ಹಗರಿಬೊಮ್ಮನಹಳ್ಳಿ:
ಪಟ್ಟಣದ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಯುತಿದ್ದ ವೇಳೆ ಅಧ್ಯಕ್ಷ-ಸದಸ್ಯರ ನಡುವೆ ವೈಯಕ್ತಿಕ ವಿಷಯ ಕೆದಕಿ ಏಕವಚನದಲ್ಲಿ ವಾಗ್ವಾದಕ್ಕಿಳಿದ ಘಟನೆ ಜರುಗಿತು.
ಪಟ್ಟಣದ ರಾಮನಗರದಲ್ಲಿರುವ ಪುರಸಭೆಯ ಆಡಳಿತ ಕಚೇರಿಯಲ್ಲಿ ಕರೆಯಲಾಗಿದ್ದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆದ ಘಟನೆ ಇದು. ಸಭೆಯ ನಡುವೆ ಆಗಮಿಸಿದ ಸೋಗಿ ಅಂಗಡಿಯವರ ಸಂದಿಯಲ್ಲಿರುವ ವ್ಯಾಪಾರಿಗಳು, ಆ ಮೂಲಕ ಹೋಗುವ ರಸ್ತೆಗೆ ಅಡ್ಡಲಾಗಿ ತಡೆ ಕೋಲುಗಳನ್ನು ಹಾಕಲಾಗಿದೆ ಅವುಗಳಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ ಎಂದು ಮನವಿ ಸಲ್ಲಿಸಿದರು.
ಇದಕ್ಕೆ ಉತ್ತರವಾಗಿ ಅಧ್ಯಕ್ಷ ಟಿ.ರಾಘವೇಂದ್ರ ಆ ಕೆಲಸ ನ್ಯಾಯಾಧೀಶರ ಆದೇಶದಂತೆ ಪೊಲೀಸರು ಹಾಕಿದ್ದಾರೆ ಈ ಸಭೆಯಲ್ಲಿ ಚರ್ಚೆಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆಂದು ಮನವಿ ಸ್ವೀಕರಿಸಿ ಅವರನ್ನು ಕಳಿಸಿದರು. ನಂತರ ಸದಸ್ಯ ಬದಾಮಿ ಮುತ್ತುರಾಜ್ ಮಾತನಾಡಿ ಅಲ್ಲಿಯ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಿ ಎಂದರು.
ಇವರ ನಡುವೆಯೂ ಮತ್ತೊಬ್ಬ ಸದಸ್ಯ ಡಾ||ಸುರೇಶ್ ಕೂಡಲೆ ಆ ಕೆಲಸ ಆಗಲೇ ಬೇಕೆಂದು ಪಟ್ಟು ಹಿಡಿದರು. ಆಕ್ರೋಶಗೊಂಡ ಅಧ್ಯಕ್ಷ ರಾಘವೇಂದ್ರ ಮತ್ತು ಸದಸ್ಯ ಸುರೇಶ್‍ಕುಮಾರ್ ನಡುವೆ ಮಾತಿನ ಚಕಮಕಿಯಿಂದ ಏಕವಚನದಲ್ಲಿ ಬೆಳೆದು, ಡಾ||ಸುರೇಶ್‍ರ ವೈಯಕ್ತಿಕ ವಿಷಯ ಕೆದಕಿದರು.
ಅಭಿವೃದ್ಧಿ ಕೆಲಸಕ್ಕೆ ಗುತ್ತಿಗೆದಾರರು ಮಾಮೂಲು ಕೇಳುತ್ತೀರಲ್ಲ ಎಂದು ಉದಾ:ಕೊಡುತ್ತ ಸಭೆಯೊಳಗೆ ಅವಮಾನಿಸಿದರು. ಇದರಿಂದ ಒಬ್ಬರಿಗೊಬ್ಬರ ಮಾತುಗಳು ತಾರಕಕ್ಕೇರಿದವು. ಮಧ್ಯೆ ಪ್ರವೇಶಿಸಿದ ಸ್ಥಾಯಿಸಮಿತಿ ಅಧ್ಯಕ್ಷ ಬಾಬುವಲಿ, ಸದಸ್ಯರಾದ ಜೋಗಿ ಹನುಮಂತು, ಚೋಳರಾಜಪ್ಪ, ಬದಾಮಿ ಮುತ್ತುರಾಜ್ ಸಮಾಧಾನ ಪಡಿಸಿದರು.
ಕೇವಿಯಟ್ ಗೆ 10ಲಕ್ಷ ರೂ.ಗಳ ವ್ಯಯ: ಸಭೆಯಲ್ಲಿ ಸದಸ್ಯ ಚೋಳರಾಜಪ್ಪ ಮಾತನಾಡಿ, ಕೂಡ್ಲಿಗಿ ವೃತ್ತದ ರಸ್ತೆ ಅಗಲೀಕರಣಕ್ಕೆ ಪುರಸಭೆಯಿಂದ ಕೋರ್ಟ್‍ಗೆ ಕೇವಿಯಟ್ ತರಲು 10ಲಕ್ಷ ರೂ.ಗಳ ವ್ಯಯ ಮಾಡಿದ್ದೀರ, ಅದು ಸಮಾಜಿಕ ಕಳಕಳೆಯ ಕೆಲಸವಲ್ಲ. ಯಾರನ್ನ ಕೇಳಿ ಕೇವಿಯಟ್ ತಂದಿರೆಂದು ಮುಖ್ಯಾಧಿಕಾರಿ ಸಿ.ಪ್ರಕಾಶ್‍ರನ್ನು ತರಾಟೆಗೆ ತೆಗೆದುಕೊಂಡರು. ಧ್ವನಿಗೂಡಿಸಿದ ಡಾ||ಸುರೇಶ್‍ಕುಮಾರ್ ಈ ಬಗ್ಗೆ ಸಾರ್ವಜನಿಕರ ಮನವೂಲಿಸುವ ಕೆಲಸಮಾಡಬಹುದಿತ್ತಲ್ಲ ಎಂದರು.
ನಾಮನಿರ್ದೇಶಿತ ಸದಸ್ಯ ಹುಡೇದ್ ಗುರುಬಸವರಾಜ್ ಮಧ್ಯೆ ಪ್ರವೇಶಿಸಿ ಸಾರ್ವಜನಿಕ ಸಭೆ ಕರೆಯುವ ಮೂಲಕ ಅಭಿವೃದ್ಧಿ ಕೆಲಸಕ್ಕೆ ಮುಂದಾಗಬೇಕಿತ್ತು ಎಂದರು. ಮತ್ತೊಬ್ಬ ಸದಸ್ಯ ಅಲ್ಲಾಭಕ್ಷಿ ಕೋರ್ಟ್‍ಗೆ ಖರ್ಚುಮಾಡಿದ ಹಣ ವಾರ್ಡ್‍ನ ಅಭಿವೃದ್ಧಿ ಕೆಲಸಕ್ಕೆ ಹಾಕುವುದು ಬಿಟ್ಟು ನಿಮಗೆ ಮನಬಂದತೆ ನಡೆದುಕೊಳ್ಳುತ್ತೀರ ಎಂದು ಗದರಿದರು.
ಜಿಲ್ಲಾ ಕೆಂದ್ರಕ್ಕೆ ಒತ್ತಾಯ: ಹಗರಿಬೊಮ್ಮನಹಳ್ಳಿ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕೆನ್ನುವ ವಿಷಯ ನಡವಳಿಕೆಯನ್ನು ಓದಿದ ಅಧಿಕಾರಿ ಸಭೆಗೆ ಪ್ರಸ್ತಾಪಿಸಿದರು. ಇದಕ್ಕೆ ಎಲ್ಲಾ ಸದಸ್ಯರು ಸಮ್ಮತಿ ನೀಡಿದರು. ಅಧ್ಯಕ್ಷ ಟಿ.ರಾಘವೇಂದ್ರ ಸರ್ಕಾರಕ್ಕೆ ಸಭೆಯ ಒತ್ತಾಯದ ಮನವಿಪತ್ರವನ್ನು ಓದಿ ಎಲ್ಲಾ ಅರ್ಹತೆಯನ್ನು ಹೊಂದಿದ ಇಲ್ಲಿ ಜಿಲ್ಲಾ ಕೇಂದ್ರಮಾಡಬೇಕು ಎಂದರು.
ಸದಸ್ಯ ಅಲ್ಲಾಭಕ್ಷಿ ಮಾತನಾಡಿ ವಾರ್ಡ್‍ಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಆರೋಪಿಸಿದರು. ಸದಸ್ಯ ಕನಕಪ್ಪ ಧ್ವನಿಗೂಡಿಸಿ ಚುನಾವಣೆ ಹಾಗೂ ಇತರೆ ಕಾರಣಗಳಿಂದ 8ತಿಂಗಳಿನಿಂದ ಸಭೆ ಕರೆದಿಲ್ಲ ಆಗಾಗಿ ಅಭಿವೃದ್ಧಿ ವಿಚಾರಗಳು ಚರ್ಚೆ ಆಗಿಲ್ಲವೆಂದರು. ಅಲ್ಲದೆ ಅಧ್ಯಕ್ಷ ಅವಧಿ ಮುಗಿಯುವುದಕ್ಕೆ ಇನ್ನೆರಡು ತಿಂಗಳು ಬಾಕಿ ಇದ್ದು ಕೂಡಲೆ ಕೆಲ ವಿಶೇಷಗಳ ಚರ್ಚೆಮಾಡಲು ಮತ್ತೊಂದು ಸಭೆ ಕರೆಯುವಂತೆ ಆಗ್ರಹಿಸಿದರು.
ನಂತರ ಇಂದಿರಾ ಕ್ಯಾಂಟಿನ್, ಪುರಸಭೆ ಆಡಳಿತ ಕಟ್ಟಡ ಕುರಿತು ಚರ್ಚೆ ನಡೆದವು. ಸದಸ್ಯ ಬುಕಟೆಗಾರ್ ಗಂಗಾಧರ ಮಾತನಾಡಿ ಕುಡಿಯುವ ನೀರಿನ ಸಮಸ್ಯೆ ತಲೆ ದೋರದಂತೆ ನೋಡಿಕೊಳ್ಳಿ, ಈಗಲೇ ತೊಂದರೆಯಾದರೆ ಬೇಸಿಗೆಯ ಅವಧಿಯಲ್ಲಿ ಕಷ್ಟವಾಗುತ್ತೆ ಎಂದರಲ್ಲದೆ, ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ಆಯ್ಕೆಗೆ ನಮಗೂ ಅವಕಾಶಕೊಡಿ ಎಂದು ಅಧ್ಯಕ್ಷರಿಗೆ ಹೇಳಿದರು. ಧ್ವನಿಗೂಡಿಸಿದ ಸದಸ್ಯ ಲಕ್ಷ್ಮಣ ಮತ್ತು ಹುಳ್ಳಿ ಮಂಜುನಾಥ ಪುರಸಭೆಯ ಅಭಿವೃದ್ಧಿ ಅನುದಾನಗಳ ಕೆಲಸಗಳು ಎಲ್ಲಾ ವಾರ್ಡ್‍ಗಳಿಗೆ ಸಮನಾಗಿ ಹಂಚಿಕೆಯಾಗಬೇಕು ಇಲ್ಲಿ ಬಿಜೆಪಿ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂದು ದೂರಿದರು. ಅಲ್ಲದೆ ಕೆಲ ವಾರ್ಡ್‍ಗಳಲ್ಲಿ ಬೀದಿದೀಪಗಳಿಲ್ಲದೆ ಕತ್ತಲೆಯಲ್ಲಿರಬೆಕಾದಂತ ಪರಿಸ್ಥಿತಿ ಬಂದಿದೆ ಎಂದರು.
ಹಣ ಪಾವತಿ ಕೇಂದ್ರ ತೆರೆಯುವಂತೆ ಒತ್ತಾಯ: ಸದಸ್ಯ ಜೋಗಿ ಹನುಮಂತು, ಮಾತಾನಾಡಿ, ಪುರಸಭೆಯ ಆಡಳಿತದಲ್ಲಿ ತೆರೆಇಗೆ ವಸೂಲಾತಿ ಹಣ ಹಡಗಲಿ ಅರ್ಬನ್ ಬ್ಯಾಂಕ್‍ಗೆ ಕಟ್ಟಬೇಕಾಗಿರುವುದರಿಂದ ಸಾರ್ವಜನಿಕರಿಗೆ ಪದೇಪದೇ ಅಲ್ಲಿಗೆ ಹೋಗಿ ಬರಲು ತೊಂದರೆ ಆಗುತ್ತೆ. ಆದ್ದರಿಂದ ಪುರಸಭೆ ಕಚೇರಿಯ ಬಳಿ ಬ್ಯಾಂಕ್‍ನ ಹಣ ಪಾವತಿ ಕೇಂದ್ರ ತೆರೆಯುವಂತೆ ಆಗ್ರಹಿಸಿದರು. ಇದಕ್ಕೆ ಸದಸ್ಯರೆಲ್ಲ ಚಪ್ಪಾಳೆ ತಟ್ಟುವ ಮೂಲಕ ಸಮ್ಮತಿ ಸೂಚಿಸಿದರು.
ಹುಡೇದ್ ಗುರುಬಸವರಾಜ್ ಮಾತನಾಡಿ, ಇಲ್ಲಿಂದ ನಿಯೋಜನೆಗೊಂಡು 4ಜನ ಕೆಲಸಗಾರರು ಬೇರೆ ಕಡೆ ಕೆಲಸ ಇಲ್ಲಿ ಸಂಬಳ ತೆಗೆದುಕೊಳ್ಳುವುದೆಂದರೆ ಹೇಗೆ? ಅದು 12ಲಕ್ಷ ರೂ.ಗಳಷ್ಟು ಆಗಿದೆ ಎಂದು ಸಭೆಯ ಗಮನ ಸೆಳೆದರು. ಧ್ವನಿಗೂಡಿಸಿದ ಸದಸ್ಯ ಮಾತಾಗ್ಯಾಸ್ ಯರ್ರಿಸ್ವಾಮಿ ಹಾಗೂ ಮತ್ತೊಬ್ಬ ನಾಮನಿರ್ದೇಶಿತ ಸದಸ್ಯ ಡಿಶ್ ಮಂಜುನಾಥ ಆ ನೌಕರರು ಇಲ್ಲಿ ಕೆಲಸಮಾಡಲು ನಿಯೋಜನೆ ರದ್ದು ಮಾಡಿ, ಇಲ್ಲ ಸಂಪೂರ್ಣ ವರ್ಗಾವಣೆಮಾಡಿ ಎಂದು ಎಚ್ಚರಿಸಿದರು.
ಬೀದಿನಾಯಿಗಳು ಹಾವಳಿ, ಬಿಡಾಡಿ ದನಗಳ ಹಾವಳಿ ಬಗ್ಗೆ ಅಲ್ಲಾಭಕ್ಷಿ ಕ್ರಮ ಕೈಗೊಳ್ಳುವ ಕುರಿತು ಸಭೆಯ ಗಮನ ಸೆಳೆದರು. ಪ್ರಮುಖ ಬಜಾರದ ಸ್ವಚ್ಛತೆ, ಅಗತ್ಯ ಕ್ರಮಗಳ ಬಗ್ಗೆ ಕೂಡಲೆ ಕ್ರಮಕೈಗೊಳ್ಳಬೇಕು ಎಂದರು. ಇದಕ್ಕೆ ವಿಶೇಷ ಸಭೆ ಕರೆಯುವ ಮೂಲಕ ಕ್ರಮ ಕೈಗೊಳ್ಳಲಾಗುವುದೆಂದು ಅಧ್ಯಕ್ಷ ಸಭೆಗೆ ತಿಳಿಸಿದರು.ಸಭೆಯಲ್ಲಿ ಉಪಾಧ್ಯಕ್ಷೆ ಹುಲಿಗೆಮ್ಮ, ಸದಸ್ಯರಾದ ಹಂಚಿನಮನಿ ಹನುಂತಪ್ಪ, ಕವಿತಾ ಹಾಲ್ದಾಳ್, ಜಾಹಿದಾ ರೆಹಿಮಾನ್, ಸರಸ್ವತಿ, ಸಂಜೋತಾ ನವೀನ್, ನಜೀಮುನ್ನೀಸಾ, ಜರೀನಾಬೇಗಾಂ ಸೇಇ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
