ಅನಿಯಂತ್ರಿತ ರಸ್ತೆ ಅಗೆತ: ಅಸಹಾಯಕ ನಗರಾಡಳಿತ

ಆರ್.ಎಸ್.ಅಯ್ಯರ್
ತುಮಕೂರು

      ಜಿಲ್ಲಾ ಕೇಂದ್ರವೂ ಆಗಿರುವ ತುಮಕೂರು ನಗರದಲ್ಲಿ ಈಗ ಎಲ್ಲೆಲ್ಲೂ ರಸ್ತೆ ಅಗೆತದ್ದೇ ನೋಟ. ನಗರದ 35 ವಾರ್ಡ್‍ಗಳಲ್ಲೂ ಒಂದಲ್ಲ ಒಂದು ಕಾರಣಕ್ಕೆ ರಸ್ತೆಗಳನ್ನು ಯದ್ವಾತದ್ವಾ ಅಗೆದು ಹಾಕಲಾಗುತ್ತಿದೆ. ಕಾರಣಗಳೇನೇ ಇದ್ದರೂ ಇದರಿಂದ ನೇರವಾಗಿ ಸಂಕಷ್ಟಕ್ಕೀಡಾಗುತ್ತಿರುವವರೆಂದರೆ ರಸ್ತೆ ಬಳಕೆದಾರರಾದ ನಗರದ `ತೆರಿಗೆದಾರ ನಾಗರಿಕರು’. ಅನಿಯಮಿತವಾಗಿ ನಡೆಯುತ್ತಿರುವ ಈ ರಸ್ತೆ ಅಗೆತವು ಅಕ್ಷರಶಃ ಅನಿಯಂತ್ರಿತವಾಗಿಯೂ ಸಾಗಿದೆ. ಕಣ್ಣೆದುರಿನ ಈ ಅವಸ್ಥೆಯನ್ನು ಕಂಡರೂ ನಗರಾಡಳಿತವಾದ ತುಮಕೂರು ಮಹಾನಗರ ಪಾಲಿಕೆ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದೆ.

        ತುಮಕೂರು ನಗರದ 35 ವಾರ್ಡ್‍ಗಳ ವ್ಯಾಪ್ತಿಯು ತುಮಕೂರು ಮಹಾನಗರ ಪಾಲಿಕೆಯ ಆಸ್ತಿ. ಈ ವ್ಯಾಪ್ತಿಯಲ್ಲಿ ಏನೇ ಸಾರ್ವಜನಿಕ ಕಾಮಗಾರಿಗಳು ನಡೆಯಬೇಕಾದರೆ ಅದು ಪಾಲಿಕೆಯ ಗಮನಕ್ಕೆ ಬರಬೇಕು. ಪಾಲಿಕೆ ಅನುಮತಿಸಬೇಕು. ಅನುಮತಿ ಇಲ್ಲದ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಅಧಿಕಾರವೂ ನಗರಾಡಳಿತಕ್ಕುಂಟು. ನಡೆಯುವ ಪ್ರತಿ ಕಾಮಗಾರಿಗಳ ಸಮಗ್ರ ಮಾಹಿತಿ ಪಾಲಿಕೆಯಲ್ಲಿರಬೇಕು.

       ಸಂಬಂಧಿಸಿದವರು ಕೊಡದಿದ್ದರೆ ಅದನ್ನು ಪಡೆಯುವ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಕೆಲವೊಂದು ಕಾಮಗಾರಿಗಳು ಮಹಾನಗರ ಪಾಲಿಕೆಗೆ ವಾರ್ಷಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ರಾಜಮಾರ್ಗವೂ ಹೌದು. ಆದರೆ ಈಗ ಮಹಾನಗರ ಪಾಲಿಕೆಯಲ್ಲಿ ನಗರದ ಈ ಯಾವುದೇ ಕಾಮಗಾರಿಗಳ ಅಧಿಕೃತ “ಸಮಗ್ರ ಯೋಜನಾ ವರದಿ” (ಡಿ.ಪಿ.ಆರ್.-ಡೀಟೇಲ್ಡ್ ಪ್ರಾಜೆಕ್ಟ್ ರಿಪೆÇೀರ್ಟ್) ಇಲ್ಲವೆಂಬುದು ಈಗ ಸಾರ್ವಜನಿಕ ಚರ್ಚಾವಿಷಯ ಆಗತೊಡಗಿದೆ.

 ಇವುಗಳ ಸಮಗ್ರ ವರದಿ
ಪಾಲಿಕೆಯಲ್ಲಿ ಎಲ್ಲಿದೆ?

        ಪ್ರಸ್ತುತ ತುಮಕೂರು ನಗರದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿ ವತಿಯಿಂದ ಎರಡನೇ ಹಂತದ ಒಳಚರಂಡಿ ಯೋಜನೆ ಮತ್ತು ದಿನದ 24 ತಾಸುಗಳು- ವಾರದ ಏಳೂ ದಿನಗಳ ನೀರು ಸರಬರಾಜು ಯೋಜನೆ, ಖಾಸಗಿ ಕಂಪನಿಯಿಂದ ಮನೆ-ಮನೆಗೆ ಅಡಿಗೆ ಅನಿಲ ಪೂರೈಸುವ ಪೈಪ್‍ಲೈನ್ ಕಾಮಗಾರಿ, ಬೆಸ್ಕಾಂನಿಂದ ಭೂಗತ ವಿದ್ಯುತ್ ಕೇಬಲ್ (ಅಂಡರ್‍ಗ್ರೌಂಡ್ ಕೇಬಲ್) ಯೋಜನೆ ಮತ್ತು ಖಾಸಗಿ ಮೊಬೈಲ್ ಕಂಪನಿಯ ಕೇಬಲ್ ಅಳವಡಿಕೆ ಯೋಜನೆಗಳು ಅನುಷ್ಠಾನವಾಗುತ್ತಿವೆ.

       ಈ ಐದು ಬೃಹತ್ ಯೋಜನೆಗಳ ಕಾಮಗಾರಿಗಳು ನಗರಾಡಳಿತವಾದ ಮಹಾನಗರ ಪಾಲಿಕೆಗೆ ಸೇರಿದ ಸಾರ್ವಜನಿಕ ಜಾಗದಲ್ಲೇ ನಡೆಯುತ್ತಿವೆ. ನಗರಾದ್ಯಂತ ಸುಸ್ಥಿತಿಯಲ್ಲಿದ ರಸ್ತೆಗಳೆಲ್ಲ ಈಗ ವಿರೂಪಗೊಳ್ಳುತ್ತಿವೆ. ನಿಯಮ-ನಿಬಂಧನೆಗಳ ಪ್ರಕಾರ ವಿರೂಪಗೊಂಡ ರಸ್ತೆಗಳನ್ನು ಮೊದಲಿನ ಸ್ಥಿತಿಗೆ (ರೆಸ್ಟೊರೇಷನ್) ತರುವ ಕೆಲಸವನ್ನು ಗಾಳಿಗೆ ತೂರಲಾಗಿದೆ. ಈ ಕಾಮಗಾರಿಗಳ ಸಾಧಕ-ಬಾಧಕಗಳಿಗೆ ಮುಂದೆ ಪಾಲಿಕೆಯೇ ಹೊಣೆ ಹೊರಬೇಕು. ಹೀಗಿದ್ದೂ ಇವುಗಳ ಬಗ್ಗೆ ಮಹಾನಗರ ಪಾಲಿಕೆಯಲ್ಲಿ ಖಚಿತ-ಸ್ಪಷ್ಟ ಮಾಹಿತಿ ಎಲ್ಲಿದೆ? ಎಂಬುದೇ ಈಗ ನಗರದ `ತೆರಿಗೆದಾರ ನಾಗರಿಕರು’ ಮುಂದಿಡುತ್ತಿರುವ ಗಂಭೀರ ಪ್ರಶ್ನೆ.

        ದಿನದ 24 ತಾಸುಗಳು ಹಾಗೂ ವಾರದ ಏಳೂ ದಿನಗಳು ನೀರು ಸರಬರಾಜು ಮಾಡುವ ಯೋಜನೆಗೆ ಈಗಾಗಲೇ ಹಲವೆಡೆ ರಸ್ತೆಗಳನ್ನು ಅಗೆಯಲಾಗಿದೆ. ಒಂದು ರಸ್ತೆಯ ಒಂದು ಬದಿ ಉದ್ದಕ್ಕೂ ಪೈಪ್ ಲೈನ್ ಅಳವಡಿಸಿ ಮನೆಗಳ (ಆಸ್ತಿಗಳ) ಮುಂದೆ ಲಿಂಕ್ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜೊತೆಗೆ ಎದುರು ಬದಿಯ ಮನೆಗಳ ಸಂಪರ್ಕಕ್ಕಾಗಿ ಪ್ರತಿ 30 ಅಡಿಗಳಿಗೆ ಒಂದರಂತೆ ರಸ್ತೆಯನ್ನು ಅಡ್ಡವಾಗಿ ಅಗೆಯಲಾಗುತ್ತದೆ.

       ಮೀಟರ್ ಅಳವಡಿಸಿ, ಆಯಾ ಮನೆಗಳಿಗೆ ನೀರಿನ ಸಂಪರ್ಕ ಒದಗಿಸುವ ಕಾಮಗಾರಿ ಆಗಬೇಕಾಗಿದೆ. ಇವೆಲ್ಲವನ್ನೂ ಹಂತ-ಹಂತವಾಗಿ ಕೈಗೊಳ್ಳುತಿದ್ದು, ಮತ್ತೆ ಮತ್ತೆ ರಸ್ತೆ ಅಗೆಯುವ ಸಂದರ್ಭಗಳು ಎದುರಾಗುತ್ತಿದೆ. ಒಂದು ರಸ್ತೆಯಲ್ಲಿ ಇವೆಲ್ಲ ಕಾಮಗಾರಿಯನ್ನು ಒಮ್ಮೆಲೆ ಕೈಗೊಂಡಿದ್ದಿದ್ದರೆ ಪದೇ ಪದೇ ಅಗೆಯುವುದು ತಪ್ಪುತ್ತಿತ್ತು. ಒಂದು ರಸ್ತೆಯಲ್ಲಿ ಮತ್ತೊಂದು ಬದಿಗೆ ಒಂದು ಪ್ರಮುಖ ಪೈಪ್ ಲೈನ್ ಹಾಕಿದ್ದರೆ, ಪ್ರತಿ 30 ಅಡಿಗಳಿಗೊಂದು ರಸ್ತೆ ಅಗೆತ ತಪ್ಪುತ್ತಿತ್ತು. ಹೀಗಾಗಿದ್ದಿದ್ದರೆ ತೀರಾ ಇತ್ತೀಚೆಗೆ ಹೊಸದಾಗಿ ಮಾಡಲಾದ ರಸ್ತೆಗಳು ಉಳಿಯುತ್ತಿದ್ದವು ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಈ ಯೋಜನೆಯ ವಿವರವೇ ಪಾಲಿಕೆಯಲ್ಲಿಲ್ಲ! ದಶಕದ ಹಿಂದೆ ಜಾರಿಗೆ ಬಂದ ಮೊದಲನೇ ಹಂತದ ಒಳಚರಂಡಿ ಯೋಜನೆಯ (ಯು.ಜಿ.ಡಿ.) ಪೈಪ್‍ಲೈನ್ ಕಾಮಗಾರಿ ಹಾಗೂ ಚೇಂಬರ್‍ಗಳು ಎಲ್ಲಿವೆ ಎಂಬ ಸ್ಪಷ್ಟ-ಖಚಿತ ಮಾಹಿತಿಯೇ ಮಹಾನಗರ ಪಾಲಿಕೆಯಲ್ಲಿಲ್ಲ ಎಂಬುದು ಕಠೋರ ಸತ್ಯ. ಇದೀಗ ನಗರದಲ್ಲಿ ಎರಡನೇ ಹಂತದ ಒಳಚರಂಡಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ.

        ಪೈಪ್‍ಲೈನ್ ಕಾಮಗಾರಿ ಹಾಗೂ ಚೇಂಬರ್ ನಿರ್ಮಾಣ ಆಗುತ್ತಿದೆಯೇ ಹೊರತು ಎಲ್ಲೂ ಸಹ ಮನೆ-ಮನೆ ಸಂಪರ್ಕ ಇನ್ನೂ ಕೊಡಲಾಗಿಲ್ಲ. ಮನೆ-ಮನೆ ಸಂಪರ್ಕಕ್ಕಾಗಿ ಮತ್ತೊಮ್ಮೆ ರಸ್ತೆಗಳನ್ನು ಅಗೆಯುವುದು ಅನಿವಾರ್ಯವಾಗಲಿದೆ. ಇದು ಯಾವಾಗ ಪೂರ್ಣವಾಗುವುದೆಂಬ ಮಾಹಿತಿ ಯಾರಿಗೂ ಇಲ್ಲ. ಇದು ಹೇಗೆ ಕಾರ್ಯನಿರ್ವಹಿಸಲಿದೆಯೆಂಬ ವರದಿ ಪಾಲಿಕೆಯಲ್ಲಿಲ್ಲ!
ಮನೆ-ಮನೆಗೆ ಅಡಿಗೆ ಅನಿಲವನ್ನು ಪೈಪ್‍ಲೈನ್ ಮೂಲಕವೇ ಪೂರೈಸುವ ಮತ್ತೊಂದು ಮಹತ್ವಾಕಾಂಕ್ಷೆಯ ಯೋಜನೆಯು ಖಾಸಗಿ ಕಂಪನಿಯಿಂದ ಅನುಷ್ಠಾನಗೊಳ್ಳುತ್ತಿದೆ.

        ಈಗಾಗಲೇ ನಗರದ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಸಂಪರ್ಕ ಕೊಡಲಾಗಿದೆ. ಈ ನಿಟ್ಟಿನಲ್ಲಿ ನಗರದ ಎಲ್ಲ ರಸ್ತೆಗಳನ್ನೂ ಅಗೆಯುವ ಕಾಮಗಾರಿ ನಡೆಯುತ್ತಿದೆ. ಆದರೆ ಈ ಕಾಮಗಾರಿ ಬಗ್ಗೆ ಪಾಲಿಕೆಯಲ್ಲೇ ಸ್ಪಷ್ಟ ಮಾಹಿತಿ ಇಲ್ಲ! ಅಡಿಗೆ ಅನಿಲದ ಪೈಪ್‍ಲೈನ್ ಎಂದರೆ ಅತಿಸೂಕ್ಷ್ಮವಾದುದು. ಆ ಪೈಪ್‍ಲೈನ್ ಎಷ್ಟು ಆಳದಲ್ಲಿರಬೇಕು? ಅದು ಎಷ್ಟು ಸುರಕ್ಷಿತ? ಇತರೆ ಕಾಮಗಾರಿ ಕೈಗೊಳ್ಳುವಾಗ ಆಕಸ್ಮಿಕವಾಗಿ ಅದಕ್ಕೆ ಧಕ್ಕೆಯಾದರೆ ಮುಂಜಾಗ್ರತಾ ಕ್ರಮವೇನು? ಮನೆಯೊಳಗೆ ಅಥವಾ ಪೈಪ್‍ಲೈನ್‍ನಲ್ಲಿ ಸೋರಿಕೆ ಆದರೆ, ಅನಾಹುತವಾದರೆ ಹೊಣೆ ಯಾರದ್ದು? ಯಾವ ಕ್ರಮದಲ್ಲಿ ಈ ಪೈಪ್‍ಲೈನ್ ಅಳವಡಿಸಲಾಗುತ್ತಿದೆ? ನಿರ್ವಹಣಾ ವಿಧಾನ ಯಾವುದು? ಎಂಬ ಮೂಲ ಭೂತ ಸಂಗತಿಗಳೇ ಪಾಲಿಕೆಗೆ ಗೊತ್ತಿಲ್ಲ!

        ನಗರಾದ್ಯಂತ ಬೆಸ್ಕಾಂನಿಂದ ಭೂಗತ (ಅಂಡರ್‍ಗ್ರೌಂಡ್) ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ನಡೆಯುತ್ತಿದ್ದು, ಈ ಬಗ್ಗೆ ಸಹ ಪಾಲಿಕೆಗೆ ಮಾಹಿತಿ ಇಲ್ಲದಂತಾಗಿದೆ! ಇದು ಸಾಮಾನ್ಯ ವಿದ್ಯುತ್ ಲೈನೇ ಅಥವಾ ಹೈಟೆನ್‍ಷನ್ ಲೈನೇ? ಎಲ್ಲೆಲ್ಲಿ ಅಗೆಯುತ್ತಿದ್ದಾರೆ? ಇದು ಎಷ್ಟು ಸುರಕ್ಷಿತ? ಎಷ್ಟು ಆಳದಲ್ಲಿ ಅಗೆಯಲಾಗುತ್ತಿದೆ? ಇತರರು ರಸ್ತೆ ಅಗೆಯುವಾಗ ಕೈಗೊಳ್ಳಬೇಕಾದ ಮುಂಜಾಗ್ರತೆಗಳೇನು? ಒಂದು ವೇಳೆ ಆಕಸ್ಮಿಕಗಳು ಸಂಭಸಿದರೆ ಏನು ಕ್ರಮ? ಇದರ ನಿರ್ವಹಣೆ ಹೇಗೆ? ಎಂಬಿತ್ಯಾದಿ ಯಾವ ಮಾಹಿತಿಗಳೂ ಪಾಲಿಕೆಯಲ್ಲಿಲ್ಲ!
ಇನ್ನು ಖಾಸಗಿ ಮೊಬೈಲ್ ಕಂಪನಿಯು ಭೂಗತ ಕೇಬಲ್ ಅಳವಡಿಸಲು ರಸ್ತೆ ಅಗೆಯುತ್ತಿದೆ. ಇದಕ್ಕೆ ಯಾರು -ಯಾವಾಗ ಅನುಮತಿ ಕೊಟ್ಟಿದ್ದಾರೆ? ಯಾವ ರೀತಿ ಇದನ್ನು ಅಳವಡಿಸಲಾಗುತ್ತಿದೆ? ಎಂಬಿತ್ಯಾದಿ ಯಾವ ಮಾಹಿತಿಗಳೂ ಪಾಲಿಕೆಯಲ್ಲಿಲ್ಲ!
ರೆಸ್ಟೊರೇಷನ್ ಎಲ್ಲಿ ಆಗುತ್ತಿದೆ?

         ನಿಯಮಾವಳಿ ಪ್ರಕಾರ ರಸ್ತೆಯನ್ನು ಅಗೆದರೆ ಅದನ್ನು ಪುನಃ ಮೊದಲಿನ ಸ್ಥಿತಿಗೆ (ರೆಸ್ಟೊರೇಷನ್) ತರಲೇಬೇಕು. ಇದು ಸಂಬಂಧಿಸಿದ ಗುತ್ತಿಗೆದಾರರ ಆದ್ಯ ಕರ್ತವ್ಯ. ಇದನ್ನು ಕಟ್ಟುನಿಟ್ಟಾಗಿ ಆಚರಣೆಗೆ ಬರುವಂತೆ ನಿಗಾ ವಹಿಸುವುದು ಮಹಾನಗರ ಪಾಲಿಕೆಯ ಆದ್ಯ ಕರ್ತವ್ಯ. ಈಗ ಇವೆರಡೂ ಕಡೆಗಳಿಂದಲೂ ಕರ್ತವ್ಯಲೋಪ ಆಗುತ್ತಿರುವುದು ಕಣ್ಣಿಗೆ ರಾಚುತ್ತಿದೆ. ರಸ್ತೆಯ ಅಗೆತಗಳ ದುಷ್ಟರಿಣಾಮ ಹಾಗೆಯೇ ಉಳಿಯುತ್ತಿದೆ.

         ಕುಡಿಯುವ ನೀರು ಪೂರೈಕೆ, ಒಳಚರಂಡಿ ಯೋಜನೆ ಕಾಮಗಾರಿ ನಡೆಯುವಾಗ ಸಂಬಂಧಿಸಿದವರು ಕಾಮಗಾರಿಗಳ ಬಗ್ಗೆ ಮಹಾನಗರ ಪಾಲಿಕೆಯ ಸಿವಿಲ್ ಇಂಜಿನಿಯರ್‍ಗಳನ್ನು ಕರೆಸಿ ಮಾಹಿತಿ ಕೊಡಬೇಕು. ಆಯಾ ರಸ್ತೆ/ಬಡಾವಣೆಗಳಲ್ಲಿ ಕಾಮಗಾರಿ ಸಲವಾಗಿರುವ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಈ ಬಗ್ಗೆ ಹಿಂದೊಮ್ಮೆ ಪಾಲಿಕೆಯ ಸಭೆಯೊಂದರಲ್ಲಿ ನಿರ್ಣಯವೂ ಆಗಿದೆ. ಆದರೆ ಅದು ಈವರೆಗೆ ಜಾರಿ ಮಾತ್ರ ಆಗಿಲ್ಲ! ಯಾರೂ ಅದರತ್ತ ತಲೆ ಕೆಡಿಸಿಕೊಂಡಿಲ್ಲ!

ಡಿಪಿಆರ್ ಇವರ ಬಳಿಇರಬೇಕಿತ್ತು

         ಮೂಲಗಳು ಹೇಳುವಂತೆ, ಪಾಲಿಕೆಯ ಸಿವಿಲ್ ಇಂಜಿನಿಯರ್‍ಗಳು, ಕುಡಿಯುವ ನೀರು ಪೂರೈಕೆ ಮತ್ತು ವಿದ್ಯುತ್ ವಿಭಾಗದ ಇಂಜಿನಿಯರ್‍ಗಳು, ಒಳಚರಂಡಿ ವಿಭಾಗದ ಇಂಜಿನಿಯರ್‍ಗಳಿಗೆ ಇಂಥ ಕಾಮಗಾರಿಗಳ ಬಗ್ಗೆ ಮಾಹಿತಿ ಇರಬೇಕು. ಡಿ.ಪಿ.ಆರ್. ಇವರ ಬಳಿ ಇರಬೇಕು. ಇವರನ್ನೊಳಗೊಂಡಂತೆ ಒಂದು ಸಮನ್ವಯತೆ ಇರಬೇಕು. ಆದರೆ ಈಗ ಪಾಲಿಕೆಯಲ್ಲಿ ಇಂಥ ಯಾವ ಸ್ಥಿತಿಯೂ ಇಲ್ಲದೆ, ಎಲ್ಲರೂ ಇನ್ನೊಬ್ಬರತ್ತ ಬೊಟ್ಟು ಮಾಡುವ ಪರಿಸ್ಥಿತಿ ತಲೆದೋರಿದೆ.

ಕುಡಿವ ನೀರಿನ ಹಾಗೂ ಬೀದಿದೀಪ ವ್ಯವಸ್ಥೆಗೆ ಧಕ್ಕೆ

           ನಗರದಲ್ಲಿ ಅವ್ಯಾಹತವಾಗಿ ಹಾಗೂ ಅನಿಯಂತ್ರಿತವಾಗಿ ರಸ್ತೆ ಅಗೆತ ಸಾಗಿದೆ. ಇದರ ನೇರ ದುಷ್ಟರಿಣಾಮ ಕುಡಿಯುವ ನೀರಿನ ಪೂರೈಕೆಯ ಪೈಪ್‍ಲೈನ್‍ಗಳ ಮೇಲೆ ಆಗುತ್ತಿದೆ. ಯಾರೇ ರಸ್ತೆ ಅಗೆದರೂ, ಎಲ್ಲೇ ರಸ್ತೆ ಅಗೆದರೂ, ಕುಡಿಯುವ ನೀರಿನ ಪೈಪ್‍ಲೈನ್ ಇದ್ದೇಇರುತ್ತದೆ. ಅಗೆಯುವಾಗ ಮೊದಲ ಪೆಟ್ಟು ಬೀಳುವುದೇ ಇವುಗಳ ಮೇಲೆ. ಆಗ ನೀರು ವ್ಯರ್ಥವಾಗಿ ಹರಿದುಹೋಗುತ್ತದೆ. ನಾಗರಿಕರು ನೀರಿಲ್ಲದೆ ಪರಿತಪಿಸುವಂತಾಗುತ್ತದೆ. ಇಂಥ ಹಲವು ಪ್ರಕರಣಗಳು ಪ್ರತಿನಿತ್ಯ ಸಂಭವಿಸುತ್ತಲೇ ಇದ್ದು, ಪಾಲಿಕೆಯ ನೀರು ಪೂರೈಕೆ ವಿಭಾಗದವರಿಗೆ ದೊಡ್ಡ ತಲೆನೋವು ತರುತ್ತಿದೆ.

        “ಇತ್ತೀಚೆಗೆ ಬೆಸ್ಕಾಂನವರು ಕೇಬಲ್ ಅಳವಡಿಕೆಗೆ ರಸ್ತೆ ಅಗೆದಿದ್ದಾರೆ. ಆಗ ನೀರಿನ ಪೈಪ್ ಲೈನ್‍ಗೆ ಧಕ್ಕೆ ಆಗಿದೆ. ಅವರು ಹಾಗೆಯೇ ಹೊರಟು ಹೋಗಿದ್ದಾರೆ. ಅಂದು ಸಂಜೆ ಸುಮಾರು 6 ಗಂಟೆಯಿಂದ ಮರುದಿನ ಮುಂಜಾನೆ 5 ಗಂಟೆಯವರೆಗೂ ಮೈದಾಳ ಕೆರೆಯ ನೀರು ವ್ಯರ್ಥವಾಗಿ ಹರಿದುಹೋಗಿದೆ. ಮೈದಾಳ ಕೆರೆ ನೀರು ಏಕೆ ಬರುತ್ತಿಲ್ಲ ಎಂದು ಪರಿಶೀಲಿಸಿದಾಗಷ್ಟೇ ಈ ವಿಚಾರ ತಿಳಿದುಬಂದಿದ್ದು, ಬಳಿಕ ಲೀಕೇಜ್‍ನ್ನು ಸರಿಪಡಿಸಲಾಯಿತು” ಎಂದು ಪಾಲಿಕೆಯ ಮೂಲಗಳು ಉದಾಹರಿಸುವುದು ಈ ಸಮಸ್ಯೆಯ ಗಂಭೀರತೆಗೆ ಸಾಕ್ಷಿಯಾಗಿದೆ.

         “ಇದರೊಂದಿಗೆ ಬೀದಿ ದೀಪಗಳ ವ್ಯವಸ್ಥೆಗೂ ಆಗಾಗ ಧಕ್ಕೆ ಆಗುತ್ತಿದೆ. ಬೀದಿದೀಪಗಳಿಗೆ ಅನೇಕ ಸ್ಥಳಗಳಲ್ಲಿ ಭೂಗತ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ರಸ್ತೆ ಅಗೆಯುವಾಗ ಈ ಭೂಗತ ಕೇಬಲ್ ವ್ಯವಸ್ಥಗೂ ಧಕ್ಕೆ ಆಗಿಬಿಡುತ್ತದೆ. ಆಗ ಬೀದಿದೀಪಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿ, ಅವು ಬೆಳಗುವುದಿಲ್ಲ. ಮತ್ತೆ ಕಾರಣವನ್ನು ಹುಡುಕಿ ಸರಿಪಡಿಸುವವರೆಗೂ ಈ ಸಮಸ್ಯೆ ಮುಂದುವರೆಯುತ್ತದೆ” ಎಂದು ಪಾಲಿಕೆಯ ಮೂಲಗಳು ಹೇಳುತ್ತವೆ. ಇಷ್ಟೆಲ್ಲ ಆದರೂ ಪಾಲಿಕೆ ಮಾತ್ರ ರಸ್ತೆ ಅಗೆತದ ವಿಷಯದಲ್ಲಿ ಅಸಹಾಯಕವಾಗಿದೆ; ಮೂಕಪ್ರೇಕ್ಷಕವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link