ಕೆಂಡ ಹಾಯುವ ವೇಳೆ ಆಯ ತಪ್ಪಿ ವ್ಯಕ್ತಿಗಳಿಬ್ಬರಿಗೆ ಗಾಯ

ಹೊನ್ನಾಳಿ:

     ದೇವಿಯ ಕೆಂಡ ಹಾಯುವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ಇಬ್ಬರಿಗೆ ಗಂಭೀರ ಗಾಯಗಳಾಗಿರುವ ದುರ್ಘಟನೆ ತಾಲೂಕಿನ ಮಲೆ ಕುಂಬಳೂರು ಗ್ರಾಮದಲ್ಲಿ ಶನಿವಾರ ಸಂಜೆ ಸಂಭವಿಸಿದೆ. ಶ್ರೀ ಚಿಕ್ಕುಡದಮ್ಮ ದೇವಿ ಕೆಂಡ ಹಾಯುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಚಿಕ್ಕುಡದಮ್ಮ ದೇವಿಯ ಉತ್ಸವ ಮೂರ್ತಿಯ ಪಲ್ಲಕ್ಕಿ ಹೊತ್ತಿದ್ದ ಮಲೆ ಕುಂಬಳೂರು ಗ್ರಾಮದ ವಾಲ್ಮೀಕಿ ಸಮಾಜದ ವೆಂಕಟೇಶಪ್ಪ(40) ಮತ್ತು ಪರಶುರಾಮ್(35) ಗಾಯಗೊಂಡವರು.

     ಕೆಂಡ ಹಾಯುವ ಸಂದರ್ಭದಲ್ಲಿ ಅಗ್ನಿ ಕುಂಡಕ್ಕೆ ಬಿದ್ದು ಗಾಯಗೊಂಡವರನ್ನು ತಕ್ಷಣ ಆಂಬುಲೆನ್ಸ್‍ನಲ್ಲಿ ದಾವಣಗೆರೆ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಾಳುಗಳಿಗೆ ಬರ್ನಿಂಗ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಭಾನುವಾರ ಸಂಜೆಯ ಮಾಹಿತಿ ಆಧರಿಸಿ ಚಿಗಟೇರಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.

     ಕಾಲಿಗೆ ಕಾಲು ತಾಕಿ ಘಟನೆ: ಕೆಂಡದಲ್ಲಿ ಹಾದು ಹೋಗುವ ಅವಸರದಲ್ಲಿ ಭಕ್ತರು ಇದ್ದಾಗ ಈ ದುರ್ಘಟನೆ ಸಂಭವಿಸಿದೆ. ಒಂದೇ ಸಮನೆ ದೇವರನ್ನು ಹೊತ್ತು ಕೆಂಡದಲ್ಲಿ ಇಳಿಯುವ ವೇಳೆ ಒಬ್ಬರ ಕಾಲಿಗೆ ಮತ್ತೊಬ್ಬರ ಕಾಲು ತಾಕಿ ಕೆಳಗೆ ಬಿದ್ದಿದ್ದಾರೆ. ಅವಘಡ ಸಂಭವಿಸಿದ ತಕ್ಷಣ ಭಕ್ತರು ದಿಗ್ಭ್ರಾಂತರಾದರಾದರೂ, ದುರ್ಘಟನೆಯ ಬಳಿಕ ಮತ್ತೆ ಯಥಾ ರೀತಿ ಕೆಂಡ ಹಾಯುವ ಕಾರ್ಯಕ್ರಮ ಮುಂದುವರೆಯಿತು.

     ದಸರಾ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಪ್ರತಿ ವರ್ಷ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಕೆಂಡ ಹಾಯುವ ಸಂಪ್ರದಾಯವಿದೆ. ಇದರಲ್ಲಿ ಶ್ರೀ ಆಂಜನೇಯ ಸ್ವಾಮಿ, ಶ್ರೀ ಬೀರಲಿಂಗೇಶ್ವರ ದೇವರು, ಶ್ರೀ ಚಿಕ್ಕುಡದಮ್ಮ ದೇವಿ, ಶ್ರೀ ಮಾರಿಕಾಂಬಾ ದೇವಿ, ಶ್ರೀ ಕರಿಯಮ್ಮ ದೇವಿ ಉತ್ಸವ ಮೂರ್ತಿಗಳು ಪಾಲ್ಗೊಳ್ಳುತ್ತವೆ. ಈ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಸ್ಥರು ಅಗ್ನಿ ಕುಂಡ ನಿರ್ಮಿಸಿ ಕೆಂಡ ಹಾಯಲು ವ್ಯವಸ್ಥೆ ಮಾಡಿದ್ದರು. ಯಾವ ವರ್ಷವೂ ಈ ರೀತಿಯ ಅವಘಡ ಸಂಭವಿಸಿದ್ದಿಲ್ಲ. ಇದೇ ಮೊದಲ ಬಾರಿಗೆ ಈ ರೀತಿಯ ಅವಘಡ ಸಂಭವಿಸಿದೆ ಎಂದು ಗ್ರಾಮಸ್ಥರು ವಿಷಾದಿಸಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟಾಗಿದೆ.
ಈ ಕುರಿತು ಹೊನ್ನಾಳಿ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.

ಜನಜಾಗೃತಿ ಅವಶ್ಯ:

      ಶ್ರೀ ಚಿಕ್ಕುಡದಮ್ಮ ದೇವಿ ಕೆಂಡೋತ್ಸವ ಕುರಿತಂತೆ ತಮಗೆ ಯಾವುದೇ ಮಾಹಿತಿ ಇರಲಿಲ್ಲ. ಮೌಢ್ಯ ಪ್ರತಿಬಂಧಕ ಕಾಯಿದೆಯ ಅನ್ವಯ ಇಂಥ ಆಚರಣೆಗಳನ್ನು ಸಂಘಟಿಸುವಂತಿಲ್ಲ. ಆದರೆ, ಆ ಕಾನೂನು ಇನ್ನೂ ಸಂಪೂರ್ಣವಾಗಿ ಜಾರಿಗೊಳ್ಳಬೇಕಿದೆ. ಜನರ ಧಾರ್ಮಿಕ ಭಾವನೆಗಳಿಗೆ ಒಮ್ಮೆಲೇ ಧಕ್ಕೆ ಉಂಟು ಮಾಡಲು ಆಗುವುದಿಲ್ಲ. ಹಂತ ಹಂತವಾಗಿ ಜನರನ್ನು ಶಿಕ್ಷಿತರನ್ನಾಗಿ ಮಾಡುವ ಮೂಲಕ ಜಾಗೃತಿ ಮೂಡಿಸಿ ಇಂಥ ಆಚರಣೆಗಳನ್ನು ಅವರೇ ದೂರವಿಡುವ ಕಾರ್ಯ ಆಗಬೇಕು ಎಂದು ತಹಸೀಲ್ದಾರ್ ತುಷಾರ್ ಬಿ.ಹೊಸೂರ್ “ವಿಕ” ಪತ್ರಿಕೆಗೆ ಮಾಹಿತಿ ನೀಡಿದರು.

       ಶ್ರೀ ಚಿಕ್ಕುಡದಮ್ಮ ದೇವಿ ಕೆಂಡೋತ್ಸವ ಆಯೋಜನೆ ಬಗ್ಗೆ ಗ್ರಾಮಸ್ಥರು ತಾಲೂಕು ಆಡಳಿತಕ್ಕಾಗಲೀ, ಪೊಲೀಸ್ ಠಾಣೆಗಾಗಲೀ ಯಾವುದೇ ಮಾಹಿತಿ ನೀಡಿರಲಿಲ್ಲ. ಹಾಗಾಗಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ತಿಳಿಸಿದರು.

       ಇಂಥ ಉತ್ಸವಗಳನ್ನು ಸಂಘಟಿಸುವಾಗ ಕನಿಷ್ಟ ಪಕ್ಷ ಪ್ರಥಮ ಚಿಕಿತ್ಸಾ ವ್ಯವಸ್ಥೆ, ಪೊಲೀಸರ ನಿಯೋಜನೆ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು.

     

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link