ಅಜ್ಜಗೊಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಹೋರಾಟ : 116 ರೈತರ ಮೇಲಿನ ಮೊಕದ್ದಮೆ ವಾಪಸ್

ತುಮಕೂರು:

      ಬೆಳ್ಳಾವಿ ಹೋಬಳಿ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಉಂಟಾಗಿದ್ದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 2014 ರಲ್ಲಿ ದಾಖಲಾಗಿದ್ದ ರೈತರ ಮೇಲಿನ ಮೊಕದ್ದಮೆಗಳನ್ನು ಸರ್ಕಾರ ಹಿಂಪಡೆದಿದೆ.

      2014ರ ಡಿಸೆಂಬರ್ 20 ರಂದು ರಾತ್ರಿ ನಡೆದಿದ್ದ ಗಲಾಟೆ ತೀವ್ರ ಸ್ವರೂಪ ಪಡೆದಿತ್ತು. ಅಂದಿನವರೆಗೆ ಕಾನೂನು ರೀತ್ಯ ನಡೆದಿದ್ದ ಹೋರಾಟಗಳು ಲೆಕ್ಕವಿಲ್ಲದ ರೀತಿಯಲ್ಲಿ ಅಂದಿನ ಗಲಾಟೆ ಒಂದು ರೀತಿಯ ಕಪ್ಪು ಚುಕ್ಕೆಯಾಗಿ ಪರಿವರ್ತಿತವಾಗಿತ್ತು. ರಾತ್ರೋರಾತ್ರಿ ಕಟ್ಟಿಗೇನಹಳ್ಳಿಯಲ್ಲಿ ನಡೆದಿದ್ದ ಆ ಪ್ರಕರಣದಲ್ಲಿ ಪೊಲೀಸ್ ಜೀಪಿಗೆ ಬೆಂಕಿ ಹಚ್ಚಲಾಗಿತ್ತು. ಜೀಪನ್ನು ಬಿಟ್ಟು ಪೊಲೀಸರು ಅಲ್ಲಿಂದ ಪರಾರಿಯಾಗಿದ್ದರು. ಪೊಲೀಸರು ಹಾಗೂ ಸ್ಥಳೀಯ ಕೆಲವರ ನಡುವೆ ನಡೆದ ಅಂದಿನ ಗಲಾಟೆಗೆ ಸಂಬಂಧಿಸಿದಂತೆ ಸುಮಾರು 150 ಜನರ ವಿರುದ್ಧ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

      ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕ ವಿರೋಧಿಸಿ ಕಟ್ಟಿಗೇನಹಳ್ಳಿ ಸೇರಿದಂತೆ ಆ ಭಾಗದ ಸುತ್ತಮುತ್ತಲಿನ ಜನ ಹೋರಾಟಕ್ಕಿಳಿದಿದ್ದರು. ಸತತ ಹೋರಾಟಗಳ ನಡುವೆ ಆಗಾಗ್ಗೆ ಕೆಲವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಅಜ್ಜಗೊಂಡನಹಳ್ಳಿ ಪ್ರದೇಶಕ್ಕೆ ಭೇಟಿ ನೀಡಿ ಹೋರಾಟಗಾರರನ್ನು ಸಮಾಧಾನಪಡಿಸಿ ಬರುತ್ತಿದ್ದರು.

      ಡಿಸೆಂಬರ್ 20, 2014 ರಂದು ಶಿವಕುಮಾರ್ ಎಂಬುವರು ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಆತ್ಮಹತ್ಯೆಗೆ ಅಜ್ಜಗೊಂಡನಹಳ್ಳಿ ಘಟಕವೇ ಕಾರಣ ಎನ್ನಲಾಗಿತ್ತು. ಘಟಕ ವಿರೋಧಿಸಿ ನಡೆಸಿದ್ದ ಹೋರಾಟಗಳಿಗೆ ಬೆಲೆ ಸಿಗಲಿಲ್ಲ ಎಂಬಿತ್ಯಾದಿ ಆರೋಪಗಳೊಂದಿಗೆ ಶಿವಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿಬಂದಿದ್ದವು. ಆತನ ಶವವನ್ನು ಜಿಲ್ಲಾಸ್ಪತ್ರೆಯಿಂದ ಕಟ್ಟಿಗೇನಹಳ್ಳಿಗೆ ತೆಗೆದುಕೊಂಡು ಹೋಗಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆದು ಗ್ರಾಮಕ್ಕೆ ಶವವನ್ನು ಸಾಗಿಸುವಷ್ಟರ ವೇಳೆಗೆ ರಾತ್ರಿಯಾಗಿತ್ತು.

      ಅಲ್ಲಿಗೆ ತೆರಳಿದ್ದ ಪೊಲೀಸ್ ಜೀಪಿನ ಮೇಲೆ ಗುಂಪೊಂದು ಕಲ್ಲು ತೂರಿತ್ತು. ಪೊಲೀಸ್ ಸಶಸ್ತ್ರ ಮೀಸಲು ಪಡೆ ವಾಹನಕ್ಕೆ ಬೆಂಕಿ ಹಚ್ಚಿದ್ದರಿಂದಾಗಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಆ ಸಂದರ್ಭದಲ್ಲಿ ಸಿಪಿಐ ಅಬ್ದುಲ್ ಖಾದರ್ ಸೇರಿದಂತೆ 10ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದರು. 50ಕ್ಕೂ ಹೆಚ್ಚು ಗ್ರಾಮಸ್ಥರು ಗಾಯಗೊಂಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅಬ್ದುಲ್ ಖಾದರ್ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದು ರಾತ್ರಿ ನಡೆದ ಆ ಘಟನೆ ಒಂದು ರೀತಿಯ ಕರಾಳ ದಿನವಾಗಿಯೇ ಮಾರ್ಪಟ್ಟಿತು.

      ಈ ಘಟನೆಗೆ ಸಂಬಂಧಿಸಿದಂತೆ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಐಪಿಸಿ 143, 147, 148, 332, 435, 427 ಹಾಗೂ ಇತರೆ ಕಲಂಗಳ ಅಡಿಯಲ್ಲಿ ಕೇಸು ದಾಖಲಿಸಿ ಇದಕ್ಕೆ ಕಾರಣರಾದವರ ಬಂಧನ ಶುರುವಾಯಿತು. ಊರುಗಳನ್ನು ಬೆನ್ನೆತ್ತಿದ ಪೊಲೀಸರು ಹಿಡಿದು ಠಾಣೆಗೆ ಕರೆತಂದು ಕೇಶು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಟ್ಟಿಗೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪುರುಷರು ತಮ್ಮ ಗ್ರಾಮಗಳನ್ನೇ ತೊರೆದಿದ್ದರು. ಊರಿಗೆ ಊರೇ ಘಡ ಘಡ ನಡುಗುವ ಸ್ಥಿತಿ ಉಂಟಾಗಿತ್ತು. ಸಂಬಂಧಿಕರ ಮನೆಗಳಿಗೆಲ್ಲಾ ತೆರಳಿ ಪೊಲೀಸರು ಸೇಡು ತೀರಿಸಿಕೊಳ್ಳಲು ಆರಂಭಿಸಿದ್ದರು.

     ಅಂತಿಮವಾಗಿ ಆ ಘಟನೆಗೆ ಸಂಬಂಧಿಸಿದಂತೆ ಸುಮಾರು 150 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದರಲ್ಲಿ ಅನೇಕ ಅಮಾಯಕರು ಸಿಲುಕಿ ಹೋಗಿದ್ದರು. ಘಟನೆ ನಡೆದ ದಿನ ಪೊಲೀಸ್ ವಾಹನಕ್ಕೆ ಕಲ್ಲು ತೂರಿದವರು ಕೆಲವರಾದರೆ, ಈ ಘಟನೆಗೆ ಸಂಬಂಧವೇ ಇಲ್ಲದ ವ್ಯಕ್ತಿಗಳನ್ನು ಹುಡುಕಿ ಪ್ರಕರಣ ದಾಖಲಿಸಲಾಗಿತ್ತು. ಹೋರಾಟಗಾರ ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಈ ಪ್ರಕರಣದಲ್ಲಿ ಸಿಲುಕಿದ್ದರು.

     ಹೋರಾಟಗಾರರ ಮೇಲಿನ ಮೊಕದ್ದಮೆಯನ್ನು ವಾಪಸ್ ಪಡೆಯುವಂತೆ ಸರ್ಕಾರದ ಮೇಲೆ ಒತ್ತಡಗಳು ಹೆಚ್ಚಾಗಿದ್ದವು. ಗುರುವಾರ  (ಅ.4) ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಯಿತು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿವಿಧ ಸಂಘಟನೆಗಳ ಮುಖಂಡರು, ರೈತರ ಮೇಲೆ ನಡೆದಿರುವ ಮೊಕದ್ದಮೆಗಳನ್ನು ಕೈಬಿಡುವ ಕುರಿತಂತೆ ಸುದೀರ್ಘ ಚರ್ಚೆಗಳು ನಡೆದವು. ಅಂತಿಮವಾಗಿ ಸಾರ್ವಜನಿಕ ಪ್ರತಿಭಟನೆಗಳಲ್ಲಿ ಭಾಗವಹಿಸಿದ ಪ್ರಕರಣಗಳನ್ನು ಕೈಬಿಡಲು ತೀರ್ಮಾನಿಸಲಾಯಿತು.

      ಅವುಗಳಲ್ಲಿ ರೈತಸಂಘ, ರಕ್ಷಣಾ ವೇದಿಕೆ ಮತ್ತಿತರ ಪ್ರಮುಖ ಪ್ರಕರಣಗಳನ್ನು ಪರಿಶೀಲಿಸಲಾಗಿ ಒಟ್ಟು 14 ಪ್ರಕರಣಗಳನ್ನು ಕೈಬಿಡುವ ಬಗ್ಗೆ ತೀರ್ಮಾನಿಸಲಾಗಿದೆ.

      ಬೆಳಗಾವಿಯಲ್ಲಿ ಶಿವಾಜಿ ಜಯಂತಿ ವೇಳೆ ನಡೆದಿದ್ದ ಸಂಘರ್ಷ, ತುಮಕೂರಿನಲ್ಲಿ ಕಸ ವಿಲೇವಾರಿ ಘಟಕದ ವಿಷಯದಲ್ಲಿ ನಡೆದಿದ್ದ ಗಲಾಟೆ ಇವುಗಳ ಜೊತೆಗೆ ರೈತ ಸಂಘಟನೆ, ರಕ್ಷಣಾ ವೇದಿಕೆಯ ಕಾರ್ಯಕರ್ತರು ನಡೆಸಿದ ಸಾರ್ವಜನಿಕ ಪ್ರತಿಭಟನೆಗಳನ್ನು ಗಮನಿಸಲಾಯಿತು. ಇವುಗಳಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಕರಣಗಳನ್ನು ಹಿಂಪಡೆಯುವಂತೆ ಸಲ್ಲಿಸಲಾಗಿದ್ದ ಮನವಿಗಳನ್ನು ಅನುಮೋದಿಸಲಾಗಿದೆ. ಇದರಿಂದಾಗಿ ಅಜ್ಜಗೊಂಡನಹಳ್ಳಿ ಘನತ್ಯಾಜ್ಯ ವಿಲೇವಾರಿ ಘಟಕದ ವಿರುದ್ಧ ಹೋರಾಟ ಮಾಡಿದ್ದ 116 ರೈತರ ಮೇಲಿನ ಮೊಕದ್ದಮೆಗಳು ರದ್ದಾಗಲಿದ್ದು, ಇದು ಅವರೆಲ್ಲರ ಪಾಲಿಗೆ ಸಂತಸ ತಂದಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link