ಬೆಂಗಳೂರು
ಕ್ಯಾನ್ಸರ್‍ನಿಂದ ಬಳಲುತ್ತಿರುವ ತಾಯಿಯನ್ನು ನೋಡಲು ಕೇರಳಕ್ಕೆ ತೆರಳಲು ಮಡಿವಾಳ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಶಂಕಿತ ಉಗ್ರ ಅಬ್ದುಲ್ ನಾಸೀರ್ ಮದನಿಗೆ ನ್ಯಾಯಾಲಯವು ಪೆರೋಲ್ ನೀಡಿದೆ.
ಮದನಿಯ ತಾಯಿ ಕಾನ್ಸರ್‍ನಿಂದ ಬಳಲುತ್ತಿದ್ದು, ಆಕೆಯನ್ನು ನೋಡುವ ಸಲುವಾಗಿ ಪೆರೋಲ್ ಅರ್ಜಿ ಹಾಕಿದ್ದ. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಷರತ್ತುಬದ್ಧ ಪೆರೋಲ್ ರಜೆ ಮೇಲೆ ತೆರಳಲು ಅನುಮತಿ ನೀಡಿದೆ.ಷರತ್ತಿನಲ್ಲಿ ಮದನಿಯು ಪೊಲೀಸ್ ಬೆಂಗಾವಲಿನಲ್ಲಿಯೇ ತೆರಳಬೇಕು. ಅಪರಿಚಿತ ವ್ಯಕ್ತಿಗಳು ಅಥವಾ ಸಂಘಟನೆಯೊಂದಿಗೆ ಮಾತನಾಡಬಾರದು ಎಂದು ಹೇಳಿ ಕೋರ್ಟ್ ಷರತ್ತು ವಿಧಿಸಿರುವುದಾಗಿ ತಿಳಿದುಬಂದಿದೆ.
ಅಬ್ದುಲ್ ನಾಸೀರ್ ಮದನಿ ಹಲವು ವರ್ಷಗಳ ಕಾಲ ಬಂಧಿತನಾಗಿ ನಂತರ ಮೆಡಿಕಲ್ ಬೇಲ್ ಮೇಲೆ ಪೊಲೀಸರ ಕಣ್ಗಾವಲಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಕೇರಳದ ಪಿಡಿಪಿ ನಾಯಕ ಮದನಿ ಮೇಲೆ ಉಗ್ರ ಚಟುವಟಿಕೆ, ಕೊಲೆ ಯತ್ನ, ಕೊಲೆ ಆರೋಪಗಳಿವೆ.2008ರ ಮಡಿವಾಳ ಸರಣಿ ಬಾಂಬ್ ಸ್ಫೋಟದ ಆರೋಪಿ ಮದನಿಗೆ 2017ರಲ್ಲಿ ಮಗನ ಮದುವೆ ಹಿನ್ನೆಲೆಯಲ್ಲಿ ಪೆರೋಲ್‍ಗೆ ಅನುಮತಿ ಸಿಕ್ಕಿತ್ತು
2010ರಿಂದಲೂ ಮದನಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರೂ ಜಾಮೀನು ಸಿಕ್ಕಿರಲಿಲ್ಲ. ಹೀಗಾಗಿ ಕೆಲ ವರ್ಷಗಳ ಹಿಂದೆ ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ. ಬೆಂಗಳೂರಿನಲ್ಲಿ ಸ್ವಂತ ಖರ್ಚಿನಲ್ಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಷರತ್ತು ವಿಧಿಸಿ ಮೆಡಿಕಲ್ ಬೇಲ್‍ಗೆ ಕೋರ್ಟ್ ಅನುಮತಿ ನೀಡಿತ್ತು.
ನಗರದ ಮನೆಯೊಂದರಲ್ಲಿ ಮದನಿ ಚಿಕಿತ್ಸೆ ಪಡೆಯುತ್ತಿದ್ದ. ಮಧುಮೇಹ, ರಕ್ತದೊತ್ತಡ ಸೇರಿದಂತೆ ಹಲವು ಕಾಯಿಲೆಗಳಿಂದ ಮದನಿ ಬಳಲುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ