ಪಾವಗಡ
ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ, ತುಂಗಭದ್ರಾ ಯೋಜನೆ ಮತ್ತು ಏತ್ತಿನ ಹೊಳೆ ಯೋಜನೆಯಡಿಯಲ್ಲಿ ಕುಡಿಯಲು ಮತ್ತು ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ತಿಳಿಸಿದರು.
ಮಂಗಳವಾರ ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘದಿಂದ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ಪಾವಗಡ ತಾಲ್ಲೂಕಿಗೆ 2352 ಕೋಟಿ ರೂ. ವೆಚ್ಚದ ತುಂಗಭದ್ರಾ ಕುಡಿಯುವ ನೀರಿನ ಯೋಜನೆಗೆ ಟೆಂಡರ್ ಕರೆಯಲಾಗಿದೆ. ಮುಂದಿನ ತಿಂಗಳು ಪಾವಗಡದಲ್ಲಿ ಕಾಮಗಾರಿಯ ಭೂಮಿ ಪೂಜೆ ನೇರವೇರಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಹಿರಿಯೂರಿನ ವಾಣಿವಿಲಾಸ ಸಾಗರಕ್ಕೆ ನೀರು ಹರಿಸಿ, ಅಲ್ಲಿಂದ ತಾಲ್ಲೂಕಿಗೆ ಪೈಪ್ ಲೈನ್ ಮೂಲಕ ಕುಡಿಯುವ ನೀರು ಹರಿಸಲಾಗುವುದು. ಭದ್ರಾಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಯಲ್ಲಿ ತಾಲ್ಲೂಕಿನ 30 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ತಿಳಿಸಿದರು.
ಕಾರ್ಮಿಕ ಇಲಾಖೆಯಲ್ಲಿ 700 ಕೋಟಿ ರೂ. ಹಣ ಇದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಹಣವನ್ನು ವಿನಿಯೋಗಿಸಲಾಗುವುದು. ಈಗಾಗಲೇ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಮಿಕರ ನೋಂದಣಿ ಕಾರ್ಯ ನಡೆಯುತ್ತಿದೆ. ಬೆಂಗಳೂರಿನ ಪೀಣ್ಯದ ಬಳಿ 40 ಕೋಟಿ ರೂ. ವೆಚ್ಚದಲ್ಲಿ ಕಾರ್ಮಿಕರಿಗಾಗಿ ವಸತಿ ಸಮುಚ್ಚಯವನ್ನು ನಿರ್ಮಾಣ ಮಾಡಲಾಗುವುದು. ತುಮಕೂರಿನಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ, 2 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸಲಾಗುವುದು. ವಕೀಲರ ಸಂಘದ ಮನವಿ ಮೇರೆಗೆ ವಕೀಲರ ಕಚೇರಿಯ ಗ್ರಂಥಾಲಯ ಮತ್ತು ಪೀಠೋಪರಣಗಳಿಗೆ 10 ಲಕ್ಷ ರೂ. ನೀಡುವುದಾಗಿ ತಿಳಿಸಿದರು.
ತಾ.ಪಂ. ಅಧ್ಯಕ್ಷ ಸೊಗಡುವೆಂಕಟೇಶ್ ಮಾತನಾಡಿ, ರಾಜಕಾರಣದಲ್ಲೂ ಮತ್ತು ಹೋರಾಟಗಳಲ್ಲಿ ವಕೀಲರು ಮೂಂಚೂಣಿಯಲ್ಲಿದ್ದು, ಪಾವಗಡ ತಾಲ್ಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು ಎಂದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಟಿ. ನರಸಿಂಹಪ್ಪ ಮಾತನಾಡಿ, ವಕೀಲರ ವಸತಿ ನಿರ್ಮಾಣಕ್ಕಾಗಿ ಪಟ್ಟಣದ ಸಮೀಪ ಭೂಮಿ ಮಂಜೂರು ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ಆರ್. ರಂಗನಾಥ್, ಹಿರಿಯ ವಕೀಲರಾದ ವೆಂಕಟರಾಮರೆಡ್ಡಿ, ವಾಸುದೇವಮೂರ್ತಿ ಕಡಪಲಕೆರೆ ರಾಮಾಂಜಿನಪ್ಪ ಮಾತನಾಡಿದರು.ತಹಸೀಲ್ದಾರ್ ವರದರಾಜು, ವಕೀಲರಾದ ಕೃಷ್ಣ, ಸತ್ಯಪ್ರಕಾಶ್, ರವೀಂದ್ರ ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
