ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಗಂಡಾಂತರ

ದಾವಣಗೆರೆ:

       ಭಾರತದ ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಗಂಡಾಂತರ ಹಾಗೂ ಆಪತ್ತು ಎದುರಾಗಿದೆ ಎಂದು ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್.ಹಿರೇಮಠ್ ಆತಂಕ ವ್ಯಕ್ತಪಡಿಸಿದರು.

      ನಗರದ ಜಯದೇವ ವೃತ್ತದಲ್ಲಿರುವ ನಾಟ್ಯಾಚಾರ್ಯ ಶ್ರೀನಿವಾಸ ಕುಲ್ಕರ್ಣಿ ರಸ್ತೆಯಲ್ಲಿ ಶನಿವಾರ ನಿರುದ್ಯೋಗದ ವಿರುದ್ಧ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ವತಿಯಿಂದ ಏರ್ಪಡಿಸಿದ್ದ ಯುವಜನ ಸಮಾವೇಶದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಪ್ರಜಾಪ್ರಭುತ್ವಕ್ಕೆ ಗಂಡಾಂತರ ಎದುರಾಗಿದೆ ಎಂಬ ಮಾತನ್ನು ನಾನು ಹೇಳುತ್ತಿಲ್ಲ. ಈ ದೇಶದ ಸರ್ವೋಚ್ಛ ನ್ಯಾಯಾಲಯದ ನಾಲ್ವರು ಮುಖ್ಯ ನ್ಯಾಯಮೂರ್ತಿಗಳು ಹೇಳಿರುವುದು ಎಂದ ಅವರು, ನಮ್ಮ ದೇಶದ ಸಮಸ್ಯೆ ಏನು? ಆ ಸಮಸ್ಯೆಗಳನ್ನು ಹೇಗೆ ಬಗೆಹರಿಸಬೇಕೆಂಬ ಸಮಗ್ರ ಪರಿಕಲ್ಪನೆಹೊಂದಿರುವಂಥವರ ನಾಯಕತ್ವಬೇಕಾಗಿದೆ ಎಂದರು.

      ನಮ್ಮ ದೇಶವನ್ನು ಕೃಷಿ ಸಂಕಟ, ನಿರುದ್ಯೋಗ ಹಾಗೂ ಭ್ರಷ್ಟಾಚಾರ ಕಿತ್ತು ತಿನ್ನುತ್ತಿವೆ ಮೋದಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ನಡೆದಿರುವಷ್ಟು ರೈತರ ಆತ್ಮಹತ್ಯೆಗಳನ್ನು ನಾ ಹಿಂದೆಂದೂ ನೋಡಿಲ್ಲ. ಕೃಷಿಕರ ಸಮಸ್ಯೆ ಏನು? ಅದನ್ನು ಹೇಗೆ ಬಗೆಹರಿಸಬೇಕೆನ್ನುವ ರಾಜಕೀಯ ಇಚ್ಚಾಸಕ್ತಿ ಹಿಂದಿನ ಯುಪಿಯು ಸರ್ಕಾರಕ್ಕೂ ಇರಲಿಲ್ಲ ಹಾಗೂ ಈಗಿನ ಎನ್‍ಡಿಎ ಸರ್ಕಾರಕ್ಕೂ ಇಲ್ಲ. ಆದ್ದರಿಂದ ರೈತರು ತೀವ್ರ ಸಂಕಷ್ಟಕ್ಕೆ ತುತ್ತಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

      ಪ್ರಧಾನಿ ನರೇಂದ್ರ ಮೋದಿ ಭಾರತ ವಿಶ್ವಕ್ಕೆ ಗುರುವಾಗಲಿದೆ ಎಂಬುದಾಗಿ ಹೇಳುತ್ತಾರೆ. ಆದರೆ, ನಮ್ಮ ದೇಶದ ವಿವಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಬೋಧನೆ ಮಾಡಲು ಅಗತ್ಯ ಸಂಖ್ಯೆಯಲ್ಲಿ ಗುರುಗಳಿಲ್ಲ ಎಂಬುದನ್ನು ಮೊದಲು ಅರಿಯಬೇಕೆಂದು ಮಾರ್ಮಿಕವಾಗಿ ನುಡಿದರು.

      ಪ್ರಸ್ತುತ ಶಿಕ್ಷಣ ಹಾಗೂ ಆರೋಗ್ಯ ಖಾಸಗೀಕರಣಗೊಂಡಿರುವುದ್ದರ ಪರಿಣಾಮ ಅದೆಷ್ಟೋ ವಿದ್ಯಾರ್ಥಿ-ಯುವ ಜನರು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಮಕ್ಕಳು ಮತ್ತು ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇಂಥಹ ಜನರ ಸಮಸ್ಯೆಗಳ ಬಗ್ಗೆ ಮಾತನಾಡದ ಮೋದಿ ಸರ್ಕಾರ ಅರ್ಥವಿಲ್ಲದ ಸಿದ್ಧಾಂತದ ಮೂಲಕ ಆಡಳಿತ ನಡೆಸುತ್ತಿದ್ದಾರೆ. ಇಂಥಹ ದುರಾಹಂಕಾರದ ಸರ್ಕಾರವನ್ನು ತೊಲಗಿಸಲು ಯುವಜನತೆ ಅಧಿಕಾರ ದುರುಪಯೋಗ ಪಡೆಸಿಕೊಳ್ಳುವವರ ವಿರುದ್ಧ ಹೋರಾಟ ನಡೆಸಬೇಕೆಂದು ಕರೆ ನೀಡಿದರು.

      ಎಐಡಿವೈಓ ರಾಷ್ಟ್ರೀಯ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ದೇಶದಲ್ಲಿ ಕೆಲವರು ಭಾಷಣ ಮಾಡುವ ಭಾಷಣಕೋರರಿದ್ದಾರೆ. ಆದರೆ, ಕೆಲವೇ ಕೆಲವು ಜನ ಮಾತ್ರ ಮಾತನಾಡಿದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಾಮಾಣಿಕ ಹೋರಾಟಗಾರರಿದ್ದಾರೆ. ಇಂಥಹ ಅಪರೂಪದ ವ್ಯಕ್ತಿತ್ವ ಹೊಂದಿರುವವರಲ್ಲಿ ಎಸ್.ಆರ್.ಹಿರೇಮಠ ಸಹ ಒಬ್ಬರು. ನಮಗೆ ಇಂಥವರು ಬೇಕೇ ಹೊರತು, ಮಾತಿನಲ್ಲಿ ಮತ್ತು ಕೃತಿಯಲ್ಲಿ ಹೋಲಿಕೆಯೇ ಇಲ್ಲದ ಭಾಷಣಕೋರರು ಬೇಕಾಗಿಲ್ಲ ಎಂದು ಹೇಳಿದರು.

      ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸವರನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎರಡೂ ಮಾಡುತ್ತಿಲ್ಲ. ಅದರಲ್ಲೂ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಇನ್ನೂ ಚಾಲನೆಯೇ ಸಿಕ್ಕಿಲ್ಲ. ಆ ಪಕ್ಷಗಳಲ್ಲಿನ ಶಾಸಕರು ಬರೀ ಸಚಿವ ಸ್ಥಾನಕ್ಕಾಗಿ ಕಿತ್ತಾಟ ನಡೆಸುತ್ತಿದ್ದರೆ, ಇನ್ನೂ ವಿರೋಧ ಪಕ್ಷದಲ್ಲಿರುವ ಬಿಜೆಪಿ ಸಂದು ಸಿಕ್ಕಲ್ಲಿ ತೂರಿ ಕೊಳ್ಳುವ ಮೂಲಕ ಮುಖ್ಯಮಂತ್ರಿಗಳ ಕುರ್ಚಿಯ ಮೇಲೆ ಕಣ್ಣಿಟ್ಟಿದೆ. ಹೊರತು, ಜನರ ಸಮಸ್ಯೆಗಳ ಬಗ್ಗೆ ಗಮನವೇ ಇಲ್ಲ. ಚುನಾವಣೆಯಲ್ಲಿ ಕೋಟ್ಯಾಂತರ ರೂ, ಚೆಲ್ಲುವ ಮೂಲಕ ಅಕ್ರಮ ಎಸಗಿ ಆಯ್ಕೆಯಾಗಿರುವ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಪಕ್ಷಗಳ ಶಾಸಕರಿಗೆ ಜನಪರ ಕಾಳಜಿಯೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ನಾನು ಪ್ರಧಾನಮಂತ್ರಿಯಲ್ಲ. ಪ್ರಧಾನ ಸೇವಕ ಎಂದಿದ್ದರು. ಈಗ ಮೋದಿ ಅವರಿಗೆ ಆ ಮಾತಿನ ನೆನಪಿದ್ದರೆ, ಕೊಟ್ಟ ಆಶ್ವಾಸನೆಗಳಲ್ಲಿ ಎಷ್ಟು ಈಡೇರಿಸಿದ್ದಾರೆಂಬುದರ ಬಗ್ಗೆ ಲೆಕ್ಕ ಕೊಡಬೇಕು. ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ? ವಿದೇಶದಿಂದ ಎಷ್ಟು ಕಪ್ಪು ಹಣ ತಂದಿದ್ದಾರೆ? ಎಷ್ಟರ ಮಟ್ಟಿಗೆ ಭ್ರಷ್ಟಾಚಾರ ನಿರ್ಮೂಲನೆ ಮಾಡಿದ್ದಾರೆ ಎಂಬುದರ ಬಗ್ಗೆ ಉತ್ತರಿಸಬೇಕೆಂದು ಆಗ್ರಹಿಸಿದರು.

      ಹಿಂದಿನ ಕಾಂಗ್ರೆಸ್ ಸರ್ಕಾರದ ನೀತಿಗಳನ್ನೇ ವೇಗವಾಗಿ ಜಾರಿಗೆ ತರುತ್ತಿರುವ ಎನ್‍ಡಿಎ ಸರ್ಕಾರವು, ಬಂಡವಾಳಶಾಹಿಗಳು ದೇಶದ ಸಂಪತ್ತು ಲೂಟಿ ಮಾಡಲು ಅನುವಾಗುವಂಥಹ ಕಾನೂನುಗಳನ್ನು ಜಾರಿಗೆ ತರುತ್ತಿದೆ. ಪ್ರಧಾನಿ ಮೋದಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು 800 ದಿನ ಬಳಿಸಿಕೊಂಡಿದ್ದರೆ, 200 ದಿನ ವಿದೇಶ ಸುತ್ತಲು ಬಳಕೆ ಮಾಡಿಕೊಂಡಿದ್ದಾರೆ. ಆದರೆ, ತಲೆ ಬಾಗಿ ನಮಸ್ಕರಿಸಿದ ಸಂಸತ್‍ನಲ್ಲಿ ಕೇವಲ 15 ದಿನ ಮಾತ್ರ ಕೂತಿದ್ದಾರೆಂದು ಆರೋಪಿಸಿದರು.

      ದೇಶದ ಸಮಸ್ಯೆಗಳ ಬಗ್ಗೆ ಮಾತನಾಡದ ಮೋದಿ ಧರ್ಮ, ಜಾತಿದಂಥಹ ಭಾವಾತ್ಮಕ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ದೇಶ ಕಟ್ಟಲಾಗುವುದಿಲ್ಲ ಎಂದ ಅವರು, ಧರ್ಮ ಮತ್ತು ಜಾತಿ ನಿರಪೇಕ್ಷಿತ ಸಮಾಜವಾದಿ ಸಮಾಜ ನಿರ್ಮಾಣಕ್ಕಾಗಿ ಭಗತ್‍ಸಿಂಗ್, ಸುಭಾಷ್‍ಚಂದ್ರ ಭೋಸ್ ಅವರಂಥವರು ಹೋರಾಟ ಮಾಡಿರುವ ಪರಂಪರೆ ಇದೆ. ಆದರೆ, ಬಹುಪಾಲು ಕ್ರಿಮಿನಲ್‍ಗಳೇ ಆಗಿರುವ ಇಂದಿನ ರಾಜಕಾರಣಿಗಳಿಗೆ ಹೋರಾಟದ ಪರಿವೇ ಇಲ್ಲ. ಇಂಥಹ ರಾಜಕಾಣಿಗಳನ್ನು ತೊಲಗಿಸಲು ಪ್ರತಿಯೊಬ್ಬರ ಯುವಕರು ಭಗತ್‍ಸಿಂಗ್‍ರಂತೆ ಬೆಂಕಿಯ ಉಂಡೆಗಳಾಗಬೇಕೆಂದು ಸಲಹೆ ನೀಡಿದರು.

      ಎಐಡಿವೈಓ ರಾಜ್ಯ ಕಾರ್ಯದರ್ಶಿ ಡಾ.ಜಿ.ಎಸ್.ಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಗತಿಪರ ಹೋ ರಾಟಗಾರ ತೇಜಸ್ವಿ ಪಟೇಲ್, ಎಐಡಿವೈಓ ರಾಜ್ಯಾಧ್ಯಕ್ಷೆ ಎಂ.ಉಮಾದೇವಿ, ಉಪಾಧ್ಯಕ್ಷರುಗಳಾದ ಶರಣಪ್ಪ ಉದ್ಬಾಳ್, ಲಕ್ಷ್ಮಣ ಜಡಗನ್ನವರ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link