ತುಮಕೂರು : ರೈಲು ನಿಲ್ದಾಣದಲ್ಲಿ ಲಿಫ್ಟ್, ಆಸನಗಳ ಅಳವಡಿಕೆ

ತುಮಕೂರು

    ನಗರದ ರೈಲು ನಿಲ್ದಾಣದಲ್ಲಿ ಲಿಫ್ಟ್ ಅಳವಡಿಕೆಯಾಗಿದ್ದು, ಜುಲೈ 30 ರಂದು ನೈಋತ್ಯ ರೈಲ್ವೇ ವಲಯದ ಅಧಿಕಾರಿಗಳಿಂದ ಲಿಫ್ಟ್ ಔಪಚಾರಿಕವಾಗಿ ಉದ್ಘಾಟನೆಗೊಂಡಿದೆ. ನಿಲ್ದಾಣದ ಒಂದು, ಎರಡು ಮತ್ತು ಮೂರನೇ ಪ್ಲಾಟ್ ಫಾರಂಗಳಿಗೆ ಲಿಫ್ಟ್ ಅಳವಡಿಸಲಾಗಿದೆ.

   ಇದರಿಂದ ರೈಲು ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ. ಸುಮಾರು ಮೂರು ವರ್ಷಗಳ ಹಿಂದೆ ತುಮಕೂರು ರೈಲು ನಿಲ್ದಾಣ ಅಭಿವೃದ್ಧಿ ಹೊಂದಿದಾಗ ಕೇವಲ ಒಂದೇ ಪ್ರಯಾಣಿಕರ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಅಲ್ಲದೆ, ಇದಕ್ಕೆ ರ್ಯಾಂಪ್ ಅಳವಡಿಸಿರಲಿಲ್ಲ. ಇದರಿಂದ ವಯೋವೃದ್ಧರು, ಮಹಿಳೆಯರು, ಅಶಕ್ತರು, ಗರ್ಭಿಣಿಯರು ಹಾಗೂ ವಿಕಲ ಚೇತನರಿಗೆ ತೀವ್ರತೊಂದರೆಯಾಗಿತ್ತು.

    ಈ ಬಗ್ಗೆ ನೈಋತ್ಯರೈಲ್ವೇ ವಲಯದ ಪ್ರಯಾಣಿಕರ ಸಲಹಾ ಸಮಿತಿ ಸದಸ್ಯರಾದ ಕರಣಂರಮೇಶ್ ಮತ್ತು ರಘೋತ್ತಮರಾವ್ ಅವರು ಸಭೆಯಲ್ಲಿ ಪ್ರಸ್ತಾಪಿಸಿ, ರ್ಯಾಂಪ್ ನಿರ್ಮಿಸಲು ಸಾಧ್ಯವಿಲ್ಲದ ಕಾರಣ ಲಿಫ್ಟ್ ಅಳವಡಿಸಬೇಕೆಂದು ಮನವಿ ಮಾಡಿದ್ದರು. ಅಲ್ಲದೆ, ಆಗಿನ ಸಂಸದರಾಗಿದ್ದ ಎಸ್.ಪಿ.ಮುದ್ದಹನುಮೇಗೌಡ ಹಾಗೂ ಹಾಲಿ ಸಂಸದರಾದ ಜಿ.ಎಸ್. ಬಸವರಾಜು ಅವರಲ್ಲಿ ಮನವಿ ಮಾಡಿ ಲಿಫ್ಟ್ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು.

   ಎಲ್ಲರ ಪ್ರಯತ್ನಗಳ ಫಲವಾಗಿ ಸುಮಾರು ಕಳೆದ ವರ್ಷ ಲಿಫ್ಟ್ ಅಳವಡಿಕೆ ಕಾರ್ಯ ಆರಂಭಗೊಂಡು ಜುಲೈ ತಿಂಗಳಲ್ಲಿ ಪೂರ್ಣಗೊಂಡಿದ್ದು ಜುಲೈ 30 ರಂದು ಔಪಚಾರಿಕವಾಗಿ ಉದ್ಘಾಟನೆಗೊಂಡಿದೆ.ಇದರಿಂದ ಅಸಹಾಯಕ ಪ್ರಯಾಣಿಕರಿಗೆ ಪ್ಲಾಟ್‍ಫಾರಂಗಳಿಗೆ ತೆರಳಲು ತುಂಬಾ ಅನುಕೂಲವಾಗಲಿದೆ. ಎಂದು ಕರಣಂ ರಮೇಶ್ ಹೇಳಿದ್ದಾರೆ.

ಬೆಂಚುಗಳ ಅಳವಡಿಕೆ

    ತುಮಕೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಾಕಷ್ಟು ಆಸನಗಳ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಕುಳಿತುಕೊಳ್ಳಲು ಆಸನಗಳನ್ನು ಅಳವಡಿಸುವ ಕಾರ್ಯಅಧಿಕೃತವಾಗಿ ಆರಂಭಗೊಂಡಿದೆ. ಇದರ ಅಂಗವಾಗಿ ಸ್ಟೇನ್‍ಲೆಸ್ ಸ್ಟೀಲ್‍ನ ಎರಡು ಬಗೆಯ ಮೂರು ಆಸನಗಳ 35 ಬೆಂಚುಗಳು ಬಂದಿವೆ. ಇನ್ನೂ 50 ಬೆಂಚುಗಳು ಬಂದು ಸೇರಲಿವೆ ಎಂದು ರೈಲ್ವೇ ವಾಣಿಜ್ಯ ಅಧಿಕಾರಿಗಳು ತಿಳಿಸಿದ್ದಾರೆ.

    ತುಮಕೂರು ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳಲು ಅನುಕೂಲವಾಗುವಂತೆ ಆಸನಗಳನ್ನು ಅಳವಡಿಸಲು ವೇದಿಕೆ ವತಿಯಿಂದ ರೈಲ್ವೇಇಲಾಖೆಯ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿತ್ತು. ಅಲ್ಲದೆ ಮಾಜಿ ಹಾಗೂ ಹಾಲಿ ಸಂಸದರಲ್ಲೂ ಮನವಿ ಮಾಡಲಾಗಿತ್ತು. ಎಲ್ಲರ ಸಕಾರಾತ್ಮಕ ಸ್ಪಂದನೆಯಿಂದ ಆಸನಗಳ ಅಳವಡಿಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link