ಶಾಸಕರಿಂದ ಶಿಷ್ಟಾಚಾರ ಉಲ್ಲಂಘನೆಗೆ ಪ್ರತಿಭಟನೆ

  ಹಾನಗಲ್ಲ :

      ದೇವರಾಜ್ ಅರಸು ಅಭಿವೃದ್ಧಿ ನಿಗಮ ಹಾಗೂ ಪಶು ಸಂಗೋಪನಾ ಇಲಾಖೆಯ ಪಶುಭಾಗ್ಯ ಯೋಜನೆಯ ಫಲಾನುಭವಿಗಳ ಆಯ್ಕೆಯಲ್ಲಿ ಏಕಪಕ್ಷೀಯವಾಗಿ ತೀರ್ಮಾನ ಕೈಕೊಳ್ಳಲಾಗಿದ್ದು, ಸ್ಥಳೀಯ ಶಾಸಕರು ಶಿಷ್ಟಾಚಾರ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ತಾಲೂಕು ಪಂಚಾಯತ ಅಧ್ಯಕ್ಷರು, ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಸಭಾಂಗಣದ ಎದುರು ಕೆಲಕಾಲ ಧರಣಿ ನಡೆಸಿದ ಘಟನೆ ನಡೆಯಿತು.

      ಶಾಸಕ ಸಿ.ಎಂ.ಉದಾಸಿ ಅಧ್ಯಕ್ಷತೆಯಲ್ಲಿ ನಡೆದ ದೇವರಾಜ್ ಅರಸ್ ಅಭಿವೃದ್ಧಿ ನಿಗಮ ಹಾಗೂ ಪಶು ಸಂಗೋಪನಾ ಇಲಾಖೆಯ ಪಶುಭಾಗ್ಯ ಯೋಜನೆಯ ಫಲಾನುಭವಿಗಳ ಆಯ್ಕೆಯ ಸಭೆಯಲ್ಲಿ ನೋಡಲ್ ತಾಲೂಕು ವಿಧಾನ ಪರಿಷತ್ ಸದಸ್ಯರಾಗಿರುವ ಶ್ರೀನಿವಾಸ ಮಾನೆ ಅವರನ್ನು ಆಹ್ವಾನಿಸದೇ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಮಾನೆ ಅವರು ತೆಲಂಗಾಣ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಸಂದರ್ಭವನ್ನು ಬಳಸಿಕೊಂಡು ಫಲಾನುಭವಿಗಳ ಆಯ್ಕೆ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ಇದರೊಂದಿಗೆ ತಾಲೂಕು ಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರೊಂದಿಗೂ ಚರ್ಚಿಸದೇ ಫಲಾನುಭವಿಗಳ ಆಯ್ಕೆ ನಡೆಸಲಾಗಿದೆ. ತಾಲೂಕು ಪಂಚಾಯತ ಸಭಾಂಗಣದಲ್ಲಿ ನಡೆಸಬೇಕಿದ್ದ ಸಭೆಯನ್ನು ಶಾಸಕರು ತಮ್ಮ ಕೊಠಡಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಫಲಾನುಭವಿ ಪಟ್ಟಿ ಅಂತಿಮಗೊಳಿಸಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಶಿಷ್ಟಾಚಾರದ ಉಲ್ಲಂಘನೆಯಾದಂತಾಗಿದೆ ಎಂದು ಆಪಾದಿಸಿದ್ದಾರೆ.

ಪ್ರತಿಕ್ರಿಯೆ :

      ಇದಕ್ಕೆ ಪ್ರತಿಕೃಯಿಸಿದ ಶಾಸಕ ಉದಾಸಿ, ಫಲಾನುಭವಿಗಳ ಆಯ್ಕೆ ಶಾಸಕರ ಹಕ್ಕು. ಇದರಲ್ಲಿ ಯಾವುದೇ ಮಧ್ಯವರ್ತಿಗಳ ಪಾಲ್ಗೊಳ್ಳುವಿಕೆ ಇರುವುದಿಲ್ಲ. ಫಲಾನುಭವಿಗಳ ಆಯ್ಕೆ ಪಾರದರ್ಶಕವಾಗಿ ನಡೆದಿದ್ದು, ಯಾವುದೇ ಶಿಷ್ಟಾಚಾರ ಉಲ್ಲಂಘನೆ ಪ್ರಶ್ನೆಯೇ ಇಲ್ಲ. ನೋಡಲ್ ತಾಲೂಕನ್ನಾಗಿ ಹಾನಗಲ್ಲನ್ನು ಪಡೆದಿರುವ ವಿಧಾನ ಪರಿಷತ್ ಸದಸ್ಯ ಪ್ರೊ.ಎಸ್.ವಿ.ಸಂಕನೂರ ಅವರ ಉಪಸ್ಥಿತಿಯಲ್ಲಿ ಫಲಾನುಭವಿಗಳನ್ನು ಅಂತಿಮಗೊಳಿಸಿದ್ದೇವೆ. ಅಧಿಕಾರಿಗಳು ಮಾತ್ರ ಸಭೆಯಲ್ಲಿ ಪಾಲ್ಗೊಳ್ಳುವುದು ವಾಡಿಕೆಯಾಗಿದೆ. ಫಲಾನುಭವಿಗಳ ಆಯ್ಕೆಯಲ್ಲಿ ಗೌಪ್ಯತೆ ಕಾಪಾಡುವ ಅಗತ್ಯವಿದ್ದುದರಿಂದ ಬೇರಾರಿಗೂ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿರಲಿಲ್ಲ ಎಂದು ಸ್ಪಷ್ಟ ಪಡಿಸಿದರು. ಫಲಾನುಭವಿಗಳ ಆಯ್ಕೆಗೆ ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡುವ ಅಗತ್ಯವಿಲ್ಲ. ಯಾವುದೇ ವ್ಯಕ್ತಿಗಳು ಹಣ ಕೇಳಿದರೆ ತಮ್ಮನ್ನು ನೇರವಾಗಿ ಸಂಪರ್ಕಿಸಿ ದೂರು ಸಲ್ಲಿಸಬಹುದು ಎಂದು ಶಾಸಕ ಉದಾಸಿ ರೈತರಿಗೆ ಮನವಿ ಮಾಡಿದರು. ಪಶುಭಾಗ್ಯ ಯೋಜನೆಯಡಿ 40 ಫಲಾನುಭವಿಗಳು, ದೇವರಾಜ್ ಅರಸ್ ಅಭಿವೃದ್ಧಿ ನಿಗಮದಲ್ಲಿ 57 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಪಶುಭಾಗ್ಯ ಯೋಜನೆಯಲ್ಲಿ ಇನ್ನೂ 5, ದೇವರಾಜ್ ಅರಸ್ ನಿಗಮದಲ್ಲಿ 7 ಫಲಾನುಭವಿಗಳ ಆಯ್ಕೆ ಬಾಕಿ ಉಳಿದಿವೆ ಎಂದು ಉದಾಸಿ ಇದೇ ಸಂದರ್ಭದಲ್ಲಿ ವಿವರಿಸಿದರು.

      ಪ್ರತಿಭಟನೆಯಲ್ಲಿ ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಮಾಜಿ ಅಧ್ಯಕ್ಷ ಶಿವಬಸಪ್ಪ ಪೂಜಾರ, ಸದಸ್ಯರಾದ ರಾಮಪ್ಪ ಪೂಜಾರ, ಸಿದ್ದನಗೌಡ ಪಾಟೀಲ, ಶಂಕ್ರಣ್ಣ ಪ್ಯಾಟಿ, ಎ.ಐ.ಪಠಾಣ, ಪುರಸಭಾ ಸದಸ್ಯರಾದ ಪರಶುರಾಮ ಖಂಡೂನವರ, ಮಹೇಶ ಪವಾಡಿ, ಕಾಂಗ್ರೆಸ್ ಮುಖಂಡರಾದ ಯಾಶಿರ್‍ಖಾನ ಪಠಾಣ, ದ್ಯಾವನಗೌಡ ಪಾಟೀಲ, ರಾಮಚಂದ್ರ ಹೊಸಮನಿ, ಭರಮಣ್ಣ ಶೀವೂರ, ಶಿವಾನಂದ ಕನ್ನಕ್ಕನವರ, ಮೈಲಾರಪ್ಪ ಕಬ್ಬೂರ ಇತರರಿದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link