ಕಟ್ಟೆಯಾದ ಹುಳಿಯಾರು ಬಸ್ ನಿಲ್ದಾಣ

ಹುಳಿಯಾರು:

    ಮಳೆ ಎಂಬುದು ಅಪರೂಪವಾಗಿರುವ ಹುಳಿಯಾರಿಗೆ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ವಾತಾವರಣ ಆಹ್ಲಾದಕರವಾಗಿದ್ದರೂ ಮಳೆಯಿಂದಾಗಿರುವ ಸಮಸ್ಯೆ ಹೇಳತೀರದಾಗಿದೆ.

     ಮಳೆಯಾದಾಗ ಚರಂಡಿಗಳಲ್ಲಿ ನೀರು ಹರಿಯದೇ ಅಲ್ಪ ಸ್ವಲ್ಪ ಸಮಸ್ಯೆಯಾಗುವುದು ಎಲ್ಲೆಡೆ ಸಹಜ.ಆದರೆ ಹುಳಿಯಾರು ಬಸ್ ನಿಲ್ದಾಣದಲ್ಲಿ ಮಾತ್ರ ಅಲ್ಪ ಮಳೆಯಾದರೂ ಸಾಕು, ಕಟ್ಟೆಗಳಲ್ಲಿ ನೀರು ತುಂಬಿದ ರೀತಿ ಆಗಿ ನಿಲ್ದಾಣಕ್ಕೆ ಬಸ್ ಬರಲು, ಪ್ರಯಾಣಿಕರು ಬಸ್ ಹತ್ತಲು ಪರದಾಡುವ ಸ್ಥಿತಿಗೆ ತಲುಪುತ್ತದೆ.ಬಸ್ ನಿಲ್ದಾಣದಲ್ಲಿ ಹರಿದು ಬರುವ ನೀರು ಹೊರಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಸಮಸ್ಯೆಗೆ ಕಾರಣವಾಗಿದ್ದು ಇದು ಕಳೆದೊಂದು ದಶಕದ ಸಮಸ್ಯೆಯಾಗಿದ್ದರೂ ಸಹ ಇದುವರೆಗೂ ಪರಿಹಾರ ಮಾತ್ರ ಸಿಕ್ಕಿಲ್ಲ.

     ಇದುವರೆಗೂ ಗ್ರಾಮ ಪಂಚಾಯಿತಿಯಾಗಿದ್ದ ಹುಳಿಯಾರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದರೂ ಅಭಿವದ್ಧಿ ಮಾತ್ರ ನಾಸ್ತಿಯಾಗಿದ್ದು ಬಸ್ ನಿಲ್ದಾಣದಲ್ಲಿ ಪ್ರತಿ ವರ್ಷವೂ ಬಸ್ಸುಗಳ ಸುಂಕದ ಹರಾಜಿನಲ್ಲಿ ಲಕ್ಷಾಂತರ ರುಪಾಯಿ ಸಂಗ್ರಹವಾಗುವುದಿದ್ದರೂ ಸಹ ಈ ಬಾಬ್ತು ಹಣ ಏನಾಗುತ್ತದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ.ಕಳೆದೆರಡು ತಿಂಗಳಿನ ಹಿಂದೆಯೂ ಇದೇ ಸಮಸ್ಯೆ ಉಂಟಾಗಿದ್ದು ನೂತನ ಶಾಸಕರು ಇದನ್ನು ಸರಿಪಡಿಸುವಂತೆ ಅಕಾರಿಗಳಿಗೆ ಸೂಚಿಸಿದ್ದರೂ ಕೂಡ ಅಕಾರಿಗಳದ್ದು ಮಾತ್ರ ಎಂದಿನ ದಿವ್ಯ ನಿರ್ಲಕ್ಷ್ಯ ಹಾಗೆ ಮುಂದುವರೆದಿದೆ.

    ನಿತ್ಯವೂ ನೂರಾರು ಖಾಸಗಿ ಹಾಗೂ ಕೆಎಸ್‌ಆರ್ ಟಿಸಿ ಬಸ್ಸುಗಳು ಅಗಮಿಸುವ ಹುಳಿಯಾರು ಬಸ್ ನಿಲ್ದಾಣದಲ್ಲಿ ಬಸ್ಸಿನಿಂದ ಇಳಿಯುವವರು ಪ್ಲಾಟ್ ಫಾರಂ ದಾಟಿ ಆಚೆಗೆ ಬರುವುದಕ್ಕೆ ಹರಸಾಹಸ ಪಡುವಂತಾಗಿದೆ.ವಯಸ್ಸಾದವರು,ಲಗೇಜ್ ಹೊತ್ತು ಬರುವ ಪ್ರಯಾಣಿಕರ ಪ್ರಯಾಸ ಹೇಳತೀರದಾಗಿದೆ.ಇದಕ್ಕೆ ಕಾಯಕಲ್ಪ ಎಂದು ಸಿಗಬಹುದೆಂದು ಎಂಬ ನಿರೀಕ್ಷೆಯಲ್ಲಿ ಹುಳಿಯಾರಿನ ಮಂದಿ ಇದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap