ದಾವಣಗೆರೆ:
ಮಾನಸಿಕ ಸ್ಥಿಮಿತ ಕಾಪಾಡಿಕೊಂಡು, ಮನಸ್ಸನ್ನು ನಿಯಂತ್ರಣದಲ್ಲಿಡಲು ಧ್ಯಾನ, ಮಹಾತ್ಮರ ಕಥೆ, ಯೋಗ, ಭಜನೆಯ ಮೊರೆ ಹೊಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಕೆಂಗಬಾಲಯ್ಯ ಸಲಹೆ ನೀಡಿದರು.
ನಗರದ ಬಾಪೂಜಿ ಪಾಲಿಟೆಕ್ನಿಕ್ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ಮಾನಸಿಕ ರೋಗ ವಿಭಾಗ ಹಾಗೂ ಮಾನಸಿಕ ಆರೋಗ್ಯ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ “ಯುವಜನತೆ ಮತ್ತು ಬದಲಾಗುತ್ತಿರುವ ಜಗತ್ತಿನಲ್ಲಿ ಮಾನಸಿಕ ಆರೋಗ್ಯ” ಎಂಬ ಘೋಷವಾಕ್ಯದಡಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಒತ್ತಡದ ಜೀವನದಲ್ಲಿ ಮನುಷ್ಯ ಧ್ಯಾನ, ಯೋಗ, ಭಜನೆಯ ಮೊರೆ ಹೋದರೆ, ಮನಸ್ಸನ್ನು ಸಂತೋಷದಿಂದ ಇಟ್ಟುಕೊಂಡು, ನಿಯಂತ್ರಂಣದಲ್ಲಿಟ್ಟುಕೊಳ್ಳಲು ಸಹಕಾರಿಯಾಗಿದೆ. ಅಲ್ಲದೆ, ಇವುಗಳ ಜೊತೆ, ಜೊತೆಗೆ ಸಕರಾತ್ಮಕ ಚಿಂತನೆಯಲ್ಲಿ ತೊಡಗುವುದು ಸಹ ಅತ್ಯವಶ್ಯವಾಗಿದೆ ಎಂದರು.
ಪ್ರಸ್ತುತ ಪ್ರತಿಯೊಬ್ಬರೂ ದೈಹಿಕ ಆರೋಗ್ಯಕ್ಕೆ ಆದ್ಯತೆ ನೀಡಿ, ಮಾನಸಿಕ ಆರೋಗ್ಯದ ಬಗ್ಗೆ ಬಹುತೇಕರು ಕಾಳಜಿ ವಹಿಸುತ್ತಿಲ್ಲ. ಇದರಿಂದ ಮನಸ್ಸು ಆತ್ಮಸ್ಥೈರ್ಯ, ಧೈರ್ಯ ಮತ್ತು ಸ್ಥಿಮಿತತೆ ಕಳೆದುಕೊಂಡು ಆತ್ಮಹತ್ಯೆಯಂಥಹ ದಾರಿ ಹಿಡಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಆರೋಗ್ಯ ಎಂದರೆ, ಶೇ.90 ರಷ್ಟು ಜನರು ದೈಹಿಕ ಆರೋಗ್ಯ ಎಂಬುದಾಗಿ ಭಾವಿಸಿ ಯೋಗ, ಜೀಮ್ ಮೂಲಕ ದೇಹ ಬಲಿಷ್ಠಗೊಳಿಸಿಕೊಳ್ಳುತ್ತಿದ್ದಾರೆ. ಆದರೆ, ಮನುಷ್ಯ ಆರೋಗ್ಯವಂತವಾಗಿರಲು ಮಾನಸಿಕ ಆರೋಗ್ಯವೂ ಕಾರಣ ಎಂಬುದನ್ನು ಅರಿತು ಮಾನಸಿಕ ಆರೋಗ್ಯದ ಕಡೆಗೂ ಹೆಚ್ಚಿನ ಒತ್ತು ನೀಡಬೇಕೆಂದು ಕಿವಿಮಾತು ಹೇಳಿದರು.
ಮನಸ್ಸು ಹತೋಟಿಯಲ್ಲಿ ಇಟ್ಟುಕೊಂಡು ನಾವು ಇದ್ದಲ್ಲಿಯೇ ಇರುವಂತೆ ಮಾಡಬೇಕು. ಮಾನಸಿಕ ಅನಾರೋಗ್ಯವು ಹುಟ್ಟಿನಿಂದ, ದುರ್ಘಟನೆ, ಅಪಘಾತದಲ್ಲಿ ಮೆದುಳಿಗೆ ಹೊಡೆತ ಬೀಳುವುದು, ಅತಿಯಾದ ಪ್ರೀತಿ, ಕೋಪ, ದುಃಖಗಳಿಂದಲೂ ಬರುತ್ತದೆ. ಆದರೆ, ಮಾನಸಿಕ ಆರೋಗ್ಯಕ್ಕೆ ಔಷಧವಿದ್ದು, ಅದನ್ನು ಕ್ರಮಬದ್ಧವಾಗಿ ಸ್ವೀಕರಿಸಿ ಆರೋಗ್ಯದ ಕಡೆಗೆ ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.
ಬಾಪೂಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ವೀರೇಶ್ ಮಾತನಾಡಿ, ಒತ್ತಡದಿಂದ ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡ ಸಂದರ್ಭದಲ್ಲಿ ಏನು ಮಾಡಬೇಕೆಂಬುದು ಗೊತ್ತಾಗುವುದಿಲ್ಲ. ಹೀಗಾಗಿ ಕೆಲವರು ಹುಚ್ಚರಾದರೆ, ಇನ್ನೂ ಕೆಲವರು ಆತ್ಮಹತ್ಯೆಯತ್ತ ಮುಖ ಮಾಡುತ್ತಿದ್ದಾರೆ. ಎಲ್ಲರಿಗೂ ಒತ್ತಡಗಳಿವೆ ಆದರೆ, ಅದನ್ನು ಸರಿಯಾದ ರೀತಿಯಲ್ಲಿ ನಿಭಾಯಿಸುವ ಜಾಣ್ಮೆಯನ್ನು ಇರಬೇಕು. ಈ ಒತ್ತಡಕ್ಕೆ ಕಾರಣ ಏನು ಎಂಬುದರ ಬಗ್ಗೆ ಸಂಶೋಧನೆ ನಡೆಸಬೇಕಾಗಿದೆ ಎಂದರು.
ಜೆಜೆಎಂ ಕಾಲೇಜಿನ ಮಾನಸಿಕ ರೋಗ ವಿಭಾಗದ ಮುಖ್ಯಸ್ಥ ಡಾ.ಸಿ.ವೈ.ಸುದರ್ಶನ ಮಾತನಾಡಿ, ವೈಜ್ಞಾನಿಕವಾಗಿ ಮನಸ್ಸು ಮೆದುಳಿನಲ್ಲಿಯೇ ಇದೆ.
ಮನಸ್ಸಿನ ಕೆಲಸ ಗ್ರಹಿಕೆ, ಯೋಚನೆ, ಭಾವನೆ, ಜ್ಞಾಪಕ, ವರ್ತನೆಗಳನ್ನು ಒಳಗೊಂಡು ಸಮಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸುತ್ತದೆ. ಇವುಗಳು ಅತೀಯಾದರೆ ಮಾನಸಿಕ ಅಸಮತೋಲಕ್ಕೆ ಕಾರಣವಾಗುತ್ತದೆ. ಆದಷ್ಟು ಎಲ್ಲರೂ ಚಿಂತೆಯನ್ನು ಚಿಂತನೆಗೆ ವರ್ಗಾವಣೆ ಮಾಡಬೇಕು ಎಂದರು.ಕಾರ್ಯಕ್ರಮದಲ್ಲಿ ಸೂರ್ಯ ಪ್ರಭು, ರಾಮಮೂರ್ತಿ, ಶಕುಂತಲಾ, ವಿನಾಯಕ ಕುಮಾರ್ ಕುಂದಾಪುರ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
