ದಾವಣಗೆರೆ:
ಜಿಲ್ಲಾ ಪಂಚಾಯತ್‍ನ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್.ಅಶ್ವತಿ ಹಾಗೂ ಉಪ ಕಾರ್ಯದಶಿ ಅವರ ಮೇಲೆ ಜಿಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ ಮಾಡಿರುವ ಬಹುಕೋಟಿ ಅವ್ಯವಹಾರದ ಆರೋಪದ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಶೋಷಿತ ಹಿಂದುಳಿದ ಚಿಕ್ಕಪುಟ್ಟ ಸಮುದಾಯಗಳ ಒಕ್ಕೂಟದ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಶ್ರೀಬೀರಲಿಂಗೇಶ್ವರ ದೇವಸ್ಥಾನ ಆವರಣದಿಂದ ಶನಿವಾರ ಬೈಕ್ ರ್ಯಾಲಿಯ ಮೂಲಕ ಹೊರಟ ಪ್ರತಿಭಟನಾಕಾರರು, ಡಿಸಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತ ಪೆÇಲೀಸ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಒಕ್ಕೂಟದ ಮುಖಂಡ ಬಾಡದ ಆನಂದರಾಜ, ಜಿಲ್ಲಾ ಪಂಚಾಯತ್‍ನ ಸಿಇಓ ಎಸ್.ಅಶ್ವತಿ ಹಾಗೂ ಉಪ ಕಾರ್ಯದರ್ಶಿ ಜಿ.ಎಸ್.ಷಡಾಕ್ಷರಪ್ಪ ಅವರುಗಳ ವಿರುದ್ಧ ಜಿ.ಪಂ. ಅಧ್ಯಕ್ಷೆ ಕೆ.ಆರ್.ಜಯಶೀಲಾ ಮಾಡಿರುವ ಬಹುಕೋಟಿ ಅವ್ಯವಹಾರದ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವ ಮೂಲಕ ಸತ್ಯಾಸತ್ಯತೆಯನ್ನು ಬಹಿರಂಗ ಪಡಿಸಬೇಕೆಂದು ಆಗ್ರಹಿಸಿದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜನ ಪ್ರತಿನಿಧಿಗಳೇ ಪ್ರಭುಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳೊಂದಿಗೆ ಗೌರವ, ಘನತೆಯಿಂದ ನಡೆದುಕೊಳ್ಳಬೇಕಾಗಿದೆ. ಸ್ವತಃ ಜಿಲ್ಲಾ ಪಂಚಾಯತ್ ಅಧ್ಯಕ್ಷರೇ ಅಧಿಕಾರಿಗಳ ಮೇಲೆ ನೇರ ಆರೋಪ ಮಾಡಿರುವುದನ್ನು ನೋಡಿದರೆ, ಹಗರಣ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ. ಆದ್ದರಿಂದ ಗ್ರಾಮ ಪಂಚಾಯತ್‍ನಂತಹ ತಳ ಮಟ್ಟದಿಂದ ಮೇಲ್ಮಟ್ಟದ ವರೆಗೂ ನಡೆದಿರುವ ಹಗರಣದ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಕೆಲ ಭ್ರಷ್ಟ ಗುತ್ತಿಗೆದಾರರು ಮತ್ತವರ ಚೇಲಾಗಳು ಜಿ.ಪಂ. ಅಧ್ಯಕ್ಷರಿಗೆ ಕೇಸ್ ವಾಪಾಸ್ಸು ಪಡೆಯುವಂತೆ ಒತ್ತಡ ಹೇರುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಜಿಪಂ ಅಧ್ಯಕ್ಷರ ಆರೋಪದ ಬಗ್ಗೆ ಉನ್ನತ ಮಟ್ಟದ ಸಮಿತಿಯಿಂದ ತನಿಖೆ ನಡೆಸಬೇಕು. ಸಾಕ್ಷ್ಯ ನಾಶ ಮಾಡದಂತೆ ಜಿಪಂ ಸಿಇಓ, ಡಿಎಸ್ ಅವರನ್ನು ತಕ್ಷಣವೇ ಅಮಾನತುಪಡಿಸಬೇಕು. ಒಂದು ವೇಳೆ ಜಿಪಂ ಅಧ್ಯಕ್ಷರು ಸಿಇಓ, ಡಿಎಸ್ ವಿರುದ್ಧ ಸುಳ್ಳು ಆರೋಪ ಮಾಡಿರುವುದು ಸಾಬೀತದಾದರೆ, ಅಧ್ಯಕ್ಷರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಿ ಎಂದು ಸವಾಲು ಹಾಕಿದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಮುಖಂಡರಾದ ಪಿ.ರಾಜಕುಮಾರ, ಅಡಾಣಿ ಸಿದ್ದಪ್ಪ, ಸಿ.ವೀರಣ್ಣ, ಎಂ.ಮನು, ಒಕ್ಕೂಟದ ಕಾರ್ಯದರ್ಶಿ ಮಾಯಕೊಂಡ ಮಂಜುನಾಥ, ಉಪ್ಪಾರ ಯುವ ಘಟಕದ ಜಿಲ್ಲಾಧ್ಯಕ್ಷ ಲೋಕೇಶ, ಯಾದವ ಸಮಾಜದ ಮುರುಳಿ ಯಾದವ್, ಎನ್.ಮಂಜುನಾಥ, ಮಾಲಾ ಹನುಮಂತಪ್ಪ, ಸುರೇಶ ಕೋಗುಂಡಿ, ಹನುಮಂತರಾವ್ ಸುರ್ವೆ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
