ಹಗರಿಬೊಮ್ಮನಹಳ್ಳಿ:
ತಾಲೂಕಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲು ಮತ್ತೊಮ್ಮೆ ಪೂರ್ವಭಾವಿ ಸಭೆ ಕರೆಯುವಂತೆ ರಾಷ್ಟ್ರೀಯ ಹಬ್ಬಗಳ ತಾಲೂಕು ಸಮಿತಿ ಅಧಿಕಾರಿಗಳಿಗೆ ಮಹರ್ಷಿ ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ದೇವೇಂದ್ರ ತಾಕೀತು ಮಾಡಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಬುಧವಾರ ರಾಷ್ಟ್ರೀಯ ಹಬ್ಬಗಳ ತಾಲೂಕು ಸಮಿತಿ ಕರೆಯಲಾಗಿದ್ದ, ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳನ್ನು ಕೇಳಿಕೊಂಡರು. ತಹಸೀಲ್ದಾರ್ ವಿಜಯಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತಿದ್ದಂತೆ, ಅಧ್ಯಕ್ಷ ದೇವೇಂದ್ರ ಮಾತನಾಡಿ, ಸಭೆಗೆ ಇತರೆ ಸಮುದಾಯಗಳ ಪದಾಧಿಕಾರಿಗಳು ಮತ್ತು ಪತ್ರಕರ್ತರು ಬಂದಿಲ್ಲ. ನೀವು ಸರಿಯಾದ ಮಾಹಿತಿ ನೀಡಿಲ್ಲವೆಂದು ಆರೋಪಿಸಿದರು. ಆದರೆ, ಸಮರ್ಥನೆಮಾಡಿಕೊಂಡ ತಹಸೀಲ್ದಾರ್ ಎಲ್ಲರಿಗೂ ಅಧಿಕೃತವಾಗಿ ಸಭೆಯ ಸೂಚನಪತ್ರ ಕಳಿಸಿಕೊಡಲಾಗಿದೆ ಎಂದರು.
ಮುಂದುವರೆದು ಮಾತನಾಡಿದ ದೇವೇಂದ್ರ, ತಾಲೂಕು ಆಡಳಿತದಿಂದ ನೀವು ಸರಳವಾಗಿ ಜಯಂತಿಯನ್ನು ಆಚರಿಸಿ. ಆದರೆ, ಇಂದು ನಡೆಯುತ್ತಿರುವ ಸಭೆಯಲ್ಲಿ ವಾಲ್ಮೀಕಿ ಮಹಾಸಭಾದ ಪದಾಧಿಕಾರಿಗಳು ಮಾತ್ರ ಇದ್ದಾರೆ. ಅದರಲ್ಲೂ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಯ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದ್ದರಿಂದ ನಮ್ಮ ಸಮುದಾಯದ ಪೀಠಾಧೀಶ್ವರರ ನೇತೃತ್ವದಲ್ಲಿ ಜರುಗಿದ ಸಮುದಾಯದ ಪೂರ್ವಭಾವಿ ಸಭೆಯ ತೀರ್ಮಾನದಂತೆ ಜಯಂತಿಯನ್ನು ನವ್ಹಂಬರ್ 14ರಂದು ತಾಲೂಕು ಕೇಂದ್ರದಲ್ಲಿ ಎಲ್ಲಾ ಸಮುದಾಯಗಳ ಸಹ ಭಾಗಿತ್ವದಲ್ಲಿ ಅದ್ದೂರಿಯಾಗಿ ಆಚರಣೆಮಾಡಲಾಗುವುದು. ಕಾರಣ ಎಲ್ಲಾ ಸಮುದಾಯದವರು ಆಗಮಿಸುವಂತೆ ಮತ್ತೊಮ್ಮೆ ನೀವು ಪೂರ್ವಭಾವಿ ಸಭೆ ಕರೆಯಬೇಕು ಎಂದರು.
ಧ್ವನಿಗೂಡಿಸಿದ ನಿಕಟಪೂರ್ವ ಅಧ್ಯಕ್ಷ ಡಿಶ್ ಮಂಜುನಾಥ, ಕಚೇರಿಯಿಂದ ಕೆಲವೂಬ್ಬರಿಗೆ ಸೂಚನಪತ್ರಗಳು ತಲುಪಿಲ್ಲ. ಅಲ್ಲದೆ, ಕಾರ್ಯಕ್ರಮ ತೀರ್ಮಾನದಂತೆ ನ.14ರಂದು ನಡೆಯಲಿದ್ದು, ಅಂದು ಮಕ್ಕಳ ದಿನಾಚರಣೆ ಕೂಡ ಇರುವುದರಿಂದ ತಾವು ಇನ್ನೊಂದುಬಾರಿ ಪೂರ್ವಭಾವಿ ಸಭೆ ನಡೆಸಬೇಕು. ಚುನಾವಣೆ ನೀತಿ ಸಂಹಿತೆಯ ನಂತರ ನ.9 ಅಥವಾ 10ರಂದು ಪೂರ್ವಭಾವಿ ಸಭೆ ಕರೆಯುವಂತೆ ತಿಳಿಸಿದರು.
ಇದರಿಂದ ರಾಷ್ಟ್ರೀಯ ಹಬ್ಬಗಳ ತಾಲೂಕು ಸಮಿತಿ ಅಧಿಕಾರಿಗಳು ಕರೆಯಲಾಗಿದ್ದ ಪೂರ್ವಭಾವಿ ಸಭೆ ಮೊಟಕುಗೊಂಡಿತು.
ಈ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷ ಕನ್ನಿಹಳ್ಳಿ ಚಂದ್ರಶೇಖರ್, ಕಾರ್ಯದರ್ಶಿ ದಶಮಾಪುರ ಮಂಜುನಾಥ, ಬೆಣಕಲ್ಲು ಹನುಮಂತಪ್ಪ, ಹಂಪಾಪಟ್ಟಣ ಮಹೇಂದ್ರ, ಸೆರೆಗಾರ್ ಹುಚ್ಚಪ್ಪ, ವಟಮ್ಮನಹಳ್ಳಿಯ ಉದಯ, ತಾ.ಪಂ. ಪ್ರಭಾರಿ ಇಒ ವಿಶ್ವನಾಥ, ಬಿಇಓ ಶೇಖರಪ್ಪ ಎಂ.ಹೊರಪೇಟೆ, ಕ್ಷೇತ್ರಸಮನ್ವಯಾಧಿಕಾರಿ ಬೋರಯ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವೀರಾಚಾರಿ, ಪುರಸಭೆಯ ಮುಖ್ಯಾಧಿಕಾರಿ ಪ್ರಕಾಶ್ ಚನ್ನಪ್ಪನವರ್, ಟೈಪಿಸ್ಟ್ ಗುರುಬಸವರಾಜ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
