ ಮಾಡಿಕೊಳ್ಳುವಂತೆ ಭಾರತ ಸರ್ಕಾರ ಒತ್ತಡ ಹೇರಿತ್ತು ಎಂಬ ಹೇಳಿಕೆ ಬಂದ ನಂತರ ಹಗರಣ ನಡೆದಿದೆ ಎಂದು ಖಚಿತವಾಗಿದೆ. ಸ್ವತಃ ಪ್ರಧಾನಿ ಮೋದಿಯೇ ರಹಸ್ಯವಾಗಿ ಚೌಕಾಸಿ ನಡೆಸಿ ರಫೆಲ್ ಒಪ್ಪಂದವನ್ನು ಕುದುರಿಸಿದ್ದಾರೆ.
ದಿವಾಳಿಯಾಗಿದ್ದ ಅನಿಲ್ ಅಂಬಾನಿಗೆ ಸಾವಿರಾರು ಕೋಟಿ ಒಪ್ಪಂದವನ್ನು ಪ್ರಧಾನಿ ತಮ್ಮ ಕೈಯಾರೆ ನೀಡಿದ್ದು ಹೇಗೆ? ಎಂದು ತಿಳಿಸಿದ ಫ್ರಾನ್ಸ್ ಮಾಜಿ ಅಧ್ಯಕ್ಷ ಒಲಾಂಡ, ನಿಜಕ್ಕೂಇಲ್ಲಿ ಹಗರಣ ನಡೆದಿದೆ ಎಂದುದನ್ನು ತಿಳಿಸಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಸಂಘಟನಾ ಕಾರ್ಯದರ್ಶಿ ನಿಂಬಗಲ್ ರಾಮಕೃಷ್ಣ ಮಾತನಾಡಿ, ಹಿಂದೆ ಯುಪಿಎ ಸರ್ಕಾರವಿದ್ದಾಗ ಕೇಂದ್ರ ಸರ್ಕಾರ ಸ್ವಾಮ್ಯದ ಎಚ್ಎಎಲ್ಗೆ ಗುತ್ತಿಗೆ ನೀಡಲಾಗಿತ್ತು. ಮೋದಿ ಸರ್ಕಾರ ಬಂದ ನಂತರ ರಫೆಲ್ ಯುದ್ದ ವಿಮಾನಗಳನ್ನು ಖರೀದಿಸುವ ಒಪ್ಪಂದ ರದ್ದುಪಡಿಸಿ, ನಿಯಮಗಳನ್ನು ಗಾಳಿಗೆ ತೂರಿ, ರಕ್ಷಣಾ ಇಲಾಖೆಗೆ ಸಂಬಂಧಿಸಿದ ಸಾಮಾಗ್ರಿಗಳನ್ನು ತಯಾರು ಮಾಡಲಾರದ ಅಂಬಾನಿ ಸಂಸ್ಥೆಗೆ ನೀಡಲಾಗಿದೆ ಎಂದರು.
ಯುಪಿಎ ಸರ್ಕಾರವಿದ್ದಾಗ ಒಂದು ವಿಮಾನಕ್ಕೆ ರೂ.526 ಕೋಟಿಯಂತೆ 126 ವಿಮಾನಕ್ಕೆ ಒಪ್ಪಂದದ ಮೊತ್ತ ರೂ.63,300 ಕೋಟಿಯಾಗಿತ್ತು. ಮೋದಿ ಸರ್ಕಾರ ಒಂದು ವಿಮಾನಕ್ಕೆ ರೂ.1670 ಯಂತೆ ಕೇವಲ 36 ವಿಮಾನಗಳಿಗೆ ರೂ.58,300 ಕೋಟಿ ಯಂತೆ 3 ಪಟ್ಟು ಹಣ ಹೆಚ್ಚು ನೀಡಲು ಒಪ್ಪಂದ ಮಾಡಿಕೊಂಡಿದೆ. ಇದರಿಂದ ಸಾವಿರಾರು ಕೋಟಿ ನಷ್ಟದ ಜೊತೆಗೆ ಸಾವಿರಾರು ಉದ್ಯೋಗಗಳಿಗೆ ಕತ್ತರಿ ಬೀಳಲಿದೆ.
ಕೂಡಲೇ ಈ ಹಗರಣದ ಪ್ರಮುಖ ರುವಾರಿ ಪ್ರಧಾನಿ ನರೇಂದ್ರ ಮೋದಿ ಹಾಗು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರಾಜಿನಾಮೆ ನೀಡಬೇಕು. ಮತ್ತು ಸಂಸತ್ತಿನ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ನ ಉಪಾಧ್ಯಕ್ಷ ಅಯ್ಯಾಳಿ ನವೀನಕುಮಾರ್, ಪದಾಧಿಕಾರಿಗಳಾದ ಕೆ.ರವಿಕುಮಾರ್, ಗಣೇಶ್, ತಾಜುದ್ದೀನ್, ಅಲ್ಲಾಭಕ್ಷಿ, ಪ್ರವೀಣ, ಸುನೀಲಗೌಡ, ಖಲಂದರ್,ಮಾಬುಬಾಷಾ, ಬಾಬು, ದುರುಗಪ್ಪ, ಪೆನ್ನೋಬಳಿ, ಕೆರೋಲಿನ್ ಸ್ಮಿತ್, ವಿಜಯಕುಮಾರ್, ಬಸವರಾಜ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
