ಕುಣಿಗಲ್
ಏಕಾಏಕಿ ಕಾರ್ಖಾನೆಯಿಂದ ಮಹಿಳಾ ಕಾರ್ಮಿಕರನ್ನು ಹೊರಹಾಕುತ್ತಿರುವ ಕ್ರಮವನ್ನು ಖಂಡಿಸಿ ನೂರಾರು ಮಹಿಳಾ ಕಾರ್ಮಿಕರು ತಾಲ್ಲೂಕು ಅಂಚೇಪಾಳ್ಯದ ರೆಡ್‍ಜೆಲ್ ಕಾರ್ಖಾನೆ ಮುಂದೆ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಖಾನೆಯಲ್ಲಿ ಇರುವ 500ಕ್ಕೂ ಹೆಚ್ಚು ಮಂದಿ ಕಾರ್ಮಿಕರಲ್ಲಿ ಇದ್ದಕ್ಕಿದ್ದಂತೆ ಎಎನ್‍ಎಸ್ ಮತ್ತು ಎಸ್‍ಆರ್‍ಎಸ್ ಗುತ್ತಿಗೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರು ಹತ್ತಾರು ವರ್ಷಗಳಿಂದ ಕಾರ್ಖಾನೆಯಲ್ಲಿ ದುಡಿಯುತ್ತಿದ್ದು ಯಾವುದೇ ಮುನ್ಸೂಚನೆ ನೀಡದೆ ಕೆಲಸದಿಂದ ಹೊರ ಹಾಕುತ್ತಿದ್ದಾರೆ ಎಂದು ಕಾರ್ಮಿಕರು ತಮ್ಮ ಅಳಲನ್ನ ತೋಡಿಕೊಳ್ಳುವ ಮೂಲಕ ಕೂಡಲೇ ಕೆಲಸಕ್ಕೆ ಎಂದಿನಂತೆ ಮುಂದುವರೆಸಿಕೊಂಡು ಹೋಗಬೇಕೆಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಕಾರ್ಖಾನೆಯ ಹೆಚ್.ಆರ್.ಪ್ರತಿಮಾದೇವಿ ಆಗಮಿಸಿ ಕಳೆದ 3 ತಿಂಗಳಿಂದ ಕಂಪನಿಯ ಪರವಾನಿಗೆ ಪಡೆಯದೆ ಅನಧಿಕೃತ ಗೈರಾಗಿರುವ ಸಿಬ್ಬಂದಿಯನ್ನು ಮಾತ್ರ ಕೆಲಸದಿಂದ ತಡೆ ನಡೆಸಲು ಸೂಚಿಸಿದ್ದರು. ಇದರ ಬಗ್ಗೆ ನಿಮ್ಮ ಗುತ್ತಿಗೆದಾರರು ತಪ್ಪುಸಂದೇಶ ನೀಡಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಪ್ರತಿಭಟನೆಯನ್ನು ಬಿಟ್ಟು ಕಾರ್ಖಾನೆಗೆ ಬರುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸದ ಕಾರ್ಮಿಕರು ನಾವು ಹತ್ತಾರು ವರ್ಷದಿಂದ ಇಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದೇವೆ. ನಮ್ಮನ್ನು ಮನಬಂದಂತೆ ತೆಗೆಯಲು ನಿಮಗೆ ಮನಸ್ಸು ಹೇಗೆ ಬಂತು, ನಮ್ಮನ್ನು ನಂಬಿಕೊಂಡು ಕುಟುಂಬಗಳಿವೆ. ಅದಕ್ಕಾಗಿ ಎಲ್ಲರಿಗೂ ಕೆಲಸ ನೀಡಲೇಬೇಕು ಎಂದು ಒತ್ತಾಯಪಡಿಸಿದರು.
ನಂತರ ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿದ ಮಾನವ ಸಂಪನ್ಮೂಲಾಧಿಕಾರಿ ಪ್ರತಿಮಾದೇವಿ ಸದ್ಯಕ್ಕೆ ಎಲ್ಲರಿಗೂ ಕೆಲಸ ನೀಡುವ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನಾ ಕಾರ್ಮಿಕರು ಕೆಲಸಕ್ಕೆ ತೆರಳಿದರು. ಈ ಪ್ರತಿಭಟನೆಯಲ್ಲಿ ಹಲವು ಕಿರಿಯ ಹಿರಿಯ ಕಾರ್ಮಿಕರು ಸೇರಿದಂತೆ ಎಲ್ಲರೂ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








