ಪಾವಗಡ
ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಸೇರಿದ ಪೋತಲಿಂಗೇಶ್ವರ ದೇವಾಲಯದಲ್ಲಿನ ಹುಂಡಿಯಲ್ಲಿನ ಹಣವನ್ನು ಖಾಸಗಿ ವ್ಯಕ್ತಿಗಳು ಹಂಚಿಕೊಂಡ ಘಟನೆ ಮಂಗಳವಾರ ತಾಲ್ಲೂಕಿನ ಕಡಪಲಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮುಜರಾಯಿ ಇಲಾಖೆಯ ಪೋತಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿನ ಹುಂಡಿಯನ್ನು ಗ್ರಾಮದ ಪ್ರಭಾವಿ ವ್ಯಕ್ತಿಗಳು ದುರುಪಯೋಗ ಪಡಿಸಿಕೊಂಡ ಖಚಿತ ಮಾಹಿತಿಯನ್ನು ಪಡೆದ ಕಂದಾಯ ತನಿಖಾದಿಕಾರಿ ಬಸವರಾಜು ಮತ್ತು ಗ್ರಾಮ ಲೆಕ್ಕಿಗ ರಂಜಿತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಗ್ರಾಮದ ಜನತೆಯ ಸಮ್ಮುಖದಲ್ಲಿ ದೇವಾಲಯದ ಹುಂಡಿಯನ್ನು ಹೊಡೆದವರ ಬಗ್ಗೆ ಮಾಹಿತಿ ಕಲೆ ಹಾಕಿದರು.
ಘಟನೆಯ ಬಗ್ಗೆ ಕಂದಾಯ ತನಿಖಾದಿಕಾರಿ ಬಸವರಾಜು ಮಾತನಾಡಿ, ಇಲಾಖೆಗೆ ಒಳಪಟ್ಟಂತೆ ಸರ್ಕಾರದಿಂದ ಯಾವುದೇ ಹುಂಡಿಯನ್ನು ಇಲ್ಲಿ ಇಟ್ಟಿರುವುದಿಲ್ಲ. ಇಲ್ಲಿನ ಕೆಲವರು ಭಕ್ತರನ್ನು ದಿಕ್ಕುತಪ್ಪಿಸುವ ನಿಟ್ಟಿನಲ್ಲಿ ಹುಂಡಿ ಇಟ್ಟಿದ್ದಾರೆ. ಅದರಲ್ಲಿನ ಸುಮಾರು 40 ಸಾವಿರ ರೂ.ಹಣವನ್ನು ಪ್ರತಿದಿನ ಪೂಜಾಕಾರ್ಯಗಳನ್ನು ಮಾಡುವ ಪೂಜಾರಿಗೂ ಮಾಹಿತಿ ನೀಡದೆ ತೆಗೆದಿದ್ದಾರೆ. ಮುಜರಾಯಿ ಇಲಾಖೆಯ ವತಿಯಿಂದ ಈಗ ಹುಂಡಿಯನ್ನು ಅಳವಡಿಸಿ ದೇವಸ್ಥಾನವನ್ನು ಇಲಾಖೆಯ ಸುರ್ಪದಿಗೆ ಪಡೆಯಲಾಗಿದೆ. ಘಟನೆಯ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಗ್ರಾಮಸ್ಥರಾದ ರಂಗಪ್ಪ ಮಾತನಾಡಿ, ಈ ಘಟನೆಯ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಇಅಕ್ಕೆಲ್ಲ ಅಧಿಕಾರಿಗಳ ಬೇಜಾವಬ್ದಾರಿತನವೆ ಪ್ರಮುಖ ಕಾರಣವೆಂದು ಇಲಾಖಾಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ವಕೀಲ ನರಸಿಂಹರೆಡ್ಡಿ ಮಾತನಾಡಿ, ದೇವಾಲಯದಲ್ಲಿನ ಪುರಾತನ ಕಾಲದ ಆಭರಣಗಳು ಖಾಸಗಿ ವ್ಯಕ್ತಿಗಳ ಸುಪರ್ದಿನಲ್ಲಿವೆ. ಅವುಗಳನ್ನು ಕೂಡ ಇಲಾಖೆ ತಮ್ಮ ಅಧೀನಕ್ಕೆ ಪಡೆದು ಸಂರಕ್ಷಿಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಪೂಜಾರಿ ಪಾತಲಿಂಗಪ್ಪ, ನರಸಿಂಹಮೂರ್ತಿ, ಗೋಪಾಲ್, ಮುರಳಿಧರ, ಲಿಂಗಾರೆಡಿ,್ಡ ಪಾತಣ್ಣ, ನರಸಪ್ಪ, ಯಶ್ಪಾಲ್, ಮಂಜುನಾಥ, ಮಾರುತಿ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ