60 ವರ್ಷಗಳಲ್ಲಿ ಸಾಧ್ಯವಾಗದ ದೇಶದ ಅಭಿವೃದ್ಧಿ 48 ತಿಂಗಳಲ್ಲಿ ಮೋದಿ ಸರ್ಕಾರ ಮಾಡಿದೆ

ಬ್ಯಾಡಗಿ:

     ಕಳೆದ 60 ವರ್ಷಗಳಲ್ಲಿ ಸಾಧ್ಯವಾಗದ ದೇಶದ ಅಭಿವೃದ್ಧಿ ಕಾರ್ಯ ಕೇವಲ 48 ತಿಂಗಳಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದ ಸಾಧ್ಯವಾಗಿದ್ದು, ಈ ಬಗ್ಗೆ ಜನರಿಗೆ ಅರಿವು ಮೂಡಿಸುವ ಮೂಲಕ ಮುಂಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಪಡೆಯುವುದರೊಂದಿಗೆ ಮತ್ತೇ ಕೇಂದ್ರದಲ್ಲಿ ಮೋದಿ ಸಾರಥ್ಯದಲ್ಲಿ ಸರಕಾರ ರಚನೆಯಾಗುವ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಒಗ್ಗೂಡಿ ಶ್ರಮಿಸಬೇಕೆಂದು ಮಾಜಿ ಸಚಿವ ಸಿ.ಎಂ.ಉದಾಸಿ ಹೇಳಿದರು.

      ಅವರು ರವಿವಾರ ತಾಲೂಕಿನ ಮೋಟೆಬೆನ್ನೂರ ಗ್ರಾಮದ ಬಳ್ಳಾರಿ ರುದ್ರಪ್ಪ ಕಾಲೇಜ್ ಸಭಾಭವನದಲ್ಲಿ ಜರುಗಿದ ಜಿಲ್ಲಾ ಬಿಜೆಪಿ ಪಕ್ಷದ ವಿಶೇಷ ಸಭೆಯನ್ನು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಮತ್ತು ಕೇಂದ್ರದ ಆರ್ಥಿಕ ವಿಕಾಸಕ್ಕೆ ಕೇವಲ ಮಾತೇ ಮದ್ದಲ್ಲ. ಕೆಲಸ ಮಾಡುವ ಮೂಲಕ ಆರ್ಥಿಕ ಸಬಲತೆಯನ್ನು ಸಾಧಿಸುವುದು ಅವಶ್ಯವಾಗಿದೆ.

      ಸಾಲ ಮನ್ನಾ ಹೆಸರಿನಲ್ಲಿ ರೈತರೊಂದಿಗೆ ಹುಡುಗಾಟವಾಡುತ್ತಿರುವ ರಾಜ್ಯದ ಸಮ್ಮಿಶ್ರ ಸರಕಾರ ಆಶಾ ಕಾರ್ಯಕರ್ತರಿಗೂ ಸಹ ಸರಿಯಾಗಿ ಗೌರವ ಧನ ನೀಡದೇ ಚೆಲ್ಲಾಟವಾಡುತ್ತಲಿದೆ. ಕೇವಲ ಪೆಟ್ರೋಲ್-ಡಿಸೇಲ್ ದರ ಏರಿಕೆಯನ್ನು ನೆಪವಾಗಿಟ್ಟುಕೊಂಡು ಟೀಕೆ ಮಾಡುವುದು ಹಾಸ್ಯಾಸ್ಪದ. ರಾಜ್ಯದಲ್ಲಿ ಸಮರ್ಪಕವಾಗಿ ಆಡಳಿತ ನೀಡುವಲ್ಲಿ ಸಮ್ಮಿಶ್ರ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ. ಪಕ್ಷದ ಕಾರ್ಯಕರ್ತರು ಸಹ ಕೇಂದ್ರ ಸರಕಾರದ ಸಾಧನೆಗಳನ್ನು ಹಾಗೂ ರಾಜ್ಯ ಸಮ್ಮಿಶ್ರ ಸರಕಾರದ ವೈಪಲ್ಯಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಬಿಜೆಪಿಗೆ ಮತ ಯಾಚನೆ ಮಾಡಿ ಸ್ಪಷ್ಟ ಗೆಲುವಿಗೆ ಪ್ರಯತ್ನಿಸಬೇಕೆಂದರು.

       ಜಿಲ್ಲಾ ಬಿಜೆಪಿ ಪಕ್ಷದ ಅಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿ ಕೇವಲ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಮಾಡುವುದು ಸೂಕ್ತವಲ್ಲ. ಸತತವಾಗಿ ಕೇಂದ್ರ ಸರಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸಲು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಮುಂದಾಗಬೇಕು. ಮುಂದಿನ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪಕ್ಷದ ಪರ ಪ್ರಚಾರ ಕಾರ್ಯ ನಡೆಸಿ ಪಕ್ಷದ ಗೆಲುವಿಗೆ ಕಾರಣೀಕರ್ತರಾಗಬೇಕೆಂದು ಕರೆ ನೀಡಿದರು.

      ಸಭೆಯಲ್ಲಿ ಸಂಸದ ಶಿವಕುಮಾರ ಉದಾಸಿ, ಶಾಸಕರುಗಳಾದ ವಿರೂಪಾಕ್ಷಪ್ಪ ಬಳ್ಳಾರಿ, ನೆಹರೂ ಓಲೇಕಾರ, ಬಸವರಾಜ ಬೊಮ್ಮಾಯಿ, ಮಾಜಿ ಶಾಸಕ ಯು.ಬಿ.ಬಣಕಾರ, ಮಾಜಿ ಸಂಸದ ಮಂಜುನಾಥ ಕುನ್ನೂರ, ರಾಜ್ಯ ಬಿಜೆಪಿ ಮಹಿಳಾ ಉಪಾಧ್ಯಕ್ಷೆ ಭಾರತಿ ಅಳವಂಡಿ, ತಾಲೂಕಾ ಬಿಜೆಪಿ ಅಧ್ಯಕ್ಷ ಶಂಕ್ರಣ್ಣ ಮಾತನವರ, ವಿಶ್ವನಾಥ ಭಟ್ಟ, ಧುರೀಣರಾದ ಮಂಜುನಾಥ ಓಲೇಕಾರ, ಸಿದ್ದರಾಜ ಕಲಕೋಟಿ, ವಿ.ವಿ.ಹಿರೇಮಠ, ರಾಮಣ್ಣ ಉಕ್ಕುಂದ, ಎನ್.ಎಂ.ಈಟೇರ, ವಿರೇಂದ್ರ ಶೆಟ್ಟರ, ಸುರೇಶ ಯತ್ನಳ್ಳಿ ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link