ಚಿಕ್ಕನಾಯಕನಹಳ್ಳಿ
ಕಡು ಬಡವರಿಗೆ ಆಯುಷ್ ಯೋಜನೆಯಡಿ 5 ಲಕ್ಷದವರೆಗೆ ಉಚಿತ ಚಿಕಿತ್ಸಾ ವೆಚ್ಚ ಕೇಂದ್ರ ಸರ್ಕಾರ ನೀಡುತ್ತಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪಟ್ಟಣದ ಬಳಿ ಇರುವ ಜಿ.ಎಂ.ಆರ್ ಕಲ್ಯಾಣ ಮಂಟಪದಲ್ಲಿ 2018ರ ವಿಶ್ವ ಫಾರ್ಮಸಿ ದಿನಾಚರಣೆ ಜಿಲ್ಲಾ ಮಟ್ಟದ ಕಾರ್ಯಗಾರ ಹಾಗೂ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲಾ ವೃತ್ತಿಗಳು ಶ್ರೇಷ್ಠ, ವೃತ್ತಿಯಲ್ಲಿ ಸಂಭಾವನೆ ಹಾಗೂ ಲಾಭ ಪಡೆದಾಗ ಅದು ಕರ್ತವ್ಯವೆನಿಸುತ್ತದೆ.
ಔಷಧಿ ಮೇಲಿನ ತೆರಿಗೆ ಹೆಚ್ಚಾಗುತ್ತಿದೆ ಎಂದು ಔಷಧಿ ವ್ಯಾಪಾರಿಗಳ ಸಂಘದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು ಸರ್ಕಾರ ಔಷಧಿಗಳ ಮೇಲೆ ತೆರಿಗೆ ಹಾಕಲೇಬೇಕು ಇದರಿಂದ ಕಡುಬಡವರಿಗೆ ಉಚಿತವಾಗಿ ಔಷಧಿಯನ್ನು ಕೊಡಲು ಸಾಧ್ಯ, ಕೇಂದ್ರ ಸರ್ಕಾರ ಬಡವರ ದೃಷ್ಠಿ ಇಟ್ಟುಕೊಂಡು ಪ್ರಧಾನಮಂತ್ರಿ ಜನೌಷಧಿ ಕಾರ್ಯಕ್ರಮವನ್ನು ರೂಪಿಸಿ ಬಡವರಿಗೆ ಅತ್ಯಂತ ಕಡಿಮೆ ದರದಲ್ಲಿ ಔಷಧಿಯನ್ನು ನೀಡುತ್ತಿದೆ, ನಮ್ಮ ದೇಶದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ, ವಿದೇಶಗಳಲ್ಲಿ ಅತ್ಯಂತ ದುಬಾರಿ ಚಿಕಿತ್ಸಾ ವೆಚ್ಚವಿದೆ ಎಂದ ಅವರು ಇತ್ತೀಚೆಗೆ ವೈದ್ಯರು ಸಹ ಔಷಧಿ ಅಂಗಡಿಗಳಿಂದ ಕಮಿಷನ್ ಪಡೆಯುತ್ತಿರುವುದು ದುರದೃಷ್ಠಕರ, ದೇಶದಲ್ಲಿ ಯಾರಾದರೂ ಔಷಧಿ ಸಂಶೋಧನೆ ಮಾಡಿ ಹೊರತಂದರೆ ತಕ್ಷಣ ನಕಲಿ ಔಷಧಿಗಳನ್ನು ತಯಾರಿಸಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಇದನ್ನು ನಿಯಂತ್ರಿಸಬೇಕು ಎಂದರು.
ತುಮಕೂರು ಜಿಲ್ಲಾ ಉಪೌಷಧಿ ನಿಯಂತ್ರಕ ಹೆಚ್.ಶ್ರೀಶ್ರೀನಿವಾಸ್ ಮಾತನಾಡಿ, ಹಿಂದಿನ ಕಾಲದಲ್ಲಿ ಆಯುರ್ವೇದ ಪದ್ದತಿ, ಮೊಘಲರ ಕಾಲದಲ್ಲಿ ಯುನಾನಿ ಚಿಕಿತ್ಸಾ ಪದ್ದತಿ, ಬ್ರಿಟಿಷರ ಆಡಳಿತ ಬಂದ ಮೇಲೆ ಅಲೋಪತಿ ಚಿಕಿತ್ಸೆ, ಮಹಾರಾಜರ ಕಾಲದಲ್ಲಿ ಅಳಲೇಕಾಯಿ ಪಂಡಿತರು ಎಂದು ಕರೆಯುತ್ತಿದ್ದರು.
ಪೋರ್ಚಗೀಸರು ಬಂದ ಮೇಲೆ ಫಾರ್ಮಸಿಸ್ಟ್ ಎಂಬ ಹೆಸರು ಬಂದಿತು ಎಂದ ಅವರು 1936ರಲ್ಲಿ 1300 ಔಷಧಿ ಅಂಗಡಿಗಳಿದ್ದು ಈಗ 2ಲಕ್ಷಕ್ಕೂ ಹೆಚ್ಚು ಔಷಧಿ ಅಂಗಡಿಗಳಿವೆ, ದೇಶದಲ್ಲಿ ಒಂದು ಲಕ್ಷ ನಲವತ್ತು ಸಾವಿರ(1,40,0000)ಕೋಟಿ ವ್ಯವಹಾರ ನಡೆಯುತ್ತಿದೆ, ಈಗಾಗಲೇ ದೇಶದಲ್ಲಿ ಆನ್‍ಲೈನ್‍ನಲ್ಲಿ ಔಷಧಿ ಮಾರಾಟ ಮಾಡುವ ಕಂಪನಿಗಳು ಶೇ.30ರಿಂದ 40ರಷ್ಟು ರಿಯಾಯಿತಿ ನೀಡುತ್ತಿದ್ದು, ಈ ಔಷಧಿಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು ಶಾಸಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಫಾರ್ಮಸಿಸ್ಟ್‍ಗಳನ್ನು ನೇಮಿಸಿಕೊಳ್ಳಲು ಸರ್ಕಾರದ ಒತ್ತಡ ತರುವಂತೆ ಮನವಿ ಮಾಡಿದರು.
ತುಮಕೂರು ಔಷಧಿ ನಿಯಂತ್ರಕ ವಿ.ಮಮತಾ ಮಾತನಾಡಿ, ಆನ್‍ಲೈನ್ ಔಷಧಿ ರಿಯಾಯಿತಿ ನೋಡಿದರೆ ಗಾಬರಿಯಾಗುತ್ತಿದೆ, ಔಷಧಿಗಳ ಬಗ್ಗೆ ಸರ್ಕಾರ ಗಮನಹರಿಸಬೇಕು, ಇತ್ತಿಚೆಗೆ ಔಷಧಿ ಅಂಗಡಿಗಳಲ್ಲಿ ಮಾದಕ ವಸ್ತು ಸೇವನೆ ಮಾಡುವವರಿಗೆ ಔಷಧಿ ಅಂಗಡಿಗಳಲ್ಲಿ ಔಷಧಿ ನೀಡುವಾಗ ಜಾಗರೂಕತೆಯಿಂದ ಇರಬೇಕು ಎಂದರು.ಕಾರ್ಯಕ್ರಮದಲ್ಲಿ ಪಂಡಿತ್‍ಜವಹರ್ ಔಷಧ ವ್ಯಾಪಾರ ಸಾಧಕ-ಬಾಧಕಗಳ ಬಗ್ಗೆ ವಿಚಾರ ಮಂಡಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಿ.ಆರ್.ವೀರಭದ್ರಸ್ವಾಮಿ ನಿಶಾನಿ, ತುಮಕೂರು ಜಿಲ್ಲಾ ಔಷಧಿ ವ್ಯಾಪಾರಿಗಳ ಸಹಾಯಕ ಬಿ.ಜಿ.ಭಾಗ್ಯಜ್ಯೋತಿ, ಮೈಕ್ರೋ ಲ್ಯಾಬ್ & ಜೈನ್ ಡಿಸ್ಟ್ರಿಬ್ಯೂಟರ್ ಜಗದೀಶ್ ಸೋಲಂಕಿ, ಮಹೇಂದ್ರಕುಮಾರ್ ಜೈನ್, ಆರ್.ಗೋಪಾಲ್, ಬಿ.ಎಂ.ಮಹೇಶ್, ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಸದಸ್ಯ ದೀಲೀಪ್‍ಕುಮಾರ.ಷಾ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹುಳಿಯಾರು ಔಷಧಿ ವ್ಯಾಪಾರಿಗಳಾದ ಹುಳಿಯಾರಿನ ಎಸ್.ಎಲ್.ಆರ್.ಮೆಡಿಕಲ್ಸ್ ದೇವರಾಜು ಹಾಗೂ ಫಾರ್ಮಸಿಸ್ಟ್‍ಗಳಾದ ಯಳನಡು ಜಯಣ್ಣ, ತುಮಕೂರಿನ ಸಿ.ಆರ್.ರಘುನಾಥ್, ಬೆಳ್ಳಾವಿಯ ಶ್ರೀಮತಿ ವಾಣಿ ಇವರನ್ನು ಸನ್ಮಾನಿಸಲಾಯಿತು.
ವೈದ್ಯಕೀಯ ವಿದ್ಯಾರ್ಥಿಗಳಾದ ಬಿ.ಎನ್.ನೇಸರ್‍ಜೈನ್, ಹಾಗೂ ತಾಂತ್ರಿಕ ವಿದ್ಯಾರ್ಥಿ ಸಿ.ಪಿ.ಸಂಯಮ ಪ್ರಸಾದ್ ರವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರದೀಪ್‍ಕುಮಾರ್ ಸ್ವಾಗತಿಸಿದರು. ಸಿ.ರವಿಕುಮಾರ್ ನಿರೂಪಿಸಿದರು. ನಿರೂಪ್‍ರಾವತ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/10/08.10.18-C.N.H.gif)