ಹುಳಿಯಾರು:
ಇತ್ತೀಚಿನ ದಿನಗಳಲ್ಲಿ ಮಳೆ-ಬೆಳೆ ನೆಚ್ಚಿಕೊಂಡು ಕೃಷಿ ಮಾಡುವುದು ಕಷ್ಟವಾಗಿದೆ ಎಂಬುದು ಅನ್ನದಾತರ ದೂರು. ಹಾಗಾಗಿಯೇ ಯುವ ಜನತೆ ಕೃಷಿ ಕಡೆ ಬೆನ್ನು ಮಾಡಿ ಉದ್ಯೋಗ ಅರಸಿ ಪಟ್ಟಣದತ್ತ ಮುಖ ಮಾಡುತ್ತಿದೆ ಎಂಬುದು ಸಮಜಾಯಿಸಿ. ಆದರೆ ಕೃಷಿಯನ್ನು ಲಾಭದಾಯಕವಾಗಿ ಪರಿವರ್ತಿಸಿಕೊಂಡಲ್ಲಿ ಹಳ್ಳಿಯಲ್ಲೇ ನೆಮ್ಮದಿಯ ಜೀವನ ನಡೆಸಬಹುದೆಂಬುದು ಕೃಷಿ ಇಲಾಖೆಯ ವಾದ.
ಇದನ್ನು ಹುಳಿಯಾರಿನಲ್ಲಿ ಏರ್ಪಡಿಸಿದ್ದ ಕೃಷಿ ಮೇಳದಲ್ಲಿ ತೋರಿಸಿಕೊಟ್ಟಿದ್ದು ಸಮಗ್ರ ಕೃಷಿ ಪದ್ಧತಿಯೇ ರೈತನ ಕೃಷಿ ಸಮಸ್ಯೆಗಳಿಗೆ ಪರಿಹಾರ ಎಂದಿದೆ. ಕೃಷಿ ಇಲಾಖೆಯ ಜೊತೆಗೆ ಕೃಷಿ ಮೇಳದಲ್ಲಿದ್ದ ಜಲಾನಯನ ಇಲಾಖೆಯ ನೀರಿನ ಸಂರಕ್ಷಣೆ, ಮಣ್ಣು ಪರೀಕ್ಷೆ ವಿಧಾನ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎರೆಹುಳು ತೊಟ್ಟಿಗಳ ಪ್ರತ್ಯಾಕ್ಷಿಕೆಗಳು ಸಹ ಕೃಷಿಯನ್ನು ಲಾಭದಾಯವಾಗಿ ಪರಿವರ್ತಿಸಬಹುದೆಂಬುದರ ದಿಕ್ಸೂಚಿಯಾಗಿತ್ತು.
ಕೇವಲ 2 ಎಕರೆ ಇದ್ದರೂ ಸಾಕು ವರ್ಷ ಪೂರ್ತಿ ಆದಾಯ ಬರುವಂತೆ ಮಾಡಬಹುದು. ಇದಕ್ಕೆ ತಾತನ ಕಾಲದ ಏಕ ಬೆಳೆ ಪದ್ಧತಿಗೆ ತಿಲಾಂಜಲಿ ಇಟ್ಟು ಬಹು ಬೆಳೆ ಪದ್ಧತಿ ಅಳವಡಿಸಬೇಕಿದೆ ಎಂಬುದು ಕೃಷಿ ಇಲಾಖೆ ಸ್ಪಷ್ಟ ಸೂಚನೆ. ಇರುವ ಜಮೀನಿನಲ್ಲೇ ರೇಷ್ಮೇ, ಜೇನು, ಮೀನು, ಕುರಿ, ಕೋಳಿ ಸಾಕಿ ಎಂದು ಕೃಷಿ ಮೇಳದಲ್ಲಿ ಪ್ರತ್ಯಾಕ್ಷಿಕೆಯಲ್ಲಿ ಪ್ರದರ್ಶಿಸಿದೆ. ಇದರ ಜೊತೆ ಹಣ್ಣಿನ ಗಿಡಗಳು, ಹೂವಿನ ಗಿಡಗಳು, ದ್ವಿದಳ ಧಾನ್ಯಗಳು, ಬಳ್ಳಿ ತರಕಾರಿಗಳನ್ನು ಬೆಳೆದರೆ ನಿತ್ಯ ಆದಾಯ ಕಟ್ಟಿಟ್ಟ ಬುತ್ತಿ. ಆದರೆ ಕೊಳವೆ ಬಾವಿ ಇರಲೇಬೇಕು ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಡಾ.ಡಿ.ಆರ್.ಹನುಮಂತರಾಜು.
ಅಲ್ಲದೆ ಕೃಷಿ ಮೇಳದಲ್ಲಿ ರಾಗಿ ಸೇರಿದಂತೆ ಸಿರಿಧಾನ್ಯಗಳಾದ ನವಣೆ, ಕೊರಲೆ, ಹಾರಕ, ಬರಗು, ಊದಲು, ಸಜ್ಜೆ, ಹೀಗೆ ನಾನಾ ಸಿರಿಧಾನ್ಯಗಳ ಕಣ ಮಾಡಿ ಸಾಧಕ ರೈತರಿಂದ ಅವುಗಳ ಮಹತ್ವವನ್ನು ರೈತರಿಗೆ ವಿವರಿಸಿದರು. ಜೊತೆಗೆ ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಸರ್ಕಾರದ ಸಹಾಯಧನ ನೀಡುವ ಸಲುವಾಘಿ ಜಾರಿಗೆ ತಂದಿರುವ ರೈತ ಸಿರಿ ಯೋಜನೆಯ ಬಗ್ಗೆ ಪ್ರಚಾರ ಸಹ ಮಾಡಿದರು.
ಮಣ್ಣಿನ ಸವಕಳಿ ತಡೆಗಟ್ಟುವ, ಮಣ್ಣು ಪರೀಕ್ಷೆ ಮಾಡಿಸುವ ವಿಧಾನದ ಪ್ರಾತ್ಯಕ್ಷಿತೆ, ಜೈವಿಕ ಗೊಬ್ಬರಗಳು, ನೈಸರ್ಗಿಕ ಕೃಷಿಯ ವಿಧಾನ, ನೂತನ ಆವಿಷ್ಕಾರದ ಯಂತ್ರೋಪಕರಣಗಳ ಕಾರ್ಯಕ್ಷಮತೆ ಸೇರಿದಂತೆ ಮೀನುಗಾರಿಕೆ, ತೋಟಗಾರಿಕೆ ಪಶುಸಂಗೋಪನೆ ಕೃಷಿ, ತೋಟಗಾರಿಕೆ ಸೇರಿದಂತೆ ವಿವಧ ಇಲಾಖೆಗಳ ಸ್ಟಾಲ್‍ಗಳಿಗೆ ಭೇಟಿ ನೀಡಿ ಕುತೂಹಲದಿಂದ ವೀಕ್ಷಣೆ ಮಾಡಿದ ಸಾವಿರಾರು ರೈತರು ಅವುಗಳ ಬಳಕೆ ಬಗ್ಗೆ ತಿಳಿದುಕೊಂಡರು.
ಒಟ್ಟಾರೆ ನಿರಂತರ ಬರಕ್ಕೆ ತುತ್ತಾಗಿ ಕಂಗಾಲಾಗಿದ್ದ ರೈತರಿಗೆ ಎಂಪಿಎಸ್ ಮೈದಾನದಲ್ಲಿ ನಡೆದ ಕೃಷಿಮೇಳ ಖುಷಿ ತಂದುಕೊಟ್ಟಿತು. ಆಧುನಿಕ ತಂತ್ರಜ್ಞಾನ ಬಳಕೆ, ವಿಷಮುಕ್ತ ಆಹಾರ ಉತ್ಪಾದಿಸಿಕೊಡಲು ಸಾವಯವ ಕೃಷಿ, ಸಮಗ್ರ ಕೃಷಿಗೆ ಅಗತ್ಯ ಪ್ರಾಯೋಗಿಕವಾಗಿ ಮಾಹಿತಿ ಸಿಕ್ಕಿದ ಭಾವ ರೈತರಲ್ಲಿ ಕಂಡುಬಂತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
