ಮಧುಗಿರಿ :
ಮಹಿಳೆಯೊಬ್ಬಳನ್ನು ಮಾಂಸದ ಊಟಕ್ಕೆಂದು ಕಾರಿನಲ್ಲಿ ಕರೆದು ಕೊಂಡು ಹೋಗಿ ಕೊಲೆ ಮಾಡಿದ್ದ ಇಬ್ಬರಿಗೆ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದಂಡ ಹಾಗೂ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ದೊಡ್ಡೇರಿ ಹೋಬಳಿಯ ಬಡವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೊ.ನಂ. 60/2019, ಎಸ್.ಸಿ. ಸಂ: 5037/2019 ರಲ್ಲಿ
ಕೊರಟಗೆರೆ ತಾಲೂಕಿನ ಮುಗ್ಗೊಂಡನಹಳ್ಳಿ ಗ್ರಾಮದ ವಾಸಿ ಆರೋಪಿ-01 ಶಿವಕುಮಾರ್ @ ಶಿವ @ ಗೆಣಸು ಬಿನ್ ನಂಜಪ್ಪ(42) ಮತ್ತು ಮಧುಗಿರಿ ತಾಲೂಕಿನ ಬಿಜವಾರ ಗ್ರಾಮದ ಆರೋಪಿ-02 ಮಂಜುನಾಥ @ ಮಂಜ @ ಮೆಂಟಲ್ ಮಂಜ, (44), ಇಬ್ಬರು ಸೇರಿ ಸಮಾನ ಉದ್ದೇಶದಿಂದ ಪೂರ್ವ ಸಿದ್ಧತೆ ಯೊಂದಿಗೆ 2019ರ ಜೂನ್.06 ರಂದು ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಗಿರಿಜಮ್ಮ ಕೊಂ. ಲೇ. ಮೂಡಲಗಿರಿಯಪ್ಪ ಎನ್ನುವ ಮಹಿಳೆಯನ್ನು ಕೊಲೆಗೈದಿದ್ದರು.
ಮೃತೆಯ ಬಳಿಯಿದ್ದ ಬಂಗಾರದ ವಡವೆಗಳ ಆಸೆಗಾಗಿ 01 ಆರೋಪಿ ಗಿರಿಜಮ್ಮ ರವರನ್ನು ಕೊಲೆ ಮಾಡಿದ್ದರು ಮೃತೆ ಗಿರಿಜಮ್ಮಳನ್ನು ಮಧ್ಯಾಹ್ನ 12-30 ಗಂಟೆಯಲ್ಲಿ ತುಂಬಾಡಿಯಿಂದ ಕೆ.ಎ-06-ಡಿ-3279 ಟಾಟಾ ಇಂಡಿಕಾ ವಿಸ್ತಾ ಕಾರಿನಲ್ಲಿ ಗರಣಿ ಹೊಸಕೋಟೆಗೆ ಮಟನ್ ಊಟಕ್ಕೆ ಹೋಗಿ ಬರೋಣ ಎಂತಾ ಹೇಳಿ ಕರೆದುಕೊಂಡು ಬಂದು ಅದೇ ದಿನ ಸಂಜೆ 06-30 ಗಂಟೆಗೆ ಘನ ನ್ಯಾಯಾಲಯದ ವ್ಯಾಪ್ತಿಯ ಬಡವನಹಳ್ಳಿ ಠಾಣಾ ಸರಹದ್ದು ಮಾಯಗೊಂಡನಹಳ್ಳಿ ಕ್ರಾಸ್ ಹತ್ತಿರದ ರಸ್ತೆ ಬದಿಯ ಕೆಂಪಚೆನ್ನೇನಹಳ್ಳಿ ಸರ್ವೆ ನಂ:8/1ರ ಪಾಳು ಜಮೀನಿಗೆ ಕರೆದುಕೊಂಡು ಬಂದು ಹೊಂಗೆ ಗಿಡದ ಮರೆಯಲ್ಲಿ ಕಾರು ನಿಲ್ಲಿಸಿ ಕಾರಿನಲ್ಲಿಯೇ ಆರೋಪಿ ಶಿವಕುಮಾರ್ ಹಾಗೂ ಮಂಜುನಾಥ್ ಮಹಿಳೆಯ ಕುತ್ತಿಗೆಗೆ ಹಗ್ಗವನ್ನು ಬಿಗಿದ್ದಿದ್ದು ಗಿರಿಜಮ್ಮಳ ಎದೆಗೆ ಕಾಲಿನಿಂದ ಒದ್ದು ಕೈಯಿಂದ ಗುದ್ದಿ ಇಬ್ಬರೂ ಸೇರಿ ಕೊಲೆ ಮಾಡಿ ನಂತರ ಆಕೆಯ ಬಳಿಯಿದ್ದ ಸುಮಾರು 1,83,500 ರೂ ಬೆಲೆ ಬಾಳುವ ಬಂಗಾರದ ವಡವೆಗಳನ್ನು 01 ನೇ ಆರೋಪಿ ತೆಗೆದುಕೊಂಡು ಅದೇ ಕಾರಿನಲ್ಲಿ ಮೃತ ದೇಹದೊಂದಿಗೆ ರಂಟವಾಳಕ್ಕೆ ಗ್ರಾಮಕ್ಕೆ ಬಂದು ಸಾಕ್ಷಿದಾರ ಹೇಮಂತ ಎನ್ನುವವರ ಅಂಗಡಿಯಲ್ಲಿ 2ನೇ ಆರೋಪಿ ಡಿಸೇಲ್ ತೆಗೆದುಕೊಂಡು ಸಂಜೆ 07-00 ಗಂಟೆ ಸಮಯದಲ್ಲಿ ಆಂಧ್ರ ಗಡಿಭಾಗದ ರಸ್ತೆ ಬದಿಯಲ್ಲಿದ್ದ ಮತ್ತೊಬ್ಬ ಸಾಕ್ಷಿ ಯಾದ
ಪುಲಮಘಟ್ಟದ ನಾರಾಯಣಪ್ಪ ರವರ ಜಮೀನಿನಲ್ಲಿ ಕೊಲೆ ಕೃತ್ಯದ ಸಾಕ್ಷ್ಯವನ್ನು ನಾಶ ಮಾಡುವ ಉದ್ದೇಶದಿಂದ ಮೃತ ದೇಹಕ್ಕೆ ಡೀಸೆಲ್ ಹಾಕಿ ಸುಟ್ಟು ಹಾಕಿ ಮೊಬೈಲ್ ಮತ್ತು ಸಿಮ್ ಯಾರಿಗೂ ಸಿಗದಂತೆ ಎಲ್ಲೋ ಎಸೆದು ಸಾಕ್ಷ್ಯ ನಾಶ ಪಡಿಸಿದ್ದರು.
ಮೃತಳ ಮೈಮೇಲಿನ ಒಡವೆಗಳನ್ನು ಕೊರಟಗೆರೆಯ ಮುತ್ತೂಟ್ ಪೈನಾನ್ಸ್‌ನಲ್ಲಿ ನೆಕ್ಲೆಸ್ ಮತ್ತು ಉಂಗುರ ಅಡವಿಟ್ಟು ಸಾಲ ಪಡೆದು ಇನ್ನುಳಿದ ಒಡವೆಗಳನ್ನು ತೋವಿನಕೆರೆಯ ಭಾಗ್ಯಲಕ್ಷ್ಮೀ ಜ್ಯೂವೆಲರ್ಸ್ ಗೆ ಹೊಸದಾಗಿ ಸರ ತಾಳಿ ಓಲೆ ಮಾಡಿಕೊಡುವಂತೆ ಕೊಟ್ಟುಬಂದಿದ್ದರೆಂದು ತನಿಖೆಯಿಂದ ದೃಢಪಟ್ಟ ಮೇರೆಗೆ ಆರೋಪಿತರ ವಿರುದ್ಧ ಭಾ.ದಂ.ಸಂ ಕಲಂ 302, 201, 404ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿಯಾದ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಭಾಕರ್. ಕೆ ರವರು ದೋಷಾರೋಪಣ ಪಟ್ಟಿ ಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಪ್ರಕರಣದ ವಿಚಾರಣೆ ನಡೆಸಿದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಯಾದವ ಕರಕೇರ ರವರು
ಮಾ.24 ರಂದು ಇಬ್ಬರೂ ಆರೋಪಿತರಿಗೆ ಭಾರತೀಯ ದಂಡ ಸಂಹಿತೆಯ ಕಲಂ: 302, 201, 404 ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ತಲಾ 60,000 ರೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ ಸರ್ಕಾರಿ ಅಭಿಯೋಜಕರಾದ ಬಿ.ಎಂ. ನಿರಂಜನಮೂರ್ತಿ ವಾದ ಮಂಡಿಸಿದ್ದರು.
