ಜಿಲ್ಲೆಯ ನೂತನ ಶಾಸಕರಿಗೆ ಸನ್ಮಾನ

ಹಾವೇರಿ :

        ರಾಜ್ಯದಲ್ಲಿ 15 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಮಡಿವಾಳ ಸಮಾಜವು ಬಹುಪಾಲು ತಮ್ಮ ಕುಲ ಕಸುಬು ಮತ್ತು ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿದ್ದು, ಆರ್ಥಿಕವಾಗಿ ಬಹಳಷ್ಟು ಹಿಂದುಳಿದಿದೆ. ಈ ಸಮಾಜದಲ್ಲಿನ ಪಾಲಕರು/ಪೋಷಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮುಖ್ಯವಾಹಿನಿಗೆ ಬರಬೇಕಾದ ಅನಿವಾರ್ಯತೆ ಇದೆ ಎಂದು ಚಿತ್ರದುರ್ಗದ ಶ್ರೀ ಮಾಚಿದೇವ ಮಹಾ ಸಂಸ್ಥಾನಮಠದ ಬಸವ ಮಾಚಿದೇವ ಮಹಾಸ್ವಾಮಿಗಳು ಹೇಳಿದರು.

         ಸ್ಥಳೀಯ ಕೆ.ಇ.ಬಿ. ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಬೃಹತ್ ಸಮಾವೇಶ, ಹಾವೇರಿ ಜಿಲ್ಲೆಯ ನೂತನ ಶಾಸಕರುಗಳಿಗೆ ಸನ್ಮಾನ, ಜನೇವರಿ 5 ರಿಂದ ನಡೆಯುವ ಬೃಹತ್ ಜನಜಾಗೃತಿ ಸಮಾವೇಶದ ಪೂರ್ವಭಾವಿ ಸಭೆ ಹಾಗೂ ರಾಜ್ಯಾಧ್ಯಕ್ಷ ಸಿ. ನಂಜಪ್ಪನವರ 56ನೇ ಜನ್ಮ ದಿನಾಚರಣೆ ಪ್ರಯುಕ್ತ ಮಡಿವಾಳ ಕುಲಬಾಂದವರಿಗೆ ಇಸ್ತ್ರೀ ಪೆಟ್ಟಿಗೆ ವಿತರಣೆ, ವೃದ್ಧರಿಗೆ ಬ್ಲಾಕೇಟ್, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

        ಈ ಸಮಾಜಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಇಲ್ಲಿಯವರೆಗೆ ಯಾವುದೇ ರೀತಿಯ ಹೆಚ್ಚಿನ ಸಹಾಯ ಸಹಕಾರ ಸರಕಾರಗಳಿಂದ ದೊರೆಯದ ಕಾರಣ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಪ್ರಾತಿನಿಧ್ಯಗಳಿಲ್ಲದೇ ಹಕ್ಕುಗಳನ್ನು ಪಡೆಯವಲ್ಲಿ ವಂಚನೆಗೆ ಒಳಪಡುವಂತಾಗಿದೆ. ನಿರಂತರ ಹೋರಾಟ ಮಾಡಿದರೂ ಸಹ ಈ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ಸರಕಾರಗಳು ಮೀನಾಮೇಷ ಎಣಿಸುತ್ತಿವೆ ಎಂದರು.

       ಚಿತ್ರದುರ್ಗದಲ್ಲಿ ಜನೇವರಿ 5, 6ನೇ ದಿನಾಂಕಗಳಂದು ಬೃಹತ್ ಜಾಗೃತಿ ಮಹಾ ಸಮ್ಮೇಳನ ಹಾಗೂ ಪಟ್ಟಾಧಿಕಾರ ಮಹೋತ್ಸವ ಕಾರ್ಯಕ್ರಮವು ಜರುಗಲಿದೆ. 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಸಮಾಜ ಭಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಈ ಒಂದು ಮಹತ್ತರವಾದ ಮಹಾ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂದವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

       ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ ಸಿ. ನಂಜಪ್ಪನವರು ಮಾತನಾಡಿ ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಲು ಈ ಹಿಂದೆ ಅಧಿಕಾರದಲ್ಲಿದ್ದ ಅನೇಕ ಸರಕಾರಗಳು ಅಸಹಾಕ ನೀಡುವುದರ ಜೊತೆಗೆ ಸಮಾಜವನ್ನು ಕಡೆಗಣಿಸಿದವು. ಈಗಾಗಲೇ ದೇಶದ 17ರಾಜ್ಯಗಳಲ್ಲಿ ನಮ್ಮ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸಿದ್ದಾರೆ. ಶೀಘ್ರವೇ ಪರಿಶಿಷ್ಟ ಜಾತಿಗೆ ಸೇರ್ಪಡೆಗೊಳಿಸುವ ಶಿಫಾರಸ್ಸನ್ನು ಮಾಡದಿದ್ದರೆ ರಾಜ್ಯಾಧ್ಯಂತೆ ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದರು.

        ಮಡಿವಾಳ ಸಮಾಜದ ಏಳ್ಗೆಗಾಗಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು. ಮಡಿವಾಳ ಮಾಚಿದೇವ ಮೂಲಸ್ಥಾನ ದೇವರಹಿಪ್ಪರಗಿಯಲ್ಲಿನ ಮಾಚಿದೇವರ ದೇವಸ್ಥಾನವನ್ನು ಕೂಡಲ ಸಂಗಮದ ರೀತಿಯಲ್ಲಿ ಅಭಿವೃದ್ಧಿಪಡಿಸಬೇಕು. ಮಾಚಿದೇವರ ಸ್ಮಾರಕಗಳನ್ನು ಸರ್ಕಾರವು ಪ್ರಾಧ್ಯಾನ್ಯತೆ ಪಡೆದು ಶ್ರೀ ಮಡಿವಾಳ ಮಾಚಿದೇವರ ಸ್ಮಾರಕಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿದರು.

         ಇದೇ ಸಂದರ್ಭದಲ್ಲಿ ಶಾಸಕ ಸಿಎಂ. ಉದಾಸಿ ಸ್ಥಳೀಯ ಶಾಸಕ ನೆಹರು ಓಲೇಕಾರ, ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿಯವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಅತಿ ಕಡುಬಡವರಿಗೆ 64 ಇಸ್ತ್ರೀ ಪೆಟ್ಟಿಗೆ, ವಿದ್ಯಾರ್ಥಿಗಳಿಗೆ 800 ನೋಟ ಪುಸ್ತಕ ಹಾಗೂ ವೃದ್ಧರಿಗೆ 164 ಬ್ಲಾಂಕೇಟ್‍ಗಳನ್ನು ಉಚಿತವಾಗಿ ವಿತರಿಸಲಾಯಿತು. ಜೊತೆಗೆ ರಕ್ತದಾನ ಶಿಬಿರವನ್ನು ನಡೆಸಲಾಯಿತು.

         ರಾಜ್ಯ ಕಾರ್ಯದರ್ಶಿ ರಂಗಸ್ವಾಮಯ್ಯ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವಿಜಯಲಕ್ಷ್ಮೀ ಆಂಜನಪ್ಪ, ಕೆ.ವಿ ದೃವಕುಮಾರ, ಎಂ.ಚಿರಂಜೀವಿ, ಸೂಗೂರಪ್ಪ ಮೂಲಿಮನಿ, ರಾಜಣ್ಣ ಆರ್.ವ್ಹಿ, ಜಿ. ಸುಬ್ರಹ್ಮಣ್ಯ, ಹೆಚ್ ಮಲ್ಲಯ್ಯ, ವಿ. ಪುಟ್ಟರಾಜು, ಚಂದ್ರಣ್ಣ ಚಳಗೇರಿ, ಅಶೋಕ ಮಡಿವಾಳರ, ಪದ್ಮಾ ವರ್ತೂರ, ಜಯಶ್ರೀ ಸುರೇಶ, ಈರಣ್ಣ ದೊಡ್ಡಮನಿ, ಸುರೇಶ ಚಳಗೇರಿ, ದೇವರಾಜ ಮಡಿವಾಳರ, ಶಂಕರ ಮಾಕನೂರ ಮಾತನಾಡಿದರು.

         ಜಿಲ್ಲೆಯ ವಿವಿಧ ತಾಲೂಕುಗಳ/ನಗರ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಹಸ್ರಾರು ಸಮಾಜ ಬಾಂದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಜಿಲ್ಲಾಧ್ಯಕ್ಷ ಸುರೇಶ ಫಕ್ಕೀರಪ್ಪ ಮಡಿವಾಳರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸುರೇಶ ಹನುಮಂತಪ್ಪ ಮಡಿವಾಳರ ಸ್ವಾಗತಿಸಿದರು. ಅಶೋಕ ಗೊಲ್ಲರ ನಿರೂಪಿಸಿದರು. ನ್ಯಾಯವಾದಿ ಕುಮಾರ ಮಡಿವಾಳರ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link